ಬಳ್ಳಾರಿ:
ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಶುಕ್ರವಾರ ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಜಿ.ಸೋಮಶೇಖರರೆಡ್ಡಿ ನೀಡಿದ ಹೇಳಿಕೆಗೆ ನಗರದಲ್ಲಿ ಮುಸ್ಲಿಂರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಶನಿವಾರ ಸಾವಿರಾರು ಮುಸ್ಲಿಮರು ದಿಢೀರ್ ಪ್ರತಿಭಟನೆ ಆರಂಭಿಸಿದ್ದಾರೆ. ನಲ್ಲಚೆರವು ಪ್ರದೇಶದಲ್ಲಿರುವ ಶಾದಿಮಹಲ್ ದಿಂದ ಎಚ್.ಆರ್.ಗವಿಯಪ್ಪ ವೃತ್ತದ ಮೂಲಕ ಗಡಿಗಿ ಚನ್ನಪ್ಪ ವೃತ್ತಕ್ಕೆ ಮೆರವಣಿಗೆಯಲ್ಲಿ ಆಗಮಿಸಿದ್ದಾರೆ. ಎಚ್.ಆರ್.ಗವಿಯಪ್ಪ ವೃತ್ತದಿಂದ ಗಡಿಗಿ ಚನ್ನಪ್ಪ ವೃತ್ತ, ಇಂದಿರಾ ವೃತ್ತ, ಡಬಲ್ ರಸ್ತೆ, ಬೆಂಗಳೂರು ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿದೆ. ಎಸ್ಪಿ ಸಿ.ಕೆ.ಬಾಬಾ, ಹೆಚ್ಚುವರಿ ಎಸ್ಪಿ ಬಿ.ಎನ್.ಲಾವಣ್ಯರಿಂದ ಖುದ್ದು ಬಂದೋಬಸ್ತ್ ನೇತೃತ್ವ ವಹಿಸಿದ್ದಾರೆ.
ಗಡಿಗಿ ಚನ್ನಪ್ಪ ವೃತ್ತದಲ್ಲಿ ಪೊಲೀಸ್ ಜೀಪ್ ಮೇಲೆ ನಿಂತು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲು ಎಸ್ಪಿ.ಸಿ.ಕೆ.ಬಾಬಾ ಪರದಾಡುತ್ತಿದ್ದಾರೆ. ಶಾಂತರಾಗುವಂತೆ ಎಸ್ಪಿ ಮಾಡುತ್ತಿರುವ ಮನವಿಗೆ ಪ್ರತಿಭಟನಾಕಾರರು ಕಿವಿಗೊಡುತ್ತಿಲ್ಲ.
ಶುಕ್ರವಾರ ಗಡಿಗಿ ಚನ್ನಪ್ಪ ವೃತ್ತದಲ್ಲಿ ದೇಶಭಕ್ತ ನಾಗರಿಕರ ವೇದಿಕೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದರೆ ನಾವು ರೊಚ್ಚಿಗೇಳಬೇಕಾಗುತ್ತದೆ. ಜಾಸ್ತಿ ನಖರಾ ಬೇಡ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಎಚ್ಚರಿಸಿದ್ದರು.