More

  ಬಿಜೆಪಿ, ಜೆಡಿಎಸ್‌ಗೆ ಹೃದಯಾಘಾತ

  ನಾಗಮಂಗಲ: ಕಾಂಗ್ರೆಸ್ ನೀಡಿದ್ದ ಐದು ‘ಗ್ಯಾರಂಟಿ’ಗಳನ್ನು ಈಡೇರಿಸಲು ಸಾಧ್ಯವಾಗುವುದಿಲ್ಲವೆಂದು ಬಿಜೆಪಿ, ಜೆಡಿಎಸ್ ಪಕ್ಷಗಳು ನಮಗೆ ಮುಖಭಂಗ ಮಾಡಲು ಯೋಜನೆ ರೂಪಿಸಿ ಕಾದು ಕುಳಿತಿದ್ದವು. ಆದರೆ, ಐದೂ ಗ್ಯಾರಂಟಿಗಳನ್ನು ಈಡೇರಿಸಿದ ನಂತರ ಆ ಪಕ್ಷಗಳಿಗೆ ಹೃದಯಾಘಾತ ಆದಂತಾಗಿದ್ದು, ಮಾತುಗಳೇ ನಿಂತುಹೋಗಿವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಲೇವಡಿ ಮಾಡಿದರು.


  ಪಟ್ಟಣದ ಶ್ರೀ ಸೌಮ್ಯಾಕೇಶವಸ್ವಾಮಿ ದೇವಾಲಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕರ್ತರಿಗೆ ಕೃತಜ್ಞತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಐದೂ ಭರವಸೆಗಳನ್ನು ಈಡೇರಿಸುತ್ತದೆಂದು ಬಿಜೆಪಿ ಮತ್ತು ಜೆಡಿಎಸ್ ಅಂದುಕೊಂಡಿರಲಿಲ್ಲ. ಆದ್ದರಿಂದ ಈಗ ಆ ಪಕ್ಷಗಳಿಗೆ ಮಾತನಾಡಲು ಏನೂ ಇಲ್ಲದಂತಾಗಿದೆ ಎಂದು ಕುಟುಕಿದರು.
  ಒಂದು ವೇಳೆ ನಾಗಮಂಗಲದಲ್ಲಿ ನಾನು ಸೋತರೂ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಬರುತ್ತದೆಂದು ಹೇಳಿದ್ದೆ. ನನ್ನ ಎದುರುದಾರರು ಗೆದ್ದಿದ್ದರೆ ಶಾಸಕರಾಗಿರುತ್ತಿದ್ದರು ಅಷ್ಟೇ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುತ್ತಿತ್ತು. ಮಂಡ್ಯದಲ್ಲಿ 6 ಜನ ಸೋತಿದ್ದರೂ ಕಾಂಗ್ರೆಸ್ ಬಹುಮತದ ಸರ್ಕಾರವಿರುತ್ತಿತ್ತು. ಈ ಬಾರಿ ಜಿಲ್ಲೆಯ ಜನ ಯೋಚಿಸಿ ಉತ್ತಮ ನಿರ್ಧಾರ ಮಾಡಿ 6 ಜನರನ್ನು ಗೆಲ್ಲಿಸಿದ್ದಾರೆ. ಸರ್ಕಾರ ರಚನೆಯಾದ ನಂತರ ರಾಜ್ಯದ ಯಾವ ಜಿಲ್ಲೆಗೂ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಆದರೆ, ಮೈಶುಗರ್ ಕಾರ್ಖಾನೆಗೆ 50 ಕೋಟಿ ರೂ.ಗಳನ್ನು ಸರ್ಕಾರ ಮೊದಲಿಗೆ ಬಿಡುಗಡೆ ಮಾಡಿದ್ದು, ಜಿಲ್ಲೆಯ ಜನರ ಮಾತಿಗೆ ಬೆಲೆ ನೀಡಿದೆ ಎಂದರು.


  ತಾಲೂಕಿನ ಮತದಾರರು ಸ್ವಲ್ಪ ಗೊಂದಲದಲ್ಲಿದ್ದರು. ಈ ಬಾರಿ ನಾನು ಗೆಲ್ಲುತ್ತೇನೆಂದು ಮತದಾರರಿಗೆ ಪರಿಪೂರ್ಣ ಭರವಸೆ ಇಲ್ಲದಿದ್ದರಿಂದ ಗೆಲುವಿನ ಅಂತರ ಕಡಿಮೆಯಾಗಲು ಕಾರಣವಾಯಿತು. ನನ್ನ ವಿರೋಧಿಗಳು ಶಿಕ್ಷಣ ತಜ್ಞರು. ಕೇವಲ 4 ಸಾವಿರ ಅಂತರದಲ್ಲಿ ಅಷ್ಟೇ ಸೋತಿರುವುದು. ನಾನೇ ಶಾಸಕ ಅಂತ ಓಡಾಡಿದರೂ ನಮಗೇನೂ ಬೇಜಾರಿಲ್ಲ. ಅದನ್ನು ನಾನು ತಡೆಯುವುದಿಲ್ಲ. ನಮ್ಮ ಕಾರ್ಯಕರ್ತರು, ಮುಖಂಡರು ತಲೆಕೆಡಿಸಿಕೊಳ್ಳಬೇಡಿ ಎಂದರು.


  ಸವಾಲಿನ ಖಾತೆ: ಕೃಷಿ ಇಲಾಖೆಯಲ್ಲಿ ತುಂಬ ಸವಾಲುಗಳಿವೆ. ಆದರೆ ಎಲ್ಲ ಸಮಸ್ಯೆಗಳನ್ನು ಒಂದೇ ಬಾರಿಗೆ ಬಗೆಹರಿಸಲು ಸಾಧ್ಯವಿಲ್ಲ. ಈಗ ನಾನು ಬಂದು ಮಂತ್ರ ಮಾಡುತ್ತೇನೆಂದು ಹೇಳಲು ಸಾಧ್ಯವಿಲ್ಲ. ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ. ಕೊಬ್ಬರಿ, ತರಕಾರಿ ಹಾಗೂ ರಾಗಿಗೆ ಉತ್ತಮ ಬೆಲೆ ಸಿಗಲು ಯೋಜನೆ ರೂಪಿಸಲಾಗುವುದು. ಬೆಂಬಲ ಬೆಲೆ ಸಿಗುವಂತೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

  ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಅವರ ಪತ್ನಿ ಧನಲಕ್ಷ್ಮೀ ಚಲುವರಾಯಸ್ವಾಮಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೆಳ್ಳಿ ಗದೆ ನೀಡಿ ಅಭಿನಂದಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿಸಿಸಿ ಸದಸ್ಯ ಕೊಣನೂರು ಹನುಮಂತು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಲಕ್ಷ್ಮೀಕಾಂತ್, ಸಚಿನ್ ಚಲುವರಾಯಸ್ವಾಮಿ, ಸುನೀಲ್ ಲಕ್ಷ್ಮೀಕಾಂತ್, ಎಚ್.ಟಿ.ಕೃಷ್ಣೇಗೌಡ, ರಾಜೇಗೌಡ, ಮುರ್ತುಜಾ, ಪ್ರಸನ್ನ, ಯುವ ಘಟಕದ ಜಿಲ್ಲಾಧ್ಯಕ್ಷ ಚಿದಾನಂದ್ ಇದ್ದರು.

  ಕಳೆದ ಬಾರಿಯಂತೆ ಫೂಲ್ ಆಗಲ್ಲ
  ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಮಾಡಿರುವ ತಪ್ಪನ್ನು ಈ ಬಾರಿ ಮಾಡಲ್ಲ. ನನಗೆ ಮತ ಹಾಕದವರಿಗೆ ನನ್ನ ಪೆನ್ನಲ್ಲಿ ಒಂದು ಸಹಿ ಕೂಡ ಹಾಕುವುದಿಲ್ಲ, ನನ್ನ ಒಂದು ಪತ್ರವನ್ನೂ ಕೊಡುವುದಿಲ್ಲ. ಆದರೆ, ಮತ ಹಾಕದವರು ನನ್ನ ಮನೆ ಹತ್ತಿರ ಬಂದರೆ ಗೌರವದಿಂದ ನಡೆದುಕೊಳ್ಳುತ್ತೇನೆ. ನಮಗೆ ಮತ ಹಾಕದವರು ಯಾರೇ ಬಂದರೂ ಆ ಗ್ರಾಮದ ನಮ್ಮ ಮುಖಂಡರನ್ನು ಸಂಪರ್ಕಿಸಿ ನಂತರವೇ ತೀರ್ಮಾನ ಮಾಡುತ್ತೇನೆ. ಕಳೆದ ಬಾರಿಯ ರೀತಿ ಈ ಬಾರಿ ಫೂಲ್ ಆಗಲ್ಲ. ನನಗೆ ದುಡಿದವರಿಗೆ ಈ ಬಾರಿ ಬೆಲೆ ಸಿಗಲಿದೆ. ನಮ್ಮ ಕಾರ್ಯಕರ್ತರಿಗೆ ನೋವುಂಟು ಮಾಡುವುದಿಲ್ಲ ಎಂದು ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts