ಬಿಜೆಪಿಯಿಂದ ಬೃಹತ್ ರೋಡ್ ಶೋ

ಹುಬ್ಬಳ್ಳಿ: ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪಕ್ಷದ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ನಗರದಲ್ಲಿ ಭಾನುವಾರ ಬೃಹತ್ ರೋಡ್ ಶೋ ನಡೆಸಿದರು.

ಇಲ್ಲಿನ ದುರ್ಗದಬೈಲ್​ನಿಂದ ಪ್ರಾರಂಭಗೊಂಡ ರೋಡ್ ಶೋನಲ್ಲಿ ಅಭ್ಯರ್ಥಿ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಸಚಿವ ವಿ. ಸೋಮಣ್ಣ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಸಂಸದೆ ತೇಜಸ್ವಿನಿ ಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾ. ನಾಗರಾಜ ಮತ್ತಿತರರು ಪಾಲ್ಗೊಂಡಿದ್ದರು.

ಕೊಪ್ಪಿಕರ ರಸ್ತೆ, ಸರ್ ಸಿದ್ದಪ್ಪ ಕಂಬಳಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನಪೇಟ ಮೂಲಕ ತೆರಳಿದ ರೋಡ್ ಶೋ ಮೂರುಸಾವಿರ ಮಠದ ಎದುರು ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿ. ಸೋಮಣ್ಣ, ದೇಶವನ್ನು ಸಮರ್ಥರ ಕೈಗೆ ಕೊಡುವುದು ಮತದಾರರ ಜವಾಬ್ದಾರಿ. ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಮಾತ್ರ ದೇಶ ಭದ್ರವಾಗಿರುವುದರ ಅರಿವು ಈಗ ಭಾರತೀಯರಿಗೆ ಆಗಿದೆ. ಹೀಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ಖಚಿತ ಎಂದರು.

ಕಳೆದ ಅವಧಿಯಲ್ಲಿ ಧಾರವಾಡ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಸಿಆರ್​ಎಫ್ ಅನುದಾನದಲ್ಲಿ ಉತ್ತಮ ರಸ್ತೆ, ಐಐಟಿ, ಐಐಐಟಿ, ಉಡಾನ್ ಯೋಜನೆಯಡಿ ಹೆಚ್ಚಿನ ವಿಮಾನಗಳ ಹಾರಾಟ, ಮುದ್ರಾ ಯೋಜನೆಯಡಿ ನೂತನ ಕೈಗಾರಿಕೆಗಳ ಪ್ರಾರಂಭ ಸೇರಿದಂತೆ ಹಲವಾರು ಕಾರ್ಯಗಳು ಕ್ಷೇತ್ರದಲ್ಲಿ ಆಗಿವೆ ಎಂದು ತಿಳಿಸಿದರು.

ಮಾಜಿ ಸಂಸದೆ ತೇಜಸ್ವಿನಿ ಗೌಡ ಮಾತನಾಡಿ, ಪ್ರಲ್ಹಾದ ಜೋಶಿಯವರನ್ನು ಮತ್ತೊಮ್ಮೆ ಸಂಸದರನ್ನಾಗಿಸಲು ಹಾಗೂ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

ಮಾಜಿ ಶಾಸಕ ಅಶೋಕ ಕಾಟವೆ, ಮಾಜಿ ಮೇಯರ್ ಸುಧೀರ ಸರಾಫ, ಮಾಜಿ ಉಪ ಮೇಯರ್ ಮೇನಕಾ ಹುರಳಿ, ಮುಖಂಡರಾದ ಶಿವಾನಂದ ಮುತ್ತಣ್ಣವರ, ಶಿವು ಮೆಣಸಿನಕಾಯಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *