ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಗದಗ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹಾಗೂ ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿಕೊಂಡು ವಿಜಯೋತ್ಸವ ಆಚರಿಸಿದರು.

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ, ಯುವ ಮೋರ್ಚಾ, ಅಲ್ಪಸಂಖ್ಯಾತರ ಘಟಕ, ಗದಗ ಶಹರ, ಗ್ರಾಮೀಣ ಸೇರಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಬಿಜೆಪಿ ಬಾವುಟ, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಿಡಿದು ಮೋದಿ.. ಮೋದಿ ಎಂದು ಘೊಷಣೆ ಕೂಗುತ್ತ ಸಂಭ್ರಮಾಚರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 5 ವರ್ಷಗಳ ಕಾಲ ನೀಡಿದ ಭ್ರಷ್ಟಾಚಾರ ಮುಕ್ತ ಆಡಳಿತ, ಜನಪರ ಯೋಜನೆಗಳು, ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆ ಹಾಗೂ ದೇಶದ ರಕ್ಷಣೆ ಬಗ್ಗೆ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಗೆ ಜನತೆ ಅಪಾರ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ನಡೆಸುವಂತೆ ಅಧಿಕ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ನಂತರ ಮೆರವಣಿಗೆ ಮೂಲಕ ಸಂಸದರ ಜನಸಂಪರ್ಕ ಕಾರ್ಯಾಲಯಕ್ಕೆ ತೆರಳಿದರು.

ಸಿಹಿ ಹಂಚಿ ಸಂಭ್ರಮಾಚರಣೆ…
ಹಾವೇರಿ-ಗದಗ ಲೋಕಸಭೆ ಕ್ಷೇತ್ರದಲ್ಲಿ ಶಿವಕುಮಾರ ಉದಾಸಿ ಅವರು ಗದಗ ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಮತದಾರರೊಂದಿಗೆ ಹೊಂದಿದ ನಿರಂತರ ಜನಸಂಪರ್ಕ ಮತ್ತು ಕ್ಷೇತ್ರದ ಅಭಿವೃದ್ಧಿ ಮೆಚ್ಚಿಕೊಂಡ ಮತದಾರರು ಹ್ಯಾಟ್ರಿಕ್ ಸಾಧನೆ ಮಾಡಲು ನೆರವಾಗಿದ್ದಾರೆ ಎಂದು ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಕುರಡಗಿ, ಶಹರ ಬಿಜೆಪಿ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇರ್ಷಾದ ಮಾನ್ವಿ, ಪ್ರಕಾಶ ಬಾಕಳೆ, ನಗರಸಭೆ ಮಾಜಿ ಸದಸ್ಯ ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ಮುಖಂಡರಾದ ಎಂ.ಎಸ್. ಕರಿಗೌಡ್ರ, ಕಾಂತಿಲಾಲ ಬನ್ಸಾಲಿ, ವಿ.ಕೆ. ಗುರುಮಠ, ಶಿವನಗೌಡ ಶಿವನಗೌಡ್ರ, ಪಾರ್ವತಿ ಪತ್ತಾರ, ವಿಜಯಲಕ್ಷ್ಮಿ ಮಾನ್ವಿ, ಜಯಶ್ರೀ ಅಣ್ಣಿಗೇರಿ, ರತ್ನಾ ಕುರಕೋಡ, ಛಗನ್ ರಾಜಪುರೋಹಿತ, ಕಾರ್ಯಕರ್ತರು ಭಾಗವಹಿಸಿದ್ದರು.

ಯಶ್ ಅಭಿಮಾನಿಗಳ ಸಂಭ್ರಮ
ಗದಗ: ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ ಅವರು ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಜಯಗಳಿಸಿದ ಹಿನ್ನೆಲೆಯಲ್ಲಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಶುಕ್ರವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಸಂಘದ ಅಧ್ಯಕ್ಷ ಮಂಜುನಾಥ ದಾಮೋದರ ಮಾತನಾಡಿದರು. ಗಣೇಶ ಹುಬ್ಬಳ್ಳಿ, ಜನಾರ್ಧನ ನಾಯರಿ, ಶ್ರೀನಿವಾಸ ಪೂಜಾರ, ಸತೀಶ ಮಾಳೋದೆ, ಬೂದೇಶ ಹೊಂಬಳ, ದತ್ತು ಪೂಜಾರ, ಮಂಜು ಕುರಿ, ಯಾಸೀನ್ ನವಲಗುಂದ, ವಿನಾಯಕ ಬಳ್ಳಾರಿ, ಹೇಮಂತ ಹುಬ್ಬಳ್ಳಿ, ಮೌಶಿನ ಭಾವಿಕಟ್ಟಿ, ನಾಗರಾಜ ಕೋರಿಯವರ್, ಶ್ರೀನಿವಾಸ ನಾಯರಿ, ಮಲ್ಲು ಇಚ್ಚಂಗಿಮಠ ಇದ್ದರು.

Leave a Reply

Your email address will not be published. Required fields are marked *