ಬಿಜೆಪಿ ಕಾರ್ಯಕರ್ತರಿಂದ ರಸ್ತೆಯಲ್ಲೇ ಒಕ್ಕಣೆ

ಮಂಡ್ಯ: ಭತ್ತ ಖರೀದಿ ಕೇಂದ್ರ ಆರಂಭ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 6 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರು ಹೆದ್ದಾರಿಯಲ್ಲೇ ಭತ್ತ ಒಕ್ಕಣೆ ಮಾಡಿ ವಿಭಿನ್ನ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಎಂದಿನಂತೆ ನಿರಶನ ಆರಂಭಿಸಿದ ಪ್ರತಿಭಟನಾಕಾರರು, 12 ಗಂಟೆ ವೇಳೆಗೆ ಭತ್ತದ ಕಂತೆಗಳನ್ನು ತೆಗೆದುಕೊಂಡು ರಸ್ತೆಗಿಳಿದರು. ಸ್ಥಳದಲ್ಲೇ ಜಮಾಯಿಸಿದ್ದ ಪೊಲೀಸರು ತಡೆಯಲು ಮುಂದಾದಾಗ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ತಳ್ಳಾಟ ನೂಕಾಟ ಕೂಡ ಆರಂಭವಾಯಿತು. ಅದೇ ವೇಳೆಗೆ ರಸ್ತೆಯಲ್ಲಿ ಒಕ್ಕಣೆ ಮಾಡುವ ಸಲುವಾಗಿಯೇ ಗೂಡ್ಸ್ ವಾಹನವೊಂದರಲ್ಲಿ ಭತ್ತವನ್ನು ತರಲಾಯಿತು. ಆ ವಾಹನದಿಂದ ಭತ್ತ ತೆಗೆಯದಂತೆ ಪೊಲೀಸರು ತಡೆಯಲು ಯತ್ನಿಸಿ ವಿಫಲರಾದರು. ರಸ್ತೆಯಲ್ಲೇ ವಾಹನ ನಿಲ್ಲಿಸಿಕೊಂಡು ಅದರಲ್ಲಿದ್ದ ಭತ್ತವನ್ನೆಲ್ಲಾ ರಸ್ತೆಯಲ್ಲೇ ಬಿಜೆಪಿ ಕಾರ್ಯಕರ್ತರು ಬಡಿದರು.

ನಂತರ ಹುಲ್ಲನ್ನು ಕಟ್ಟಿ, ಭತ್ತವನ್ನು ತೂರಿ ಚೀಲಕ್ಕೆ ತುಂಬಿ ಅದೇ ವಾಹನದಲ್ಲಿ ತುಂಬಿಕೊಂಡರು. ಪರಿಣಾಮ 40 ನಿಮಿಷಕ್ಕೂ ಹೆಚ್ಚು ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಯಿತು. ಪ್ರತಿಭಟನಾಕಾರರು ರಸ್ತೆಯಲ್ಲಿ ನುಗ್ಗಲು ಯತ್ನಿಸಿದ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ ಕೆಲಕಾಲ ಪರಿಸ್ಥಿತಿ ಉದ್ವಿಗ್ನವಾಗಿತ್ತು.

ಈ ನಡುವೆ ಸ್ಥಳಕ್ಕೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಉಪ ನಿರ್ದೇಶಕಿ ಕುಮುದಾ ಆಗಮಿಸಿ, 24 ಗಂಟೆಯೊಳಗೆ ಭತ್ತ ಖರೀದಿ ಕೇಂದ್ರ ಆರಂಭಿಸಲು ಅವಕಾಶ ಕೊಡಬೇಕೆಂದು ಕೋರಿದರು.

ಇದರಿಂದ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು 5 ದಿನಗಳಿಂದ ಜಿಲ್ಲಾಡಳಿತ ಸ್ಥಳಕ್ಕೆ ಯಾಕೆ ಬರಲಿಲ್ಲ. ಭತ್ತ ಖರೀದಿ ಕೇಂದ್ರ ಆರಂಭಿಸದ ಕಾರಣದಿಂದ ರೈತರು ಕಷ್ಟಪಟ್ಟು ಬೆಳೆದ ಭತ್ತ ದಲ್ಲಾಳಿಗಳ ಪಾಲಾಗಿದೆ. ಸರ್ಕಾರ ದಲ್ಲಾಳಿಗಳಿಗೆ ಅನುಕೂಲ ಕಲ್ಪಿಸಲು ಕಾರ್ಯನಿರ್ವಹಿಸುತ್ತಿದೆಯೇ ಎಂದು ಕಿಡಿಕಾರಿದರು.

ಜಿ.ಪಂ. ಸದಸ್ಯ ಶಿವಣ್ಣ ಮಾತನಾಡಿ, ಜಿಲ್ಲಾಡಳಿತ ತಕ್ಷಣ ಭತ್ತ ಖರೀದಿ ಜತೆಗೆ ತಮ್ಮ ಇತರೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತನಾಯಕ ಕೆ.ಎಸ್.ನಂಜುಂಡೇಗೌಡ, ನಗರಸಭೆ ಮಾಜಿ ಸದಸ್ಯೆ ಇಂದಿರಾ ಸತೀಶ್‌ಬಾಬು, ಪಿಎಲ್‌ಡಿಬಿ ಮಾಜಿ ನಿರ್ದೇಶಕ ಆನಂದ್, ಸಿದ್ದರಾಜುಗೌಡ, ಸಿ.ಟಿ.ಮಂಜುನಾಥ್, ನವೀನ್, ಶಿವಕುಮಾರ್ ಆರಾಧ್ಯ ಮೊದಲಾದವರಿದ್ದರು.

Leave a Reply

Your email address will not be published. Required fields are marked *