ಬಿಜೆಪಿ ಅಭ್ಯರ್ಥಿಗೆ ಮೋದಿ ಅಲೆ, ಮೊಯ್ಲಿಗೆ ಮೈತ್ರಿ ಬಲ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಮತದಾನ ಮುಗಿಯುತ್ತಿದ್ದಂತೆ ಎಲ್ಲೆಡೆ ಅಭ್ಯರ್ಥಿಗಳ ಸೋಲು ಗೆಲುವಿನ ಬಗ್ಗೆಯೇ ಚರ್ಚೆಯಾಗುತ್ತಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಎಂ.ವೀರಪ್ಪ ಮೊಯ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡುತ್ತಾರಾ?, ಮೋದಿ ಅಲೆಯಲ್ಲಿ ಪ್ರಚಾರ ಕೈಗೊಂಡ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ನೇತೃತ್ವದಲ್ಲಿ ಕಮಲ ಅರಳುತ್ತಾ?, ಕ್ಷೇತ್ರದಲ್ಲಿ ಹೊಸ ದಾಖಲೆ ಬರೆಯುತ್ತಾ? ಎಂಬಿತ್ಯಾದಿ ಪ್ರಶ್ನೆಗಳು ಕೇಳಿ ಬರುತ್ತಿವೆ.

ಬೆಳ್ಳಂಬೆಳಗ್ಗೆಯೇ ಟೀ ಅಂಗಡಿ, ಹೋಟೆಲ್, ಗಲ್ಲಿ ಗಲ್ಲಿಯಲ್ಲಿ ಕಂಡುಬರುವ ನಾಲ್ಕೈದು ಮಂದಿಯನ್ನೊಳಗೊಂಡ ಗುಂಪಿನಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ಅಂಶಗಳನ್ನು ಮುಂದಿಟ್ಟು ವಾದಿಸಲಾಗುತ್ತಿದೆ. ಕ್ಷೇತ್ರದ ಚುನಾವಣೆಗೆ 15 ಮಂದಿ ಸ್ಪರ್ಧಿಸಿದ್ದರು. ಆದರೆ, ಗೆಲುವಿನ ವಿಚಾರದಲ್ಲಿ ಮೊಯ್ಲಿ ಮತ್ತು ಬಚ್ಚೇಗೌಡರ ಹೆಸರು ಮಾತ್ರವೇ ಚರ್ಚೆಯಾಗುತ್ತಿದೆ.

ಜಾತಿ ಬಲದ ಗೆಲುವು: ಬಚ್ಚೇಗೌಡ ಒಕ್ಕಲಿಗರು. ಕ್ಷೇತ್ರದಲ್ಲಿ ಸ್ವಸಮುದಾಯದ ಗಮನ ಸೆಳೆಯುವಲ್ಲಿ ಅವರು ಸಂಪೂರ್ಣ ಯಶಸ್ವಿಯಾಗಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದ ಒಕ್ಕಲಿಗ ಮತಗಳು ವಿಭಜನೆಯಾಗಿ ಸೋಲನುಭವಿಸಬೇಕಾಯಿತು. ಆದರೆ, ಈ ಬಾರಿ ಸಮುದಾಯದ ಜನರು ಹೆಚ್ಚಿನ ಒಲವು ತೋರಿದ್ದಾರೆ ಎಂಬ ಖುಷಿಯಲ್ಲಿದ್ದಾರೆ ಗೌಡರು.

ಮತ್ತೊಂದೆಡೆ ಬಲಿಜ ಸಮುದಾಯ ಕಾಂಗ್ರೆಸ್​ಗೆ ಬಹುತೇಕ ಕೈ ಕೊಟ್ಟಿದೆ. ಹಿಂದೆ 2ಎ ಮೀಸಲಾತಿ ಹೊಂದಿದ್ದ ಸಮುದಾಯವನ್ನು 3ಎಗೆ ಸೇರಿಸಿ ಮೊಯ್ಲಿ ಅನ್ಯಾಯ ಮಾಡಿದ್ದಾರೆ. ಇದಕ್ಕೆ ಸಮುದಾಯದವರು ಹಲವು ಸವಲತ್ತುಗಳಿಂದ ವಂಚಿತರಾಗಿ ಹಿಂದುಳಿಯುವಂತಾಗಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೈಕ್ಷಣಿಕವಾಗಿ ಅನ್ವಯವಾಗುವಂತೆ 2ಎ ಮೀಸಲಾತಿ ನೀಡಿದ್ದಾರೆ ಎಂದು ಸಮುದಾಯದ ಮುಖಂಡರೇ ಚುನಾವಣೆ ವೇಳೆ ಬಹಿರಂಗವಾಗಿ ಹೇಳಿರುವುದು ಬಿಜೆಪಿಗೆ ವರದಾಯಕ ಎನ್ನಲಾಗುತ್ತಿದೆ. ಆದರೆ, ಇದನ್ನು ಕಾಂಗ್ರೆಸ್ ಮುಖಂಡರು ಒಪ್ಪುತ್ತಿಲ್ಲ. ಪಕ್ಷದಲ್ಲೂ ಪ್ರಭಾವಿ ಒಕ್ಕಲಿಗ ಮತ್ತು ಬಲಿಜ ಸಮುದಾಯದ ನಾಯಕರಿದ್ದು, ವಿಪಕ್ಷಗಳ ಸುಳ್ಳು ಮಾತುಗಳ ಕುರಿತು ಅರಿವು ಮೂಡಿಸಿ ಮತ ಸೆಳೆದಿದ್ದಾರೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ.

ರಾಜಕೀಯ ಬಲದ ಗೆಲುವು: ಕ್ಷೇತ್ರದ 8 ವಿಧಾನಸಭೆ ಕ್ಷೇತ್ರ ಪೈಕಿ 5 ಕಾಂಗ್ರೆಸ್, 2 ಜೆಡಿಎಸ್ ಮತ್ತು ಒಂದು ಬಿಜೆಪಿ ಹೊಂದಿದ್ದು, ಬಹುತೇಕ ಕಡೆ ಕಮಲ ಪ್ರಾಬಲ್ಯ ಕಡಿಮೆ. ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಸ್ಪರ್ಧೆ ಎದುರಿಸಿರುವುದು ಮೊಯ್ಲಿಗೆ ಅನುಕೂಲಕರವಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ ಮತ್ತೊಂದು ಸಮರ್ಥನೆ ಕೇಳಿ ಬರುತ್ತಿದೆ.

ಹಿಂದೆ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲ್ನೋಟಕ್ಕೆ ಒಂದಾಗಿದ್ದು, ಆಂತರಿಕವಾಗಿ ದಳಪತಿಗಳು ಬಿಜೆಪಿ ಬೆಂಬಲಿಸಿದ್ದಾರೆ. ಇನ್ನು, ವಿಧಾನಸಭೆ ಚುನಾವಣೆಯಲ್ಲಿ ಕಮಲ ಹೆಚ್ಚಿನ ಸ್ಥಾನಗಳನ್ನು ಗೆಲ್ಲದಿದ್ದರೂ ಮತ ಪ್ರಮಾಣ ಹೆಚ್ಚಿಸಿಕೊಂಡಿದೆ. ಇದರಿಂದ ಬಚ್ಚೇಗೌಡರ ಗೆಲುವು ಖಚಿತ ಎನ್ನಲಾಗುತ್ತಿದೆ. ಇದರ ನಡುವೆ ಮತದಾರ ವಾಸ್ತವವಾಗಿ ಯಾರ ಕೊರಳಿಗೆ ಜಯದ ಮಾಲೆ ಹಾಕಿದ್ದಾನೆ? ಯಾರಿಗೆ ಸೋಲುಣಿಸಿದ್ದಾನೆ ಎನ್ನುವುದು ಮತ ಎಣಿಕೆ ಮುಗಿದ ಬಳಿಕವಷ್ಟೇ ತಿಳಿದು ಬರಲಿದೆ.

ಪಟಾಕಿ ಹೊಡೆದು ಸಂಭ್ರಮ: ಬಿಜೆಪಿ ಕಾರ್ಯಕರ್ತರು ಅಲ್ಲಲ್ಲಿ ಪಟಾಕಿ ಸಿಡಿಸಿ ಈಗಲೇ ಖುಷಿ ಅನುಭವಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಚಿಕ್ಕಬಳ್ಳಾಪುರದ ಭುವನೇಶ್ವರಿ ವೃತ್ತದಲ್ಲಿ ಮೋದಿ ಮತ್ತು ಬಚ್ಚೇಗೌಡರ ಪರ ಗೆಲುವಿನ ಜೈಕಾರ ಹಾಕಿದ್ದು, ಈಗಾಗಲೇ ವಿಜಯದ ಸಂಭ್ರಮದಲ್ಲಿದ್ದಾರೆ.