ಸಿನಿಮಾ

ಬಿಳಿಗಿರಿರಂಗನಾಥಸ್ವಾಮಿ ದೊಡ್ಡಜಾತ್ರೆ ಇಂದು

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಬಿಳಿಗಿರಿರಂಗನಾಥಸ್ವಾಮಿಯ ಮಹಾರಥೋತ್ಸವ (ದೊಡ್ಡಜಾತ್ರೆ) ಗುರುವಾರ ನಡೆಯಲಿದೆ.

ಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿರಂಗನಬೆಟ್ಟವು ಪ್ರಾಕೃತಿಕ ಸೌಂದರ್ಯವನ್ನು ಹೊಂದಿದ್ದು, ಈ ಬೆಟ್ಟವನ್ನು ಚಂಪಕಾರಣ್ಯ, ಶ್ವೇತಾದ್ರಿ, ಬಿಳಿಕಲ್ಲುಬೆಟ್ಟ, ಬಿಳಿಗಿರಿ ಬೆಟ್ಟ ಎಂದೂ ಕರೆಯಲಾಗುತ್ತದೆ. ಬೆಟ್ಟದಲ್ಲಿ ಬಿಳಿಗಿರಿರಂಗನಾಥಸ್ವಾಮಿ ನೆಲೆಸಿದ್ದು, ಪ್ರತಿ ವರ್ಷ ದೊಡ್ಡಜಾತ್ರೆಯು ನಡೆಯುತ್ತದೆ. ಬಿಳಿಗಿರಿರಂಗನಬೆಟ್ಟವು ಯಳಂದೂರು ಪಟ್ಟಣ ಕೇಂದ್ರದಿಂದ 24 ಕಿ.ಮೀ. ದೂರದಲ್ಲಿದ್ದು ದಕ್ಷಿಣ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿದೆ. ಬೆಟ್ಟದಲ್ಲಿ ನೆಲೆಸಿರುವ ಬಿಳಿಗಿರಿರಂಗಸ್ವಾಮಿ ಹಾಗೂ ಅಲಮೇಲಮ್ಮನವರು ಈ ಪ್ರಾಂತ್ಯದ ಭಕ್ತರಿಗೆ ಆರಾಧ್ಯದೈವವಾಗಿದೆ.

ಗುರುವಾರ ಬೆಳಗ್ಗೆ 5 ಗಂಟೆಗೆ ಕಲ್ಯಾಣೋತ್ಸವ, 7ಕ್ಕೆ ಪ್ರಸ್ಥಾನ ಮಂಟಪೋತ್ಸವಗಳು ನಂತರ ಮಧ್ಯಾಹ್ನ 12.10 ಗಂಟೆೆ ಮೇಲೆ 12.24 ಗಂಟೆ ಒಳಗೆ ಸಲ್ಲುವ ಶುಭ ಕರ್ಕಾಟಕ ಲಗ್ನದ ಧನುರ್ಗುರು ನಾವಾಂಶ ಶುಭ ಮುಹೂರ್ತದಲ್ಲಿ ಡೋಲಾಯಮಾನಂ ಗೋವಿಂದಂ, ಮಂಚಸ್ಥಂ ಮಧುಸೂದನಂರಥಸ್ಥಂ ಕೇಶವಂ ಧೃಷ್ಠ್ವಾ ಪುನರ್ಜನ್ಮ ನವಿದ್ಯತೆ ಎಂಬ ಮರ್ಯಾದೆಯಲ್ಲಿ ಮಹಾರಥೋತ್ಸವ ಜರುಗಲಿದೆ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ಮಾಹಿತಿ ನೀಡಿದರು.

ರಥೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆ-ಹೊರ ಜಿಲ್ಲೆಗಳಿಂದ ಅಧಿಕ ಸಂಖ್ಯೆಯಲ್ಲಿ ಬೆಟ್ಟಕ್ಕೆ ಭಕ್ತರು ಆಗಮಿಸಲಿದ್ದು, ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಮೇಶ್ ಅವರು ಬಿಳಿಗಿರಿರಂಗನ ಬೆಟ್ಟಕ್ಕೆ ಮೇ 4ರಂದು ದ್ವಿಚಕ್ರ ವಾಹನಗಳಿಗೆ ತಾತ್ಕಾಲಿಕವಾಗಿ ನಿರ್ಬಂಧಿಸಿ ಆದೇಶಿಸಿದ್ದಾರೆ.

ಜಾತ್ರೆಗೆ ತೆರಳುವ ಭಕ್ತರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಯಳಂದೂರು ಪಟ್ಟಣದ ನಾಡಮೇಗಲಮ್ಮನ ದೇವಸ್ಥಾನದ ಆವರಣದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದು, ಕೆಎಸ್‌ಆರ್‌ಟಿಸಿಯು 80 ಬಸ್‌ಗಳ ವಿಶೇಷ ಸೇವೆ ಒದಗಿಸಲಿದೆ. ಬೆಟ್ಟದಲ್ಲಿ ಸುಗಮ ಸಂಚಾರಕ್ಕಾಗಿ ಅಲ್ಲಲ್ಲಿ ಬ್ಯಾರಿಕೇಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಬೆಟ್ಟದಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ನೀರಿನ ಅಭಾವ ಕಂಡುಬಂದ ಸಂದರ್ಭದಲ್ಲಿ ಟ್ಯಾಂಕರ್‌ಗಳ ಮೂಲಕ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಬಿಳಿಗಿರಿರಂಗನಬೆಟ್ಟ ಗ್ರಾ.ಪಂ. ಪಿಡಿಒ ಶಶಿಕಲಾ ಮಾಹಿತಿ ನೀಡಿದ್ದಾರೆ.

Latest Posts

ಲೈಫ್‌ಸ್ಟೈಲ್