ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳ

ಆಸ್ತಿಗಳ ಹೆಚ್ಚಳವಾದಂತೆ ಆಸ್ತಿ ತೆರಿಗೆ ಸಂಗ್ರಹವೂ ಹೆಚ್ಚುತ್ತಿದೆ. ಕಳೆದ ವರ್ಷ ಎರಡು ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣ ಸಂಗ್ರಹವಾಗಿತ್ತು. ಈ ಆರ್ಥಿಕ ವರ್ಷದ ಮೊದಲ ತಿಂಗಳಲ್ಲೇ ಒಂದು ಸಾವಿರ ಕೋಟಿ ರೂ. ಸಂಗ್ರಹಗೊಂಡಿದ್ದು, ಈ ಬಾರಿ ಎರಡು ಸಾವಿರ ಕೋಟಿ ರೂ. ಮೀರುವ ನಿರೀಕ್ಷೆಯಿದೆ.

| ಗಿರೀಶ ಗರಗ

ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿಗೆ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳು ಫಲ ನೀಡುತ್ತಿವೆ. ಪ್ರಮುಖವಾಗಿ ಆಸ್ತಿ ತೆರಿಗೆ ಪಾವತಿದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಪಾಲಿಕೆ ಆದಾಯವೂ ವೃದ್ಧಿಯಾಗುವಂತಾಗಿದೆ. ಬೆಂಗಳೂರು ದಿನೇ ದಿನೆ ಬೆಳೆಯುತ್ತಿದೆ. ಅದರ ಜತೆಗೆ ಆಸ್ತಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಆದರೆ, ತೆರಿಗೆ ಪಾವತಿದಾರರ ಸಂಖ್ಯೆ ಮಾತ್ರ ಹೆಚ್ಚಳವಾಗಿರಲಿಲ್ಲ. ಹೀಗಾಗಿಯೇ ಬಿಬಿಎಂಪಿ ಅಧಿಕಾರಿಗಳು ಕಳೆದ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳನ್ನು ಮರು ಲೆಕ್ಕ ಹಾಕಿದ್ದು, ಅದರಿಂದ 16 ಲಕ್ಷವಿದ್ದ ಆಸ್ತಿಗಳ ಸಂಖ್ಯೆ 19 ಲಕ್ಷಕ್ಕೆ ಹೆಚ್ಚಳವಾಗುವಂತಾಗಿತ್ತು. ಆಸ್ತಿಗಳ ಹೆಚ್ಚಳವಾದಂತೆ ಆಸ್ತಿ ತೆರಿಗೆ ಸಂಗ್ರಹವೂ ಹೆಚ್ಚಳವಾಗಿದ್ದು, 2 ಸಾವಿರ ಕೋಟಿ ರೂ. ಗಡಿದಾಟದ ತೆರಿಗೆ ಸಂಗ್ರಹ ಮೊತ್ತ ಕಳೆದ ವರ್ಷ 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣ ಸಂಗ್ರಹವಾಗುವಂತಾಗಿತ್ತು.

ಈ ವರ್ಷ ಇನ್ನಷ್ಟು ಹೆಚ್ಚಳದ ನಿರೀಕ್ಷೆ: 2018-19ನೇ ಸಾಲಿನಲ್ಲೂ ಆಸ್ತಿ ತೆರಿಗೆ ಸಂಗ್ರಹದ ಪ್ರಮಾಣ ಹೆಚ್ಚಳದ ನಿರೀಕ್ಷೆ ಹೊಂದಲಾಗಿದೆ. ಅದರಂತೆ ಈ ಬಾರಿಯ ಆರ್ಥಿಕ ವರ್ಷದ ಮೊದಲನೇ ತಿಂಗಳಲ್ಲೇ ಒಂದು ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಅಲ್ಲದೆ, ಈವರೆಗೆ 1,200 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ವರ್ಷ ಮುಗಿಯಲು ಇನ್ನೂ 10 ತಿಂಗಳು ಬಾಕಿಯಿದ್ದು, ಅಷ್ಟರೊಳಗೆ ಈ ವರ್ಷದ ಗುರಿಯಾದಂತಹ 2,200 ಕೋಟಿ ರೂ.ಗೂ ಹೆಚ್ಚಿನ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ.

ಟೋಟಲ್ ಸ್ಟೇಷನ್ ಸರ್ವೆ: ಬೃಹತ್ ಕಟ್ಟಡಗಳಿಂದಾಗುತ್ತಿರುವ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಲು ಬಿಬಿಎಂಪಿ ಟೋಟಲ್ ಸ್ಟೇಷನ್ ಸರ್ವೆ ನಡೆಸಿದೆ. ಅದರಂತೆ ಈವರೆಗೆ 50 ಕಟ್ಟಡಗಳ ಸರ್ವೆ ನಡೆಸಲಾಗಿದ್ದು, ಅವುಗಳಲ್ಲಿ 15ಕ್ಕೂ ಹೆಚ್ಚಿನ ಕಟ್ಟಡಗಳಿಗೆ ವಂಚಿತ ತೆರಿಗೆ ಮೊತ್ತವನ್ನು ದಂಡ ಸಹಿತ ಪಾವತಿಸುವಂತೆ ಡಿಮ್ಯಾಂಡ್ ನೋಟೀಸ್ ನೀಡಲಾಗಿದೆ. ಹಾಗೆಯೇ, ಉಳಿದ ಕಟ್ಟಡಗಳ ಸರ್ವೆ ವರದಿ ಪರಿಶೀಲಿಸಲಾಗುತ್ತಿದೆ. ಅವುಗಳಿಂದ ಅಂದಾಜು 500 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹದ ಕುರಿತು ಬಿಬಿಎಂಪಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಆನ್​ಲೈನ್ ವ್ಯವಸ್ಥೆ ಸಹಕಾರಿ

2015-16ನೇ ಸಾಲಿಗೂ ಮುಂಚೆ ತೆರಿಗೆದಾರರು ಬಿಬಿಎಂಪಿ ಕಚೇರಿಯಲ್ಲಿ ಚಲನ್ ಪಡೆದು ಬ್ಯಾಂಕ್​ಗಳಿಗೆ ತೆರಳಿ ತೆರಿಗೆ ಪಾವತಿಸಬೇಕಿತ್ತು. ಆದರೆ, ಅದರಿಂದ ತೆರಿಗೆದಾರರಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತಿತ್ತು. ಹೀಗಾಗಿಯೇ ಬಿಬಿಎಂಪಿ ಆನ್​ಲೈನ್ ತೆರಿಗೆ ಪಾವತಿ ವ್ಯವಸ್ಥೆ ಜಾರಿಗೆ ತಂದಿದ್ದು, ಅದರಿಂದಾಗಿ ಆಸ್ತಿ ಮಾಲೀಕರು ಬಿಬಿಎಂಪಿ ಕಚೇರಿಗೆ ಹೋಗದೆ ಆನ್​ಲೈನ್ ಮೂಲಕವೇ ರಶೀದಿ ಪಡೆಯಬಹುದಾಗಿದೆ. ಅದರ ಜತೆಗೆ ಆನ್​ಲೈನ್ ಮೂಲಕವೇ ಹಣವನ್ನೂ ಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದಾಗಿಯೂ ತೆರಿಗೆ ಸಂಗ್ರಹದಲ್ಲಿ ಸಾಕಷ್ಟು ಹೆಚ್ಚಳವಾಗುವಂತಾಗಿದೆ.

Leave a Reply

Your email address will not be published. Required fields are marked *