More

  ಬಿಳಗಿ ಮಾರಿಕಾಂಬಾ ಜಾತ್ರೆ ಆರಂಭ

  ವಿಜಯವಾಣಿ ಸುದ್ದಿಜಾಲ ಸಿದ್ದಾಪುರ: ತಾಲೂಕಿನ ಬಿಳಗಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಶ್ರದ್ಧಾ- ಭಕ್ತಿಯಿಂದ ಬುಧವಾರ ವಿಧ್ಯುಕ್ತವಾಗಿ ಆರಂಭಗೊಂಡಿದೆ. ಅಂದು ಬೆಳಗ್ಗೆ ಜಾತ್ರಾ ಗದ್ದುಗೆಯಲ್ಲಿ ಮಾರಿಕಾಂಬಾ ದೇವಿ ವಿರಾಜಮಾನಳಾಗಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ.

  ಮಂಗಳವಾರ ರಾತ್ರಿ ಸ್ಥಳೀಯ ಹೊಳೆ ಚಪ್ಪರದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮವನ್ನು ಸಂಪ್ರದಾಯದಂತೆ ನಡೆಸಲಾಯಿತು. ನಂತರ ಶೃಂಗರಿಸಿದ ರಥದಲ್ಲಿ ಮಾರಿಕಾಂಬಾ ದೇವಿಯನ್ನು ಕೂರಿಸಿ ಜಾತ್ರಾ ಗದ್ದುಗೆಯವರೆಗೆ ಮೆರವಣಿಗೆಯ ಮೂಲಕ ತಂದು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು.

  ಈ ವೇಳೆ ವಂದಾನೆ, ಕ್ಯಾದಗಿ ಹಾಗೂ ಬಿಳಗಿ ಸೀಮೆಯ ವಿವಿಧ ಭಕ್ತರಿಂದ ಡೊಳ್ಳು ಕುಣಿತ, ಭಜನೆ, ಹಷೋದ್ಘಾರ ನಡೆಯಿತು. ಮೆರವಣಿಗೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಮೊಕ್ತೇಸರ ಶ್ರೀಧರ ಎನ್. ಹೆಗಡೆ ನೀರಗಾರ, ಅಧ್ಯಕ್ಷ ಡಾ. ರವಿ ಆರ್. ಹೆಗಡೆ ಹೂವಿನಮನೆ, ಪ್ರಧಾನ ಕಾರ್ಯದರ್ಶಿ ದಯಾನಂದ ಚಿನಿವಾರ, ದೇವಸ್ಥಾನ ಆಡಳಿತ ಮಂಡಳಿ ಹಾಗೂ ಜಾತ್ರಾ ಸಮಿತಿ ಸದಸ್ಯರು, ವಿವಿಧ ಯುವಕ- ಯುವತಿ ಮಂಡಳದ ಸದಸ್ಯರು, ಗ್ರಾಮಸ್ಥರು, ಊರವರು, ಸೀಮೆಯ ಭಕ್ತರು ಸೇರಿ ಸಾವಿರಾರು ಜನರು ಪಾಲ್ಗೊಂಡಿದ್ದರು.

  ಬುಧವಾರ ಬೆಳಗ್ಗೆ ದೇವಸ್ಥಾನ ಮೊಕ್ತೇಸರರ ಯಜಮಾನತ್ವದಲ್ಲಿ ಪುರೋಹಿತರಿಂದ ಪೂಜಾ ವಿಧಿ- ವಿಧಾನಗಳು ಜರುಗಿದವು. ಗ್ರಾಮಸ್ಥರಿಂದ ಪೂಜೆ ನೆರವೇರಿತು. ನಂತರ ಭಕ್ತಾದಿಗಳಿಂದ ಸೇವೆ ಪ್ರಾರಂಭಗೊಂಡಿತು.

  ಊರಲ್ಲಿ ಹೆಚ್ಚಿದ ಸಂಭ್ರಮ: ಬಿಳಗಿ ಮಾರಿಕಾಂಬಾ ದೇವಿಯ ಜಾತ್ರೆ ನಡೆಯುತ್ತಿರುವುದರಿಂದ ಬಿಳಗಿ ಹಾಗೂ ಸುತ್ತಲಿನ

  ಗ್ರಾಮಸ್ಥರ ಪ್ರತಿ ಮನೆಯಲ್ಲಿ ಹಬ್ಬದ ಸಂಭ್ರಮ. ದೇವಿಯ ದರ್ಶನ ಪಡೆಯಲು ವಿವಿಧೆಡೆಗಳಿಂದ ಆಗಮಿಸುವ ಭಕ್ತರು ತಮ್ಮ ನೆಂಟರಿಷ್ಟರ ಮನೆಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಸಿಹಿ ವಿತರಣೆ, ಮಹಿಳೆಯರಿಗೆ ಅರಿಶಿನ- ಕುಂಕುಮ ಹಚ್ಚಿ ಬಾಗಿನ ನೀಡಿ ಗೌರವಿಸುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

  ವಿಧಾನಸಭಾಧ್ಯಕ್ಷ ಕಾಗೇರಿ ಭೇಟಿ: ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಭೇಟಿ ನೀಡಿ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ರವಿ ಹೆಗಡೆ ಹೂವಿನಮನೆ, ಪ್ರಸನ್ನ ಹೆಗಡೆ, ನಾಗರಾಜ ನಾಯ್ಕ ಬೇಡ್ಕಣಿ, ಆದರ್ಶ ಎನ್.ಪೈ, ಎಸ್.ಆರ್.ನಾಯ್ಕ , ಗಜಾನನ ನಾಯ್ಕ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts