ಬಿರುಗಾಳಿ ಮಳೆಗೆ 80 ಹೆಕ್ಟೇರ್ ಬಾಳೆ ನಾಶ

ಗದಗ: ಗದಗ ಜಿಲ್ಲೆಯ ವಿವಿಧೆಡೆ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ 75ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ನಾಶವಾಗಿದೆ. ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದ ಬಾಳೆ ಬೆಳೆಗಾರರು ಕಂಗಾಲಾಗಿದ್ದಾರೆ.

ತಾಲೂಕಿನ ಹುಲಕೋಟಿ, ಹರ್ತಿ, ದುಂದೂರ, ಹೊಸೂರ, ಹೊಸಹಳ್ಳಿ, ಶಾಗೋಟಿ ಗ್ರಾಮ ಸೇರಿ ಜಿಲ್ಲೆಯ ವಿವಿಧೆಡೆ ಬೆಳೆಯಲಾಗಿದ್ದ ಬಾಳೆ ಸಂಪೂರ್ಣ ನೆಲಕಚ್ಚಿದೆ. ಇನ್ನೊಂದು ತಿಣಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಬೇಕಿದ್ದ ಬಾಳೆ ಬಿರುಗಾಳಿ ಮಳೆಗೆ ಸಿಲುಕಿ ಮಣ್ಣುಪಾಲಾಗಿವೆ.

ತಾಲೂಕಿನ ಹುಲಕೋಟಿ, ಹರ್ತಿ ಸೇರಿ ಪಕ್ಕದ ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆ ಬೆಳೆಯಲಾಗಿದೆ. ಹುಲಕೋಟಿ, ಹೊಸಹಳ್ಳಿ ಗ್ರಾಮದಲ್ಲಿ ಬೆಳೆದಿದ್ದ 8 ತಿಂಗಳ ಬಾಳೆ ಗಿಡದಲ್ಲಿನ ಗೊನೆಗಳು 45-50 ಕೆಜಿ ತೂಕ ಹೊಂದಿದ್ದವು. ಇನ್ನೊಂದು ತಿಂಗಳಲ್ಲಿ ಕಟಾವು ಮಾಡಿ ಉತ್ತಮ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆ ಬರ ಸಿಡಿಲು ಬಡಿದಂತಾಗಿದೆ.

ಶುಕ್ರವಾರ ಬೆಳಗ್ಗೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಲ್. ಪ್ರದೀಪ್ ಸೇರಿ ವಿವಿಧ ಅಧಿಕಾರಿಗಳು ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಸ್ತೆ ಸಂಚಾರ ಬಂದ್
ಗುರುವಾರ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ವಿವಿಧೆಡೆ ಗಿಡ-ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಗದಗ ತಾಲೂಕಿನ ನರಸಾಪುರ ಗ್ರಾಮದಲ್ಲಿ ಒಳಚರಂಡಿ ಕಾಮಗಾರಿಗೆ ರಸ್ತೆ ಮಧ್ಯ ಅಗೆದಿದ್ದ ಗುಂಡಿಗಳು ಸರಿಯಾಗಿ ಮುಚ್ಚದ ಕಾರಣ ಭೂಕುಸಿತ ಉಂಟಾಗಿ ಕಾರು , ದ್ವಿಚಕ್ರ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಶುಕ್ರವಾರ ಮಧ್ಯಾಹ್ನದ ವರೆಗೂ ರಸ್ತೆ ಸಂಚಾರ ಬಂದ್ ಆಗಿತ್ತು.

ನಮ್ಮ ತಂದೆ ಹೆಸರಿನಲ್ಲಿದ್ದ 2 ಎಕರೆ, ನನ್ನ ಹಾಗೂ ನನ್ನ ತಮ್ಮನ ತಲಾ 1 ಎಕರೆ ಸೇರಿ 4 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದೆವು. ಬಾಳೆ ಗಿಡದ ಗೊನೆಯು 45-50 ಕೆಜಿ ವರೆಗೂ ಇತ್ತು. ಇನ್ನೊಂದು ತಿಂಗಳಲ್ಲಿ ಬಾಳೆ ಕಟಾವಿಗೆ ಬರುತ್ತಿತ್ತು. ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ 4 ಎಕರೆ ಪ್ರದೇಶದ ಬಾಳೆ ಸಂಪೂರ್ಣ ನಾಶವಾಗಿದೆ. ಅಂದಾಜು 20 ಲಕ್ಷ ರೂ. ನಷ್ಟವಾಗಿದೆ.
-ಶಿವಪ್ಪ ಅಚ್ಚಳ್ಳಿ, ಬಾಳೆ ಬೆಳೆಗಾರ.

ಗುರುವಾರ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಹುಲಕೋಟಿ, ಹರ್ತಿ, ದುಂದೂರ ಸೇರಿ ಜಿಲ್ಲೆಯ 75ರಿಂದ 80 ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆದಿದ್ದ ಬಾಳೆ ಬೆಳೆ ನಾಶವಾಗಿದೆ. ಬಾಳೆ ಗಿಡಗಳು ನೆಲಕಚ್ಚಿದ್ದು ಅಂದಾಜು 1 ಕೋಟಿ ರೂ. ನಷ್ಟವಾಗಿರಬಹುದು ಎಂದು ಅಂದಾಜಿಸಿದ್ದು, ಇನ್ನು ಅನೇಕ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
-ಎಲ್. ಪ್ರದೀಪ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

Leave a Reply

Your email address will not be published. Required fields are marked *