ಬಿರುಗಾಳಿ ಸಹಿತ ಮಳೆಗೆ ಕಂಗೆಟ್ಟ ಜನತೆ

ಅಕ್ಕಿಆಲೂರ: ಪಟ್ಟಣ ಸೇರಿ ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಭಾರಿ ಬಿರುಗಾಳಿ ಸಮೇತ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿಗಳು ಹಾನಿಗೀಡಾಗಿವೆ.

ಅಕ್ಕಿಆಲೂರ ಸುತ್ತಲಿನ ಆಡೂರ, ಅರಳೇಶ್ವರ, ಹಾವಣಗಿ, ಹಿರೇಹುಲ್ಲಾಳ, ಬಾಳಂಬೀಡ ಇನ್ನೂ ಅನೇಕ ಕಡೆಗಳಲ್ಲಿ ಶನಿವಾರ ತಡರಾತ್ರಿ ಮತ್ತು ಭಾನುವಾರ ಸಂಜೆಯಿಂದ ರಾತ್ರಿಯಿಡೀ ಬಿರುಗಾಳಿ ಸಹಿತ ಮಳೆಗೆ ಹೊಲ, ಮನೆ, ವಿದ್ಯುತ್ ಕಂಬ ಹಾಗೂ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ.

ಆರಂಭದಲ್ಲಿ ಮೊಡ ಕವಿದು ಸಣ್ಣಗೆ ಬೀಸಿದ ಗಾಳಿ ನಂತರ ಬಿರುಸು ಪಡೆದುಕೊಂಡಿತು. ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಗಿಡ-ಮರ, ಶಿಥಿಲಾವಸ್ಥೆಯಲ್ಲಿನ ಮನೆಗಳು ಬೀಳತೊಡಗಿದವು. 1 ಗಂಟೆಗೂ ಅಧಿಕ ಕಾಲ ಬಿಸಿದ ಗಾಳಿಯಿಂದ ಸಾರ್ವಜನಿಕರು ಕಂಗಾಲಾದರು. ಅಬ್ಬರದ ಗಾಳಿ ಮಳೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದ ವಿದ್ಯುತ್ ಕಂಬ ಮತ್ತು ಬೃಹತ್ ಪ್ರಮಾಣದ ಮರವೊಂದು ಧರೆಗುರುಳಿತು.

ಹಾರಿಹೋದ ಹೆಂಚು: ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದ ಮುಖ್ಯದ್ವಾರದ ಮೇಲಿನ ಹೆಂಚುಗಳು ಹಾರಿಹೋದವು. ಜ್ಞಾನ ಭಾರತಿ ಶಾಲೆ ದಾರಿಯಲ್ಲಿ ಬೇವಿನಮರ ನೆಲಕ್ಕುರುಳಿ ವಿದ್ಯುತ್ ತಂತಿಗಳು ಹರಿದು ರಸ್ತೆಯಲ್ಲಿ ಬಿದ್ದವು. ಹತ್ತಾರು ಮನೆಗಳ ಗೋಡೆಗಳು ಕುಸಿದಿವೆ. ಬಸ್ ನಿಲ್ದಾಣದ ಚಹಾ ಅಂಗಡಿಯೊಂದರ ತಗಡು ಹಾರಿ ಹೋಗಿದೆ. ಕಲ್ಲಾಪುರ ವೃತ್ತದಲ್ಲಿನ ಸಂಗಮೇಶ್ವರ ನಾಟ್ಯ ಕಂಪನಿಯ ಶೆಡ್​ಗೂ ಹಾನಿಯಾಗಿದೆ. ಅಂಗಡಿ ಮುಂಗಟ್ಟುಗಳ ನಾಮಫಲಕಗಳು ನೆಲಕಚ್ಚಿವೆ. ಮುಖ್ಯ ಅಂಚೆ ಕಚೇರಿ ಎದುರಿನ ಮರಗಳ ರಾಶಿ ರಾಶಿ ಎಲೆಗಳು ಕುಮಾರ ನಗರದ ಗಲ್ಲಿಗಳಲ್ಲಿ ಹರಡಿಕೊಂಡಿವೆ.

ಪವರ್ ಇಲ್ಲದೇ ಪರದಾಟ: ವಿದ್ಯುತ್ ಕಂಬಗಳು ಬಿದ್ದು, ತಂತಿಗಳು ಅಲ್ಲಲ್ಲಿ ಹರಿದ ಪರಿಣಾಮ ಭಾನುವಾರ ಸಂಜೆ ಕಡಿತವಾದ ವಿದ್ಯುತ್ ಸೋಮವಾರ ಮಧ್ಯಾಹ್ನದವರೆಗೂ ಬರಲಿಲ್ಲ. ಹೀಗಾಗಿ ಜನತೆ ಕತ್ತಲಲ್ಲೇ ದಿನ ದೂಡುವಂತಾಯಿತು. ವಿಪರೀತ, ಗಾಳಿ- ಮಳೆ ಇದ್ದುದರಿಂದ ರಾತ್ರಿ ಮನೆ ಬಿಟ್ಟು ಹೊರ ಬರಲಾಗದೆ ಪರದಾಡಿದರು. ಬಹುತೇಕರ ಮೊಬೈಲ್​ಗಳು ಚಾರ್ಜ್ ಇಲ್ಲದೆ ಇತರರನ್ನು ಸಂರ್ಪಸಲಾಗದೆ ಜನತೆ ಸಮಸ್ಯೆ ಎದುರಿಸಿದರು.

ಕಂಗಾಲಾದ ರೈತ
ಶನಿವಾರ ಮತ್ತು ಭಾನುವಾರ ಬಿಸಿದ ಗಾಳಿ ಮತ್ತು ಅಕಾಲಿಕ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ಬೆಳೆಗಳು ನಾಶವಾಗಿವೆ. ನೀರಾವರಿ ಸೌಲಭ್ಯದಿಂದ ಬೆಳೆದ ರೈತರ ಗೋವಿನಜೋಳ, ಬಾಳೆ ಮತ್ತು ಅಡಕೆ ಮರಗಳು ಸಂಪೂರ್ಣ ಹಾನಿಗೀಡಾಗಿವೆ. ಡೊಳ್ಳೇಶ್ವರ, ಹಾವಣಗಿ, ಅಕ್ಕಿಆಲೂರ, ಇನಾಂಯಲ್ಲಾಪುರ ಗ್ರಾಮ ಸೇರಿ ಅನೇಕ ಕಡೆಗಳಲ್ಲಿ ಎಕರೆಗಟ್ಟಲೇ ಫಲ ಬಂದಿದ್ದ ಬಾಳೆ ಅಡಕೆ ಮರಗಳು ನೆಲೆಕ್ಕುರುಳಿವೆ. ಪಟ್ಟಣದ ರೈತ ಶ್ರೀಕಾಂತ ಕೋರಿಶೆಟ್ಟರ್ ಅವರಿಗೆ ಸೇರಿದ 3 ಎಕೆರೆಯ ಬಾಳೆ, ಅಡಕೆ ಬಹುತೇಕ ನಾಶವಾಗಿವೆ. ಎರಡು ದಿನದಿಂದ ಸಂಜೆಯಾಗುತ್ತಿದಂತೆ ಸುರಿಯುತ್ತಿರುವ ಅಕಾಲಿಕ ಮಳೆ ಮತ್ತು ಬಿರುಗಾಳಿ ಈ ಭಾಗದ ಜನತೆಯ ಆತಂಕಕ್ಕೆ ಕಾರಣವಾಗಿದೆ.

ಅಕಾಲಿಕ ಮಳೆ- ಗಾಳಿಗೆ ಸಾಕಷ್ಟು ಬೆಳೆ ಹಾನಿಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ನಾನು ಹಾಗೂ ತಹಸೀಲ್ದಾರ್, ಗ್ರಾಮಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ತುರ್ತು ಸಭೆ ಕರೆದಿದ್ದೇವೆ. ಎಲ್ಲೆಲ್ಲಿ ಹಾನಿಯಾಗಿದೆ ಎಂದು ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವ ಕುರಿತು ಚಿಂತನೆ ನಡೆಸಲಾಗಿದೆ.
| ಮಂಜುನಾಥ ಬಣಕಾರ, ತಾಲೂಕು ತೋಟಗಾರಿಕೆ ಅಧಿಕಾರಿ