ಕಂಪ್ಲಿ: ಮುಂಗಾರು ಹಂಗಾಮಿಗಾಗಿ ರೈತರಿಗೆ ಬಿತ್ತನೆ ಬೀಜ, ಕೃಷಿ ಪರಿಕರಗಳನ್ನು ಸಕಾಲದಲ್ಲಿ ರಿಯಾಯಿತಿ ದರದಲ್ಲಿ ಒದಗಿಸಲು ಕೃಷಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ವಿಪ್ರದ ನಾರಾಯಣಪ್ಪ ಒತ್ತಾಯಿಸಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ತಾಲೂಕು ಕೃಷಿಕ ಸಮಾಜದ ಸಭೆಯಲ್ಲಿ ಸೋಮವಾರ ಮಾತನಾಡಿದರು. ಸಿರಗುಪ್ಪದ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ಮಾತನಾಡಿ, ಸಕಾಲದಲ್ಲಿ ರೈತರಿಗೆ ಬಿತ್ತನೆ ಬೀಜ, ತುಂತುರು, ಹನಿ ನೀರಾವರಿ, ಟ್ರ್ಯಾಕ್ಟರ್‌ಚಾಲಿತ ಉಪಕರಣ, ಕೃಷಿ ಪರಿಕರಗಳನ್ನ ರಿಯಾಯಿತಿ ದರದಲ್ಲಿ ವಿತರಿಸಲು ಕ್ರಮಕೈಗೊಂಡಿದೆ. ರೈತರು ಬಿತ್ತನೆ ಬೀಜ ಖರೀದಿಸಿದಾಗ ರಸೀದಿ, ಲಾಟ್ ನಂಬರ್ ಸೇರಿದಂತೆ ಇತರ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡ, ತುಂತುರು ನೀರಾವರಿ ಘಟಕಕ್ಕೆ ಅರ್ಜಿ ಸಲ್ಲಿಸಲು ರೈತರು ಮುಂದಾಗಬೇಕು ಎಂದರು.
ಕೃಷಿಕ ಸಮಾಜದ ಉಪಾಧ್ಯಕ್ಷ ಯು.ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಜಿ.ತಿಮ್ಮಪ್ಪ, ಜಿಲ್ಲಾ ಪ್ರತಿನಿಧಿ ಯು.ದೊಡ್ಡಬಸಪ್ಪ, ಸದಸ್ಯರಾದ ಬಿ.ಸದಾಶಿವಪ್ಪ, ಜಿ.ಸೋಮಶೇಖರ, ಚನ್ನಬಸಪ್ಪ, ಹರಿಜನ ಹುಲುಗಪ್ಪ, ನಾಗರಾಜ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕರಿಗೌಡರ್, ಕೃಷಿ ಅಧಿಕಾರಿ ಕೆ.ಸೋಮಶೇಖರ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೆ.ಯು.ಬಸವರಾಜ ಇತರರಿದ್ದರು.