ಬೈಲಕುಪ್ಪೆ: ಬಿಜೆಪಿ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ದುಡಿಯಬೇಕು ಎಂದು ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಸಲಹೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದ ಆಡಳಿತವು ಅಭಿವೃದ್ಧಿಯ ಪ್ರಗತಿಯಲ್ಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೀಡಿದ ಮಹತ್ತರ ಯೋಜನೆಗಳು ಬಡವರ ಹಾಗೂ ಹಿಂದುಳಿದವರ ಪರವಾಗಿವೆ. ಬೂತ್ ಮಟ್ಟದ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಪ್ರತಿ ಮನೆಮನೆಗೆ ತೆರಳಿ ಯೋಜನೆಗಳ ಬಗ್ಗೆ ಮತದಾರರಲ್ಲಿ ಮನವರಿಕೆ ಮಾಡಿಕೊಡುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಮಾತನಾಡಿ, ಮೋದಿ ಪ್ರಧಾನಿಯಾಗಿಲ್ಲದಿದ್ದರೆ ಭಾರತವು ಪಾಕಿಸ್ತಾನ ಹಾಗೂ ಶ್ರೀಲಂಕದಂತೆ ದಿವಾಳಿತನವನ್ನು ಎದುರಿಸಬೇಕಾಗಿತ್ತು. ಕರೋನಾ ಸಂದರ್ಭದಲ್ಲಿ ಆರ್ಥಿಕವಾಗಿ ದಿವಾಳಿತನ ಅನುಭವಿಸಬೇಕಾಗುತ್ತಿತ್ತು. ಕಠಿಣ ಸಂದರ್ಭದಲ್ಲಿ ಮೋದಿ ಅವರು ಸಮರ್ಥವಾಗಿ ದೇಶದ ಆಡಳಿತ ಮುನ್ನಡೆಸಿದ್ದಾರೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಮಾಜಿ ಶಾಸಕ ಎಚ್.ಸಿ.ಬಸವರಾಜು, ಮಹಿಳಾ ಮೊರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಳಿನಿ, ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎಂ.ರಾಜೇಗೌಡ, ಮುಖಂಡರಾದ ಕೌಲನಹಳ್ಳಿ ಸೋಮಶೇಖರ್, ತಂಬಾಕು ಮಂಡಳಿ ಸದಸ್ಯ ವಿಕ್ರಂ ರಾಜು, ಜಿಲ್ಲಾ ಕಾರ್ಯದರ್ಶಿ ಕಿರಣ್ ಜಯರಾಮ್, ಮಾಜಿ ಅಧ್ಯಕ್ಷ ರವಿ, ಆರ್.ಟಿ.ಸತೀಶ್, ಕೊಪ್ಪ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರು, ತಾಲೂಕು ಉಪಾಧ್ಯಕ್ಷ ನಾರಾಯಣ್, ಚಿಕ್ಕ ಹೊಸೂರು ರವಿ, ತಾಲೂಕು ಕಾರ್ಯದರ್ಶಿ ಎಂ.ಪಿ.ರಾಜು ಇತರರು ಇದ್ದರು.