ಬಿತ್ತನೆಯಾಗದೆ ಉಳಿದ ಬೀಜ

ಮಂಜುನಾಥರಾಜ್ ಅರಸ್ ಚಿಕ್ಕನಾಯಕನಹಳ್ಳಿ

ಈ ವರ್ಷವೂ ಮುಂಗಾರು ಕೈಕೊಟ್ಟಿದ್ದರಿಂದ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರದ ಗೋದಾಮಿನಲ್ಲಿಯೇ ಇದ್ದು, ಹೆಸರು, ಉದ್ದು, ಅಲಸಂದೆ ರೈತರ ಕೈಗೆ ಸಿಗದಂತಾಗಿದೆ.

ತಾಲೂಕಿನ ರೈತರು ವರ್ಷಕ್ಕೆ ಎರಡು ಮಳೆಯಾಶ್ರಿತ ಬೆಳೆ ಬೆಳೆಯುತ್ತಾರೆ. ಆದರೆ ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಭೂಮಿ ಹಸನು ಮಾಡಲು ಸಾಧ್ಯವಾಗಿಲ್ಲ. ಈ ವೇಳೆಗಾಗಲೇ ಕನಿಷ್ಠ 4 ಸಾವಿರ ಹೆಕ್ಟೇರ್​ನಲ್ಲಿ ಬಿತ್ತನೆಯಾಗಬೇಕಿದ್ದ ಹೆಸರು, ಉದ್ದು, ಅಲಸಂದೆ ಕೇವಲ 10 ಹೆಕ್ಟೇರ್​ನಲ್ಲಿ ಬಿತ್ತನೆಯಾಗಿದೆ. ಶೆಟ್ಟಿಕೆರೆ ಹೋಬಳಿಯ ಕೆಲವೆಡೆ ಸ್ವಲ್ಪ ಬಿತ್ತನೆಯಾಗಿದ್ದು ಹೊರತುಪಡಿಸಿದರೆ ಈ ವರ್ಷ ಬಿತ್ತನೆ ಶೂನ್ಯವಾಗಿದೆ.

ರೈತ ಸಂಪರ್ಕ ಕೇಂದ್ರದಲ್ಲಿ ಉಳಿದ ಬಿತ್ತನೆ ಬೀಜ: ಬಿತ್ತನೆಗೆಂದು ಹಂಚಿಕೆಯಾದ ಬಿತ್ತನೆ ಬೀಜಗಳು ತಾಲೂಕಿನ ರೈತ ಸಂಪರ್ಕ ಕೇಂದ್ರದ ಗೋದಾಮಿನಲ್ಲೇ ಕೊಳೆಯುತ್ತಿದೆ. ತಾಲೂಕಿನಲ್ಲಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ 64.90 ಕ್ವಿಂಟಾಲ್ ಹೆಸರು, 6.93 ಕ್ವಿಂಟಾಲ್ ಉದ್ದು, ತೊಗರಿ 27 ಕ್ವಿಂಟಾಲ್ ಗೋದಾಮುಗಳಲ್ಲಿ ಉಳಿದಿದೆ.

ಕಳೆದ ವರ್ಷ 85 ಕೆಜಿ ಹೆಸರು ಬೆಳೆದಿದ್ದು, ಇದರಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿದ್ದಕ್ಕೆ ಈ ವರ್ಷ ಅದರ ಗೋಜಿಗೆ ಹೋಗಲಿಲ್ಲ. ಈ ವರ್ಷ ಕುಡಿವ ನೀರಿಗೆ ಬರ ಬಂದಿದೆ.

| ಕುಮಾರಸ್ವಾಮಿ, ಬ್ಯಾಲದಕೆರೆ ರೈತ

ವಾಡಿಕೆಯಂತೆ ಈ ವೇಳೆಗಾಗಲೇ 47 ಮಿಮೀ ಮಳೆಬರಬೇಕಿತ್ತು. ಆದರೆ 28 ಮಿಮೀ ಮಳೆಯಾಗಿದ್ದು, ಇದು ಕೂಡ ಸಕಾಲಕ್ಕೆ ಬಂದಿಲ್ಲ. ರೈತರಿಗೆ ಅಗತ್ಯವಾಗಿರುವ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ.

| ಹನುಮಂತರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ

Leave a Reply

Your email address will not be published. Required fields are marked *