More

    ಬಿರುಗಾಳಿ ಮಳೆಗೆ ಗುಬ್ಬಿ, ತುರುವೇಕೆರೆಯಲ್ಲಿ ನೆಲಕಚ್ಚಿದ ಮರ ಹಾಗೂ ವಿದ್ಯುತ್​ ಕಂಬ

    ಗುಬ್ಬಿ:ಬಿರುಗಾಳಿ ಗಾಳಿ, ಮಳೆಗೆ ಮೈಸೂರು ರಸ್ತೆಯ ಬೆಲವತ್ತದಲ್ಲಿ ಬೃಹತ್​ ಮರಗಳು ರಸ್ತೆಗೆ ಅಡ್ಡವಾಗಿ ಬಿದ್ದು, ಸಂಚಾರಕ್ಕೆ ಅಡ್ಡಿಯಾಗಿತ್ತು.

    ರಸ್ತೆಗೆ ಮರಗಳು ಉರುಳಲು ರಸ್ತೆ ಕಾಮಗಾರಿ ಮಾಡಿದ ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾರಣ ಎಂದು ಆರೋಪಿಸಿದ ಗ್ರಾಮಸ್ಥರು ಉರುಳಿರುವ ವಿದ್ಯುತ್​ ಕಂಬ ಹಾಗೂ ಮರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ತೆರವುಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಕಿಲೋ ಮೀಟರ್​ ಗಟ್ಟಲೆ ವಾಹನಗಳು ಸಾಲು ನಿಂತಿದ್ದವು.

    ಮುಖಂಡ ಚೆನ್ನಿಗರಾಮಯ್ಯ ಮಾತನಾಡಿ, ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಗುತ್ತಿಗೆದಾರರು ಹಾಗೂ ಮೇಲ್ವಿಚಾರಕರು ಸ್ಥಳಿಯರ ಮಾತನ್ನು ಕೇಳದೆ ಅವರಿಗೆ ಮನಸ್ಸಿಗೆ ಬಂದಂತೆ ಕೆಲಸ ಮಾಡಿರುವುದರಿಂದ ಅವಡ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಗ್ರಾಮಸ್ಥ ಶಿವಣ್ಣಗೌಡ ಮಾತನಾಡಿ, ರಸ್ತೆ ಅಭಿವೃದ್ಧಿ ಮಾಡುವಾಗ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ರಸ್ತೆಯ ಬದಿ ಮರಗಳಿರುವ ಜಾಗದಲ್ಲಿ ಆಳವಾಗಿ ಮಣ್ಣು ತೆಗೆದಿರುವುದರಿಂದ ಮರಗಳು ಬೀಳಲು ಕಾರಣವಾಗಿದೆ. ಜೀವ ಹಾನಿಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

    ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಸಹಾಯಕ ಇಂಜಿನಿಯರ್​ ವಿಜಯ್​ ಕುಮಾರ್​ ಮಾತನಾಡಿ, ಗುತ್ತಿಗೆದಾರನ ಲೋಪದಿಂದಾಗಿ ಅಧಿಕಾರಿಗಳು ತಲೆತಗ್ಗಿಸುವಂತಾಗಿದೆ. ರಸ್ತೆ ಬದಿ ಗುಂಡಿಗಳಿಗೆ ಮಣ್ಣು ತುಂಬಿಸುತ್ತೇವೆ. ಅರಣ್ಯ ಇಲಾಖೆ ಸಹಕಾರ ಪಡೆದು ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆಗೆಸಿ ಹೊಸ ಸಸಿಗಳನ್ನು ಇಲಾಖೆಯಿಂದಲೇ ನೆಡಲಾಗುವುದು ಎಂದು ಸಮಾಧಾನಪಡಿಸಿದರು.
    ವಲಯಾರಣ್ಯಾಧಿಕಾರಿ ದುಗ್ಗಪ್ಪ, ಗ್ರಾಪಂ ಸದಸ್ಯ ರಾಜಶೇಖರ್​, ಮುಖಂಡರಾದ ನರಸಿಂಹಮೂರ್ತಿ, ಶಿವಕುಮಾರ್​, ವಿಜಯ್​, ಚಿನ್ನಸ್ವಾಮಿ, ಲೋಕೇಶ್​ ಇದ್ದರು.

    ನಮ್ಮದಲ್ಲದ ತಪ್ಪಿಗೆ ಇಡೀ ರಾತ್ರಿ ನಾವು ರಸ್ತೆಯಲ್ಲಿಯೇ ಕಾಲಕಳೆಯುವಂತಾಗಿದೆ. ಊಟ, ತಿಂಡಿ ಸಿಗದೆ ಉಪವಾಸ ಇರುವಂತಾಗಿದೆ. ಸ್ಥಳಿಯರು ಹಾಗೂ ಪೊಲೀಸರು ನಮಗೆ ಸ್ಪಂದಿಸುತ್ತಿಲ್ಲ. ನಾವು ಏನು ಮಾಡುವುದು ತೋಚದಂತಾಗಿದೆ.
    > ಬಸವರಾಜು, ಲಾರಿ ಚಾಲಕ

    ತುರುವೇಕೆರೆ: ತಾಲೂಕಿನ ಹಲವೆಡೆ ಮಂಗಳವಾರ ರಾತ್ರಿ ಸುರಿದ ಗಾಳಿ, ಮಳೆಗೆ ತೆಂಗಿನ ಮರ ಬಿದ್ದು ವಿದ್ಯುತ್​ ಕಂಬಗಳು ನೆಲಕಚ್ಚಿವೆ.

    ರಾತ್ರಿ ಬಿರುಗಾಳಿ ಸಿಡಿಲಿನೊಂದಿಗೆ ಶುರುವಾದ ಮಳೆಯಿಂದ ಮುಗಳೂರಿನ ಹೊರ ವಲಯದಲ್ಲಿ ಮರದ ಕೊಂಬೆ ಮುರಿದು ಬಿದ್ದು ನಿರಂತರ ಜ್ಯೋತಿ ವಿದ್ಯುತ್​ ಲೈನ್​ ಕೇಬಲ್​ ತುಂಡಾಗಿದೆ. ಹರಿದಾಸನಹಳ್ಳಿ ತೋಟದ ಸಾಲುಗಳಲ್ಲಿ 2, ಮಣೆಚಂಡೂರು ತೊರೆಪಕ್ಕದ ತೋಟ ಸಾಲುಗಳಲ್ಲಿ 3, ಸಂಪಿಗೆ ಆಸುಪಾಸಿನಲ್ಲಿ 4, ಮುತ್ತುಗದಹಳ್ಳಿ ಹೊರ ವಲಯದಲ್ಲಿ 4 ಒಟ್ಟು 13 ವಿದ್ಯುತ್​ ಕಂಬಗಳು ಮುರಿದು, ಲೈನ್​ಗಳು ತುಂಡರಿಸಿ ವಿದ್ಯುತ್​ ವ್ಯತ್ಯಯವಾಗಿದೆ. ಬುಧವಾರ ಬೆಳಗ್ಗೆ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವಿದ್ಯುತ್​ ಪೂರೈಕೆ ಮಾಡಿದ್ದಾರೆ.
    ಅಲ್ಲದೆ ಪಟ್ಟಣದ ಕೆಲ ಅಂಗಡಿಗಳ ಫಲಕ ಮತ್ತು ಅಂಬೇಡ್ಕರ್​ ವೃತ್ತದಲ್ಲಿ ಹಾಕಿದ್ದ ಹತ್ತಾರು ಫ್ಲೆಕ್ಸ್​ ಬೋರ್ಡ್​ಗಳು ಕಿತ್ತು, ಗಾಳಿಯಲ್ಲಿ ಹಾರಿಹೋಗಿವೆ. ರಸ್ತೆ ಬದಿಯ ವ್ಯಾಪಾರಿಗಳು ತಮ್ಮವಸ್ತುಗಳನ್ನು ಮಳೆ ಗಾಳಿಯಿಂದ ತಪ್ಪಿಸಿಕೊಳ್ಳಲು ಪರದಾಡಿದರು.

    ತಾಲೂಕಿನಾದ್ಯಂತ ಮಳೆಯಾಗುತ್ತಿರುವುದರಿಂದ ತೆಂಗು, ಅಡಕೆ, ಬಾಳೆಗಳು ನಳನಳಿಸುತ್ತಿವೆ. ಅಶ್ವಿನಿ ಮಳೆಯು ಅಲ್ಲಲ್ಲಿ ಸಾಧಾರಣವಾಗಿ ಬೀಳುತ್ತಿರುವ ಹಿನ್ನೆಲೆಯಲ್ಲಿ ರೈತರು ಹೊನ್ನಾರು ಹೂಡಿ ಪೂರ್ವ ಮುಂಗಾರಿಗೆ ಭೂಮಿಯನ್ನು ಹದ ಮಾಡಿಕೊಳ್ಳುತ್ತಿದ್ದಾರೆ. ದಂಡಿನಶಿವರ 25.7, ಸಂಪಿಗೆ 28.4, ದಬ್ಬೇಟ್ಟ 16.2, ಮಾಯಸಂದ್ರ 12.8, ತುರುವೇಕೆರೆ 8 ಮಿ.ಮೀಟರ್​ ಮಳೆಯಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts