ಬಿರುಗಾಳಿ ಮಳೆ, ಸಿಡಿಲಿಗೆ 7 ಬಲಿ: ಬೀದರ್, ಬಾಗಲಕೋಟೆ, ದಾವಣಗೆರೆಯಲ್ಲಿ ಹಾನಿ

ಬೆಂಗಳೂರು: ರಾಜ್ಯದಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಮಂಗಳವಾರ ಒಟ್ಟು ಏಳು ಮಂದಿ ಸಿಡಿಲಿಗೆ ಬಲಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬೀದರ್ ಜಿಲ್ಲೆ ಭಾಲ್ಕಿಯ ತಳವಾಡದ ರೈತ ಮಾದಪ್ಪ (57), ಹುಲಸೂರು ಮೋರಂಬಿ ಗ್ರಾಮದ ಭಾಗ್ಯಶ್ರೀ (18), ದುಬಳಗುಂಡಿಯ ದಯಾನಂದ್ ಸಿರಸಿ(35), ಯಾದಗಿರಿ ಜಿಲ್ಲೆ ಸೈದಾಪುರ ಬಳಿಯ ಮಾಧ್ವಾರ ಹೊರವಲಯದ ಅಶೋಕ ಹೊಟ್ಟೆಬಾಲಪ್ಪನೂರ (32) ಹಾಗೂ ಶೇಖರ ಜಂಬಕ್ಕನೂರ (30), ಕಲಬುರಗಿ ಜಿಲ್ಲೆ ಶಹಾಬಾದ್​ನ ಕೊಂಚೂರ ರಸ್ತೆಯಲ್ಲಿ ಬರುತ್ತಿದ್ದ ಹಲಕರ್ಟಿಯ ದೊಡ್ಡಲಕ್ಷ್ಮಯ್ಯ ಭೀಮಯ್ಯ (60), ದಾವಣಗೆರೆ ಜಿಲ್ಲೆ ಜಗಳೂರಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ಮೇವು ತರಲು ಹೋಗಿದ್ದ ಚಂದ್ರಪ್ಪ (55) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಶಹಾಬಾದ್ ತಾಲೂಕಿನ ಮುತ್ತಗಾದಲ್ಲಿ ಮನೆಯಲ್ಲಿದ್ದ ಸರಸ್ವತಿ ಸಿದ್ದಣ್ಣ ಹಳ್ಳಿ(70) ಎಂಬವರಿಗೆ ಸಿಡಿಲು ಬಡಿದು ಬೆನ್ನಿಗೆ ಸುಟ್ಟ ಗಾಯವಾಗಿದೆ. ವಿಜಯಪುರ ಜಿಲ್ಲೆ ಸಿಂದಗಿ ಮಲಘಾಣ ರಸ್ತೆ ಸಮೀಪದ ಸಿರಾಜ್ ಬಾಬುಸಾಬ ಮತ್ತೂರ (25) ಗಾಯಗೊಂಡಿದ್ದಾರೆ.

ಬೈಕ್ ಮೇಲೆ ಬಿದ್ದ ನೀರಿನ ಟ್ಯಾಂಕ್: ಕಲಬುರಗಿ ಜಿಲ್ಲೆ ಜೇವರ್ಗಿ ಜೂನಿಯರ್ ಕಾಲೇಜು ಬಳಿ ಮಹಡಿ ಮೇಲಿದ್ದ ನೀರಿನ ಟ್ಯಾಂಕ್ ಹಾರಿ ಬೈಕ್ ಸವಾರನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಅಪಾಯ ಆಗಿಲ್ಲ.

ದಾವಣಗೆರೆ ಜಿಲ್ಲೆಯ ಕೆಲವೆಡೆ ಕಟಾವಿಗೆ ಬಂದಿದ್ದ ಭತ್ತದ ಪೈರು ಹಾನಿಗೀಡಾಗಿದೆ. ಹರಪನಹಳ್ಳಿಯಲ್ಲಿ ಮರಗಳು ಉರುಳಿವೆ. ರಾಯಚೂರಿನ ಕಡಗಂದೊಡ್ಡಿಯಲ್ಲಿ ಬಿರುಗಾಳಿ ಸಹಿತ ಮಳೆಗೆ 2 ಗುಡಿಸಲು ಜಖಂ ಆಗಿವೆ. ಕವಿತಾಳದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬ್ಯಾಗವಾಟದಲ್ಲಿ ಸಿಡಿಲಿಗೆ ಬೇವಿನ ಮರ ಹೊತ್ತಿ ಉರಿದಿದೆ. ಬಾಗಲಕೋಟೆ ಹಾಗೂ ಬಳ್ಳಾರಿಯ ಚಿನ್ನಾಪುರದಲ್ಲಿ ಸಿಡಿಲಿಗೆ ತೆಂಗಿನಮರಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಸಂಡೂರಿನಲ್ಲಿ 3 ಮರಗಳು ಉರುಳಿದ್ದು, ಕೊಂಡಾಪುರದಲ್ಲಿ 10ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಹಾರಿವೆ. ಬಾದಾಮಿಯ ಹೆಬ್ಬಳ್ಳಿಯಲ್ಲಿ ಭಾರಿ ಮಳೆ-ಗಾಳಿಗೆ ದುರ್ಗಾದೇವಿ ರಥದ ಶೆಡ್​ನ ಪತ್ರಾಸ್​ಗಳು ಹಾರಿ ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ಐದಕ್ಕೂ ಹೆಚ್ಚು ಕಂಬಗಳು ನೆಲಕ್ಕುರುಳಿವೆ. ವಿಜಯಪುರ, ಗದಗ, ಮೈಸೂರು, ರಾಮನಗರ, ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆ ಆಗಿದೆ.

ಮಳೆ ಮುನ್ಸೂಚನೆ

ಬಳ್ಳಾರಿ, ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಬುಧವಾರ ಮತ್ತೆ ಮಳೆ ಆಗಲಿದೆೆ.

ಬಿಸಿಲಿಗೆ ಬೆದರಿದ ಕಲಬುರಗಿ

ಕಲಬುರಗಿಯಲ್ಲಿ ಮಳೆ ನಡುವೆಯೂ ಬಿರು ಬಿಸಿಲಿನ ಧಗೆ ಜನರ ಬೆವರಿಳಿಸಿದೆ. ನಾಲ್ಕೈದು ದಿನಗಳಿಂದ ಉಷ್ಣಾಂಶ 44-45 ಡಿ.ಸೆ. ಅಸುಪಾಸಿನಲ್ಲಿದೆ. ಮಂಗಳವಾರ 44.5 ಡಿ.ಸೆ. ಉಷ್ಣಾಂಶ ದಾಖಲಾಗಿದ್ದು, ತೀವ್ರ ಸೆಕೆ, ಬಿಸಿ ಗಾಳಿಯಿಂದ ಜನರು ಕಂಗಾಲಾಗಿದ್ದಾರೆ.

Leave a Reply

Your email address will not be published. Required fields are marked *