ಬಿದಿರು ಹೂ ಬಿಟ್ಟಿದೆ..

ಬಿದಿರು ಹೂ ಬಿಟ್ಟರೆ ನೋಡಲೇನೋ ಚೆಂದ. ಆದರೆ, ಭವಿಷ್ಯ ಭಯಾನಕ. ಬರದ ಮುನ್ಸೂಚನೆ. ಬಿದಿರ ಅಕ್ಕಿ ‘ಬರಗಾಲದ ಅಕ್ಕಿ’ ಎಂದೇ ಪ್ರಸಿದ್ಧ. ಹೂ ಬಿಟ್ಟ ಬಳಿಕ ಒಣಗುವ ಬಿದಿರು ತಾನೂ ಸಾಯುವುದಲ್ಲದೆ ಕಾಡ್ಗಿಚ್ಚಿಗೂ ಕಾರಣವಾಗಬಲ್ಲದು.

| ಯು.ಡಿ. ನಾಯ್ಕ

ದಿಬ್ಬದ ಮೇಲೇರಿ ನಿಂತರೆ ಸುತ್ತೆಲ್ಲ ನಸುಹಳದಿ, ಬಿಳಿ ಹೂಗಳ ಹಾಸು. ಹಸಿರ ಸಿರಿಯ ನಡುವೆ ಹೂಗಳ ರಮ್ಯನೋಟ. ಯಾರೋ ಅಲಂಕಾರಿಕವಾಗಿ ಕೊರೆದಿಟ್ಟ ಚೆಲುವಿನಂತೆ. ಚಳಿಗಾಲ ಮುಗಿಯುವ ಸಮಯದಲ್ಲಿ ಹಸಿರು ಕಾಡಿನ ಹೂಬಿಟ್ಟ ಮರ, ಗಿಡಗಳ ಚೆಲುವೇ ಬೇರೆ. ಅದು ಹೊಸ ಹುಟ್ಟಿಗೆ ಸಮನಾದ ಸಂಭ್ರಮ. ನೋಡಲೇನೋ ಸಡಗರ.

ಆದರೆ…

ಈ ಹೂವು ಜೀವ ನೀಡುವ ಸೂಚನೆಯಲ್ಲ, ಸಮೃದ್ಧಿಯ ಸಂಕೇತವೂ ಅಲ್ಲ. ಕಾಡನ್ನೇ ಬರಿದು ಮಾಡುವ ಹುನ್ನಾರ. ಏಕೆಂದರೆ, ಇದು ಬಿದಿರ ಹೂವು. ಹೀಗೆಂದಾಕ್ಷಣ ಕಾಡಿನ ಆಗುಹೋಗುಗಳ ಬಗ್ಗೆ ಅರಿವಿದ್ದವರು ಅರೆಕ್ಷಣವಾದರೂ ಯೋಚನೆಗೀಡಾಗುತ್ತಾರೆ. ಬಿದಿರ ಹೂವೆಂದರೆ ಹಾಗೆಯೇ, ಅದು ಬರಗಾಲದ ಮುನ್ಸೂಚನೆ.

ಇಂತಹ ಬಿದಿರಿಗೆ ರಾಜ್ಯದ ಹಲವೆಡೆ ಸಂಕಷ್ಟ ಸೃಷ್ಟಿಯಾಗುತ್ತಿದೆ. ಇದು ಪ್ರಕೃತಿಯ ವರವೋ ಶಾಪವೋ ತಿಳಿಯದು. ಬಿದಿರಿಗಷ್ಟೇ ಅಲ್ಲ, ಇಡೀ ಕಾಡಿಗೇ, ನಾಡಿಗೇ ಅನ್ವಯ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳೂ ಸೇರಿ ರಾಜ್ಯದ ಹಲವೆಡೆಯ ಬಿದಿರಿಗೀಗ ಹೂ ಬಿಡುವ ಸಂಭ್ರಮ. ನಮಗೆ ಆತಂಕ. ಹೂ ಬಿಡುವ ಮೂಲಕ ಬಿದಿರ ಸಮೂಹ ಸಾಮೂಹಿಕ ಸಾವಿಗೆ ಸಜ್ಜಾಗುತ್ತಿದೆ.

ಪ್ರಕೃತಿ ವಿಸ್ಮಯ: ಹಾಗೆ ನೋಡಿದರೆ, ಐವತ್ತರಿಂದ ಅರವತ್ತು ವರ್ಷಕ್ಕೆ ಸಾಮೂಹಿಕವಾಗಿ ಬಿದಿರು ಹೂ ಬಿಡುವುದು ಪ್ರಕೃತಿ ವೈಚಿತ್ರ್ಯಗಳಲ್ಲೊಂದು. ಒಂದು ಪ್ರದೇಶದ ಬಿದಿರು ಕಾಂಡದಿಂದ ಸಸಿಯನ್ನು ಒಯ್ದು, ಪ್ರಪಂಚದ ಯಾವ ಮೂಲೆಯಲ್ಲೇ ನೆಟ್ಟು ಬೆಳೆಸಿದರೂ, ಅದು ತನ್ನ ತಾಯ್ನೆಲದ ಪ್ರದೇಶದಲ್ಲಿ ಹೂ ಬಿಡುವ ವರ್ಷದಲ್ಲೇ ಹೂಬಿಟ್ಟು, ಸಾವನ್ನಪ್ಪುವುದು ಜಗತ್ತಿನ ವಿಸ್ಮಯಗಳಲ್ಲೊಂದು. ಬಿದಿರು ಮೂರು ಮಾದರಿಗಳಲ್ಲಿ ಹೂಬಿಡುವುದನ್ನು ಗುರುತಿಸಬಹುದು. ಸಾಮೂಹಿಕವಾಗಿ, ಅಲ್ಲಲ್ಲಿ ಹಾಗೂ ವರ್ಷಕ್ಕೊಮ್ಮೆ ಎಂದು ವಿಂಗಡಿಸಬಹುದು. ಒಂದು ಪ್ರಾಂತ್ಯದ ನೂರಾರು ಚದರ ಕಿಲೋಮೀಟರ್​ನಷ್ಟು ಪ್ರದೇಶದಲ್ಲಿರುವ ಬಿದಿರು ಹೂಬಿಟ್ಟರೆ ಸಾಮೂಹಿಕ ಎನ್ನಬಹುದು. ಈ ರೀತಿ ಸಾಮೂಹಿಕವಾಗಿ ಹೂಬಿಡುವುದು ಹವಾಗುಣ, ಭೂಗುಣಕ್ಕನುಗುಣವಾಗಿಯೋ ಅಥವಾ ಬೇರೆ ಬೇರೆ ಪ್ರಭೇದಗಳು ಕಾರಣವೋ ಅಥವಾ ವಿಭಿನ್ನ ಸಮಯದಲ್ಲಿ ಹೂ ಬಿಡುತ್ತದೆಯೇ ಎನ್ನುವುದು ತಿಳಿಯುವುದಿಲ್ಲ.

ಭೂರಮೆಗೆ ಮುತ್ತಿನ ಹಾರ: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಯಥೇಚ್ಛವಾಗಿ ಹೂಬಿಟ್ಟ ಬಿದಿರು ಭೂರಮೆಗೆ ಹೇಳಿ ಮಾಡಿಸಿದ ಮುತ್ತಿನ ಹಾರಗಳಂತೆ ಶೋಭಿಸುತ್ತಿದ್ದು, ನೋಡುಗರ ಕಣ್ಮನ ತಣಿಸುವಂತೆ ರಮಣೀಯವಾಗಿ ಕಂಡುಬರುತ್ತಿದೆ. ಈ ಭಾಗದ ಅರಣ್ಯ ಪ್ರದೇಶವು ಲಕ್ಷ ಲಕ್ಷ ಹೊನ್ನಿನ ತೇರುಗಳಿಂದ ತುಂಬಿರುವಂತೆ ಹಸಿರು ಹೊನ್ನಿನ ಆಗರವಾಗಿ ವನಶ್ರೀಯ ಕೇಶರಾಶಿಗೆ ಮುಡಿತುಂಬ ಮಲ್ಲಿಗೆ ಮುಡಿದಂತೆ ನಿಸರ್ಗ ಸೌಂದರ್ಯವನ್ನು ನೂರ್ಮಡಿ ಗೊಳಿಸಿದೆ. ಆದರೇನು? ಇದು ಅಂತ್ಯಕಾಲದ ಸೊಬಗಷ್ಟೆ.

ಜಿಲ್ಲೆಯ ದಾಂಡೇಲಿ, ಕುಳಗಿ, ವಿನೋಲಿ, ಕಂಡಾಕುಂಡಿ, ಭರ್ಚಿ, ಜೋಯಡಾ, ಗಣೇಶಗುಡಿ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ 1958-60ರಲ್ಲಿ ಸಾಮೂಹಿಕವಾಗಿ ಬಿದಿರು ಹೂಬಿಟ್ಟ ಸಂದರ್ಭದಲ್ಲಿಯೂ ಬರಗಾಲ ಬಂದಿತ್ತು. 2005ರಿಂದ 2015ರವರೆಗೆ ಬಿದಿರು ಸಾಮೂಹಿಕವಾಗಿ ಹೂಬಿಟ್ಟು ಸತ್ತುಹೋಗಿವೆ. 2017ರಿಂದ ಶಿರಸಿ, ಬನವಾಸಿ, ಎಕ್ಕಂಬಿ, ಬಿಸಲಕೊಪ್ಪ, ನಿಡಗೋಡ, ತಾರಗೋಡ, ಬೆಳಲೆ, ಇಸಳೂರು, ಮಂಚಿಕೇರಿ, ಮಳಗಿ, ಧರ್ವಕೆರೆ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿ ಹೂಬಿಟ್ಟಿದೆ. ಜಿಲ್ಲೆಯ ಬಹುಭಾಗ ಒಂದೇ ರೀತಿಯ ಭೂಗುಣ ಹಾಗೂ ಹವಾಗುಣ ಹೊಂದಿದ್ದು, ಪ್ರಭೇದಗಳಿಗನುಗುಣವಾಗಿ ಹೂ ಬಿಡುವುದಾದರೆ, ಈ ಪ್ರದೇಶದಲ್ಲಿ 15ಕ್ಕಿಂತ ಹೆಚ್ಚು ಪ್ರಭೇದಗಳಿವೆ.

ವೇಗದ ಬೆಳವಣಿಗೆ

ಬಿದಿರು ಏಕದಳ (Monocot) ವರ್ಗಕ್ಕೆ ಸೇರಿದ ಹುಲ್ಲಿನ ಪ್ರಭೇದ. ಅಷ್ಟೇ ಅಲ್ಲ, (Graminae) ಭತ್ತ, ಗೋಧಿ, ಜೋಳ, ಬಾರ್ಲಿ ನಂತರದ ಐದನೇ ಅತಿ ಹೆಚ್ಚು ಹೂ ಬಿಡುವ ಪ್ರಭೇದ ಎನ್ನಲಾಗಿದೆ. ಗುಂಪು ಗುಂಪಾಗಿ ಬೆಳೆಯುವುದು ಬಿದಿರ ವಿಶೇಷ. ಅದನ್ನು ಮೆಳೆಗಳು(Clumps) ಎಂತಲೂ, ಒಂಟಿ ಬಾಂಬುಗಳನು Clums ಎಂತಲೂ ಕರೆಯುತ್ತಾರೆ. ಅತ್ಯಂತ ವೇಗವಾಗಿ ಬೆಳೆಯುವ ಸಸ್ಯ ಇದಾಗಿದ್ದು, ರಾತ್ರಿ ಬೆಳಗಾಗುವುದರೊಳಗೆ 1 ಮೀಟರ್ ಎತ್ತರ ಬೆಳೆಯಬಲ್ಲದು. ಸಾಮಾನ್ಯವಾಗಿ 3-4 ತಿಂಗಳಲ್ಲಿ 30 ಮೀಟರ್ ಎತ್ತರ ಬೆಳೆಯುವ ಬಿದಿರು ದ್ವಿದಳ ಜಾತಿ (Dicot) ವೃಕ್ಷಗಳಂತೆ ಸುತ್ತಳತೆ (Girth increment) ದಪ್ಪ ಆಗುವುದಿಲ್ಲ.

ಬೀಜಗಳ ಸಂಗ್ರಹ, ಸಂಶೋಧನೆ

ಬಿದಿರು ಹೂಬಿಡುವ ಸಮಯದಲ್ಲಿ ಅರಣ್ಯ ನಿರ್ವಹಣೆಯೂ ಅತ್ಯಂತ ಕ್ಲಿಷ್ಟಕರವಾಗಿ ಪರಿಣಮಿಸುತ್ತದೆ. ಬಿದಿರು ಸತ್ತು ಒಣಗಿ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮುಂಜಾಗ್ರತೆ ಅಗತ್ಯ. ಅಲ್ಲದೆ, ಮಳೆ ಬಿದ್ದು, ಬೀಜಗಳು ನೆನೆಯುವುದರೊಳಗಾಗಿ ಅವುಗಳನ್ನು ಸಂಗ್ರಹಿಸಿ, ಸಂಸ್ಕರಿಸಿಡಬೇಕಾಗಿರುತ್ತದೆ. ಅರಣ್ಯ ಇಲಾಖೆಯಲ್ಲಿರುವ ಸಂಶೋಧನೆ ವಿಭಾಗದಲ್ಲಿ ವೃಕ್ಷಕೃಷಿ ವಿಧಾನ, ಬೀಜ ಶೇಖರಣೆ, ಕೃತಕ ಪುನರುತ್ಪನ್ನ, ಬೆಳೆಗಳ ಗತಿ, ಕಟಾವಿನ ಅಂತರ ಮುಂತಾದ ವಿಷಯಗಳ ಅಧ್ಯಯನ ಹಾಗೂ ಮಾಹಿತಿಗಳನ್ನು ದಾಖಲಿಸುವ ಮಹತ್ವದ ಕೆಲಸ ಮಾಡಲಾಗುತ್ತಿದೆ. 2009ರಲ್ಲಿ ದಾಂಡೇಲಿ ಕುಳಗಿ, ಫಣಸೋಲಿ ಅರಣ್ಯ ಪ್ರದೇಶಗಳಲ್ಲಿ ಬಿದಿರು ಹೂಬಿಟ್ಟ ಸಂದರ್ಭದಲ್ಲಿ ಅವು ನೈಸರ್ಗಿಕವಾಗಿ ಬೀಜಗಳಿಂದ ಪುನರುತ್ಪತ್ತಿ ಆಗುವ ಕ್ರಿಯೆಯನ್ನು ದಾಖಲಿಸುವ ಉದ್ದೇಶದಿಂದ ಅಂದಿನ ಧಾರವಾಡ ಸಿಲ್ವಾ ಮುಖ್ಯಸ್ಥರಾದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ ಮಿಶ್ರಾ ಹಾಗೂ ಅರಣ್ಯಾಧಿಕಾರಿ ಡಾ| ಸ್ವಾಮಿನಾಥನ್ ಸೇರಿ ರೂಪಿಸಿದ ವಿಧಾನದಂತೆ ಮಾದರಿ ಪ್ಲಾಟ್​ಗಳನ್ನು ಹಾಕಲಾಗಿದ್ದು, ಆ ಪ್ಲಾಟ್​ಗಳಲ್ಲಿ ಪ್ರತಿ 6 ತಿಂಗಳಿಗೊಮ್ಮೆ ಬಿದಿರ ಬೆಳವಣಿಗೆಯನ್ನು ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ.

ಬದುಕಿಗಾಧಾರ ಬಿದಿರು

1992-93ರಲ್ಲಿ ಡಿಎಫ್​ಐಡಿ ಯೋಜನೆಯಲ್ಲಿ ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಜನಾಂಗ ಹಾಗೂ ಬಡಜನ, ಮಹಿಳಾ ಕೂಲಿಕಾರರಿಗಾಗಿ ಅವರ ದಿನನಿತ್ಯದ ದುಡಿಮೆಗೆ ಅನುಕೂಲವಾಗುವಂತೆ ಬಾಂಬೂ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಅಂದಿನ ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ, ಬಿ. ಶಿವನಗೌಡ ರವರು ಮುತುವರ್ಜಿ ವಹಿಸಿ, ಯಲ್ಲಾಪುರದ ಕೊಡಸೆ ಗ್ರಾಮದಲ್ಲಿ 20 ಸಿದ್ದಿ ಮಹಿಳೆಯರು ಹಾಗೂ ಮುಂಡಗೋಡ, ಮಳಗಿ ಬಿದಿರು ತರಬೇತಿ ಕೇಂದ್ರದಲ್ಲಿ ನೂರಾರು ಮಹಿಳೆಯರಿಗೆ ತರಬೇತಿ ನೀಡಿ, ಬಿದಿರನ್ನೇ ಅವರಿಗೆ ಜೀವನಾಧಾರ ಮಾಡಿಕೊಟ್ಟಿದ್ದು ಈಗ ಇತಿಹಾಸ.ಉಷ್ಣವಲಯದ ಕಾಡುಗಳು ಅತ್ಯಂತ ಸೂಕ್ಷ್ಮ, ಸಂಕೀರ್ಣ. ಮಾನವನಿಗೆ ಗೊತ್ತಿಲ್ಲದ ಜೀವಸಂಕುಲಗಳು, ನೂರಾರು ಜಾತಿಯ ಮರಗಿಡಗಳು, ಬಳ್ಳಿಗಳು, ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳು ವಿಶಿಷ್ಟ ರೀತಿ ಯಲ್ಲಿ ಒಂದಕ್ಕೊಂದು ಸಂಯೋಗ ಹೊಂದಿ, ಪರಿಸರ ಸಮತೋಲನ ಕಾಯ್ದುಕೊಂಡು ಜೀವಿಸುತ್ತಿವೆ. ಇಂಥ ಅರಣ್ಯವನ್ನು ರಕ್ಷಿಸುವುದು ಭವಿಷ್ಯದ ದೃಷ್ಟಿಯಿಂದ ಅಗತ್ಯ ಹಾಗೂ ಹವಾಮಾನ ಬದಲಾವಣೆಯಂಥ ಇಂದಿನ ಆತಂಕಗಳನ್ನು ಮೀರಲು ಅನಿವಾರ್ಯವೂ ಹೌದು.

ಆಪತ್ಕಾಲದ ಸಂಕೇತ

ಬಿದಿರು ಹೂ ಬಿಡುವುದೆಂದರೆ ಆಪತ್ಕಾಲ ಸನಿಹದಲ್ಲಿದೆ ಎಂದೇ ಅರ್ಥ. ಇದು ಜಾನಪದರ ನಂಬುಗೆ. ವೈಚಾರಿಕವಾಗಿಯೂ ಸತ್ಯ. ಕೆಲವರು ಇದನ್ನು ನೈಸರ್ಗಿಕ ವೈಪರೀತ್ಯಗಳುಂಟಾಗುವ ಸಂದೇಶವೆಂದೂ ಹೇಳುತ್ತಾರೆ. ಬಿದಿರ ಬೀಜಗಳಿಂದ ತಯಾರಿಸಿದ ಅಕ್ಕಿಯನ್ನು ‘ಬರಗಾಲ ಅಕ್ಕಿ’ ಎಂದೇ ಕರೆಯುತ್ತಾರೆ. ಒಂದೇ ಸಮನೆ ಹೂಬಿಟ್ಟು, ಬಿದಿರ ಬೀಜಗಳು ಅರಣ್ಯದ ತುಂಬೆಲ್ಲ ಹರಡಿಕೊಂಡ ಸಮಯದಲ್ಲಿ ಇಲಿ, ಹೆಗ್ಗಣಗಳು, ಹಾವುಗಳು, ಕೀಟಗಳು, ಇತರ ಹುಳಹುಪ್ಪಡಿಗಳು ಅದನ್ನು ತಿಂದು, ವಿಪರೀತವಾಗಿ ವಂಶಾಭಿವೃದ್ಧಿ ಹೊಂದಿ, ಅರಣ್ಯದಂಚಿನ ಗ್ರಾಮಗಳಿಗೆ ರೋಗಗಳನ್ನು ಹರಡುವುದರಿಂದಲೂ, ಹೂ ಬಿಟ್ಟ ನಂತರ ಸತ್ತು ಒಣಗಿ, ಸುಲಭವಾಗಿ ಎಲ್ಲೆಡೆ ಬೆಂಕಿ ಬಿದ್ದು, ಪ್ರಾಣಿಗಳು ನಾಡಿಗೆ ನುಗ್ಗಿ ಉಂಟಾಗುವ ಅನಾಹುತಗಳಿಂದಲೂ ಹಾಗೂ ಬೆಂಕಿಯಿಂದ ಕಾಡಿಗೆ ಕಾಡೇ ಬಾಯಾರುವುದರಿಂದಲೂ ಬಿದಿರು ಹೂಬಿಡುವುದು ಶುಭವಲ್ಲ ಎಂಬ ಮಾತಿದೆ.

ಎಲ್ಲೆಲ್ಲಿದೆ ಬಿದಿರು?

ಕರ್ನಾಟಕದಲ್ಲಿ 43.35 ಲಕ್ಷ ಹೆಕ್ಟೇರು ಅರಣ್ಯ ಪ್ರದೇಶದಲ್ಲಿ 3.60 ಲಕ್ಷ ಹೆಕ್ಟೇರು ಅರಣ್ಯ ಪ್ರದೇಶದಲ್ಲಿ ಬಿದಿರು ನೈಸರ್ಗಿಕವಾಗಿ ಬೆಳೆಯುತ್ತಿದೆ. ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ಬೀದರ, ಬಿಜಾಪುರ, ಕೊಪ್ಪಳ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಒಟ್ಟು ಒಂದು ಲಕ್ಷ ಮೇದಾರ ಜನರಿಗೆ ಒಂದು ವರ್ಷದಲ್ಲಿ 40 ಲಕ್ಷ ಸಂಖ್ಯೆಯ ಬಿದಿರು ಬೇಕಾಗುತ್ತದೆ. ಭಾರತದಲ್ಲಿ 76.5 ದಶಲಕ್ಷ ಹೆಕ್ಟೇರು ಅರಣ್ಯ ಪ್ರದೇಶದಲ್ಲಿ 13 ದಶಲಕ್ಷ ಹೆಕ್ಟೇರು ಅರಣ್ಯ ಪ್ರದೇಶದಲ್ಲಿ ಬಿದಿರಿದೆ.

ಸಾವಿರಾರು ಪ್ರಭೇದ

ಜಗತ್ತಿನಲ್ಲಿ 1200 ಬಿದಿರ ಪ್ರಭೇದಗಳಿದ್ದು, ಭಾರತದಲ್ಲಿ 138 ಪ್ರಭೇದಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಭೇದಗಳು ನಶಿಸಿಹೋಗಿವೆ. ಮಣಿಪುರ ಹಾಗೂ ಅರುಣಾಚಲ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಪ್ರಭೇದಗಳನ್ನು ಗುರುತಿಸಲಾಗಿದೆ. ಪಶ್ಚಿಮಘಟ್ಟ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯ ಎಲೆ ಉದುರುವ ತೇವಾಂಶ ಕಾಡುಗಳಲ್ಲಿ ಬಿದಿರು ಹೇರಳವಾಗಿ ಬೆಳೆಯುತ್ತಿದ್ದು, ಪ್ರಮುಖವಾದ ಎರಡು ಪ್ರಭೇದಗಳೆಂದರೆ, ಹೆಬ್ಬಿದಿರು/ಡೌಗಾ ಬಾಂಬು (Bambusa arundinacea) ಮತ್ತು ಕಿರು ಬಿದಿರು/ಮೇದಾರ ಬಾಂಬು (Dendrocalamus strictus). ಪನ್ನಂಗಿ/ ಬಂದಗ/ ಸಾಮೆ ಬಿದಿರು, ವಾಂಟನಳಿ ಮುಂತಾದ ಪ್ರಭೇದಗಳು ಸಹ ಹೇರಳವಾಗಿ ಕಂಡುಬರುತ್ತವೆ.

ಬಡವರ ಚೌಬೀನೆ

ಬಿದಿರು ಬಡವರ ಚೌಬೀನೆ (Poor man’s timber). ಜಾನಪದರು ಮೊದಲಿನಿಂದಲೂ ತಮ್ಮ ಮನೆಯ ಅಗತ್ಯಗಳಿಗೆ ಬಳಸಿಕೊಂಡಿದ್ದು ಇದೇ ಬಿದಿರನ್ನು. ಹಳ್ಳಿಗಳಲ್ಲಿ ಮನೆಗಳನ್ನು ಕಟ್ಟಲು, ಗೋಡೆಗಳ ಒಳ ಆಸರೆಗೆ, ಪೀಠೋಪಕರಣಗಳಿಗೆ, ಕೃಷಿ ಉಪಕರಣಗಳಿಗೆ, ರೇಷ್ಮೆ ಚಂದ್ರಿಕೆಗಳಿಗೆ, ಸಂಗೀತ ಸಲಕರಣೆಗಳಿಗೆ ಹಾಗೂ ಅನೇಕ ರೀತಿಯ ಸೌಂದರ್ಯವರ್ಧಕ ಸಲಕರಣೆಗಳನ್ನು ತಯಾರಿಸಲು ಸಹ ಬಿದಿರನ್ನು ಬಳಸಲಾಗುತ್ತದೆ. 1500ಕ್ಕೂ ಹೆಚ್ಚಿನ ಸಾಂಪ್ರದಾಯಿಕ ಉಪಯೋಗವನ್ನು ದಾಖಲಿಸಲಾಗಿದ್ದು, ಕೇರುವ ಮೊರ, ಚಾಪೆ, ಚಪ್ಪರ, ಬುಟ್ಟಿಗಳು, ಅಕ್ಕಿ ಮುಡಿ, ಬೀಸಣಿಕೆ, ಏಣಿ, ದೋಣಿ ಜಲ್ಲೆ, ಮೀನಿನ ಗಾಳ, ಆಟಿಕೆಗಳು, ಬೇಲಿ, ಕಿಟಕಿ ಪರದೆ (ಮಾಲ್ಕಿ), ತೊಟ್ಟಿಲು, ಮಂಕರಿ, ಕುಕ್ಕೆ ಹೀಗೆ ಅನೇಕ ಬಗೆಯಲ್ಲಿ ಬುಡಕಟ್ಟು ಜನಾಂಗ ಹಾಗೂ ಅರಣ್ಯದಂಚಿನ ಜನರ ದಿನನಿತ್ಯದ ಬಳಕೆಗೆ ಬಿದಿರು ಬೇಕು. ಬಿದಿರು ವನ್ಯಪ್ರಾಣಿಗಳಿಗೂ ಉತ್ತಮ ಆಹಾರ. ಆನೆ, ಕಾಡೆಮ್ಮೆ, ಕಡವೆ, ಜಿಂಕೆ ಮುಂತಾದ ಪ್ರಾಣಿಗಳಿಗೆ ಅಚ್ಚುಮೆಚ್ಚಿನ ಆಹಾರ. ಒಂದು ಕಾಲದಲ್ಲಿ ಇದನ್ನು ಕಳೆಯೆಂದು ಪರಿಗಣಿಸಲಾಗಿತ್ತು. ಇದೇ ಬಿದಿರು, ದಾಂಡೇಲಿ ಕಾಗದ ಕಾರ್ಖಾನೆಯ ಸ್ಥಾಪನೆಗೆ ಕಾರಣವಾಗಿತ್ತು. ಈಗ ಈ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಬೇರೆ ಜಾತಿಯ ಮರಗಳು ಹಾಗೂ ಹೊರದೇಶದಿಂದ ಬರುವ ಚಿಪ್ಸ್​ಗಳ ಮೇಲೆ ಅವಲಂಬಿತವಾಗಿದೆ. ಅರಣ್ಯದಲ್ಲಿ ಬದುಕು ಸಾಗಿಸುವ ಬುಡಕಟ್ಟು ಜನಾಂಗದವರು ಒಂದು ಜಾತಿಯ (Dendrocalamus tuldas) ಬಿದಿರಿನಿಂದ ‘ಇಲೂ’ ಎನ್ನುವ ವಿಶಿಷ್ಟವಾದ ಕೊಳಲನ್ನು ತಯಾರಿಸುತ್ತಾರೆ. ಇದನ್ನು ಊದಿದಾಗ ಭೂತ, ಪಿಶಾಚಿಗಳು ಓಡಿಹೋಗುತ್ತವೆ ಎನ್ನುವ ನಂಬಿಕೆಯೂ ಅವರಲ್ಲಿದೆ.

(ಲೇಖಕರು ಉತ್ತರ ಕನ್ನಡ ಜಿಲ್ಲಾ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ)

(ಪ್ರತಿಕ್ರಿಯಿಸಿ: [email protected])

2 Replies to “ಬಿದಿರು ಹೂ ಬಿಟ್ಟಿದೆ..”

Leave a Reply

Your email address will not be published. Required fields are marked *