ಇಳಕಲ್ಲ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸ್ಪರ್ಧಿಸಿದ್ದಾರೆ ಎಂಬ ಭಾವದಿಂದ ಎಲ್ಲರೂ ಅವರಿಗೆ ಮತ ನೀಡಿ ಗೆಲ್ಲಿಸಿಕೊಂಡು ಬರೋಣ ಎಂದು ನಗರಸಭೆ ಸದಸ್ಯ, ಬಿಜೆಪಿ ಹಿರಿಯ ಮುಖಂಡ ಲಕ್ಷ್ಮಣ ಗುರಂ ಹೇಳಿದರು.
ಮಂಗಳವಾರ 2024ಕ್ಕೆ ಮತ್ತೊಮ್ಮೆ ಮೋದೀಜಿಯವರನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಇಳಕಲ್ಲ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ‘ನಾರಿ ಶಕ್ತಿ ವಂದನಾ ಯಾತ್ರೆ’ಯ ನಂತರ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಗೃಹ ಕಚೇರಿಯಲ್ಲಿ ಅವರು ಮಾತನಾಡಿದರು.
ಪ್ರಧಾನಿ ಮೋದಿಯವರು ದೇಶವನ್ನು ಅಭಿವೃದ್ಧಿಪಥದತ್ತ ತೆಗೆದುಕೊಂಡು ಹೋಗುತ್ತಿದ್ದು, ಭಾರತವನ್ನು ವಿಶ್ವಮಾನ್ಯಗೊಳಿಸಿದ್ದಾರೆ. ನಾರಿಯರಿಗಾಗಿಯೇ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಆರಿಸಿ ಕಳಿಸುವ ಮೂಲಕ ಪ್ರಧಾನಿ ಮೋದಿಯವರ ಶಕ್ತಿಯನ್ನು ಹೆಚ್ಚಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ನಾರಿ ಶಕ್ತಿ ವಂದನಾ ಯಾತ್ರೆಯ ಬೈಕ್ ರ‌್ಯಾಲಿಯು ಮತ್ತೊಮ್ಮೆ ಮೋದಿ ಘೋಷಣೆಯೊಂದಿಗೆ ಇಳಕಲ್ಲ ನಗರದ ಬಸ್ ನಿಲ್ದಾಣ ಮಾರ್ಗವಾಗಿ ಎಸ್.ಆರ್. ಕಂಠಿ ವೃತ್ತ, ಗಾಂಧಿಚೌಕ್, ಮೇನ್ ಬಜಾರ್, ಕೊಪ್ಪರದ ಪೇಟೆ, ಮಹಾಂತೇಶ ಟಾಕೀಸ್ ಮೂಲಕ ನಗರಸಭೆ ಮುಂಭಾಗದಲ್ಲಿ ಸಂಚರಿಸಿ, ಪುನಃ ಮಾಜಿ ಶಾಸಕ ದೊಡ್ಡನಗೌಡ ಅವರ ಗೃಹ ಕಚೇರಿ ತಲುಪಿತು.
ಬಿಜೆಪಿ ಮುಖಂಡರಾದ ಎಂ.ಆರ್. ಪಾಟೀಲ, ಸೂಗೂರೇಶ ನಾಗಲೋಟಿ, ಚಂದ್ರಶೇಖರ ಏಕಬೋಟಿ, ರಾಘವೇಂದ್ರ ಶೋರೆ, ರಾಜೇಂದ್ರ ಆರಿ, ಉಮೇಶ ಕೊಂಗಾರಿ, ಶರಣಪ್ಪ ಅಮರಾವತಿ, ಹನಮಂತ ತುಂಬದ, ಮಹಾಂತೇಶ ಗೋನಾಳ, ಶಿವರಾಜ ಹಾವರಗಿ, ವಿರೇಶ ಮನ್ನಾಪುರ, ಶರಣು ನಾರಗಲ್ಲ, ನಾರಿ ಶಕ್ತಿ ವಂದಾನಾ ಯಾತ್ರೆ ಸಂಚಾಲಕಿ ಶಾಂತ ಜಳಕಿ, ಸಹ ಸಂಚಾಲಕ ಕಪಿಲ್ ಪವಾರ, ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರಾದ ತೃಪ್ತಿ ಸಾಲಿಮಠ, ಜ್ಯೋತಿ ಕಾಟಾಪುರ, ಲಲಿತಾ ಹಿರೇಮಠ, ವಿಜಯಲಕ್ಷ್ಮಿ, ದೇವಮ್ಮ ಪಾಟೀಲ್ ಇತರರು ಭಾಗವಹಿಸಿದ್ದರು.