ಸಂಬರಗಿ: ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಜಾನುವಾರುಗಳ ಆಶ್ರಯಕ್ಕಾಗಿ ನಿರ್ಮಿಸಿದ ಶೆಡ್‌ಗಳ ಬಿಲ್ ಪಾವತಿ ವಿಳಂಬವಾದ ಹಿನ್ನೆಲೆಯಲ್ಲಿ ರೈತರು ಗ್ರಾಪಂ ಸಭಾ ಭವನದಲ್ಲಿ ಸೋಮವಾರ ಜಾನುವಾರು ಕಟ್ಟಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಫಲಾನುಭವಿಗಳು ಜಾನುವಾರುಗಳ ಆಶ್ರಯಕ್ಕಾಗಿ ಗ್ರಾಪಂ ವತಿಯಿಂದ ಶೆಡ್ ನಿರ್ಮಿಸಿಕೊಂಡಿದ್ದಾರೆ. ಬಿಲ್ ಪಾವತಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಶಿವಾನಂದ ಕಲ್ಲಾಪುರ, ಪ್ರತಿಭಟನಾ ನಿರತರ ಸಮಸ್ಯೆ ಆಲಿಸಿ ಕೂಡಲೇ ಜಾನುವಾರುಗಳ ಶೆಡ್ ಬಿಲ್ ಪಾವತಿ ಮಾಡಬೇಕು. ಅಲ್ಲದೇ, ಕರ್ತವ್ಯದಲ್ಲಿ ಬೇಜವಾಬ್ದಾರಿ ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒಗೆ ಎಚ್ಚರಿಕೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ಗ್ರಾಪಂ ಸದಸ್ಯರಾದ ಅಮೃತ ಮಿಸಾಳ್, ಸಾಗರ್ ಕೋಳಿ, ಮುಖಂಡರಾದ ವಿಟ್ಟಲ್ ಗಸ್ತಿ, ಮೋಹನ ಶೇಳಕಿ ಇತರರಿದ್ದರು.