ಬಿಜೆಪಿಗೆ ಬಹುಮತ ನೀಡಿ, ಎಚ್​ಡಿಕೆ ಪರಿಸ್ಥಿತಿ ತಪ್ಪಿಸಿ

ಹುಬ್ಬಳ್ಳಿ:ಬಹುಮತವಿರುವ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ 37 ಸ್ಥಾನ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿಯ ಸಮ್ಮಿಶ್ರ ಸರ್ಕಾರದಂತೆ ಖುರ್ಚಿ ಉಳಿಸಿಕೊಳ್ಳಲು ಪರದಾಡಬೇಕಾಗುತ್ತದೆ. ಆದಕಾರಣ ಮತ್ತೊಮ್ಮೆ ಬಿಜೆಪಿಗೆ ಬಹುಮತ ನೀಡುವಂತೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ಕಿರುಕುಳದಿಂದ ಬೆಳಗ್ಗೆ ಅಳುತ್ತಾರೆ. ನಂತರ ಖುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಸಂಜೆ ಅದೇ ಪಕ್ಷದ ಮುಖಂಡರನ್ನು ಅಪ್ಪಿಕೊಳ್ಳುತ್ತಾರೆ ಎಂದು ಟೀಕಿಸಿದರು.

ಏ. 23ಕ್ಕೆ ಕಮಲದ ಬಟನ್ ಒತ್ತುವ ಮೂಲಕ ಇಲ್ಲಿ ಪ್ರಲ್ಹಾದ ಜೋಶಿಯವರನ್ನು ಸಂಸದರನ್ನಾಗಿಸಿ ಮತ್ತು ದೆಹಲಿಯಲ್ಲಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಿ. ದೇಶ ಮೋದಿ ಅವರ ಕೈಯಲ್ಲಿ ಮಾತ್ರ ಸುರಕ್ಷಿತ. ದೇಶ ಸುರಕ್ಷಿತವಾಗಿದ್ದರೆ ಮಾತ್ರ ಎಲ್ಲರೂ ಸುರಕ್ಷಿತವಾಗಿರಲು ಸಾಧ್ಯ ಎಂದರು.

ರಾಷ್ಟ್ರೀಯ ಸುರಕ್ಷತೆ, ದೇಶದ ಅಭಿವೃದ್ಧಿ ಮತ್ತು ಜನ ಕಲ್ಯಾಣದ ಆಧಾರದ ಮೇಲೆ ಮತ ನೀಡಿ. ಏರ್​ಸ್ಟ್ರೈಕ್​ಅನ್ನು ಸಂಶಯದಿಂದ ಕಂಡು, ಪಾಕಿಸ್ತಾನದ ಮಾತು ನಂಬುವವರಿಗೆ, ಉಗ್ರವಾದಿಗಳನ್ನು ಗೌರವದಿಂದ ಸಂಬೋಧಿಸುವವರಿಗೆ ಮತ ನೀಡಬೇಡಿ ಎಂದು ಸಲಹೆ ನೀಡಿದರು.

ಸಮರ್ಪಕ ವಿದೇಶಾಂಗ ನೀತಿ :ಕಳೆದ ಬಾರಿ ಬಿಜೆಪಿ ನೇತೃತ್ವದ ಎನ್​ಡಿಎಗೆ ಬಹುಮತ ಇದ್ದ ಕಾರಣ ಪ್ರಧಾನಿ ನರೇಂದ್ರ ಮೋದಿ ಹಲವಾರು ದಿಟ್ಟ ನಿರ್ಧಾರ ಕೈಗೊಂಡರು. ಪುಲ್ವಾಮಾ ದಾಳಿ ನಡೆದಾಗ ವಿಶ್ವದ ಬಹುತೇಕ ದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪಾಕಿಸ್ತಾನಕ್ಕೆ ಪಾಠ ಕಲಿಸಿದರು. ಈ ಹಿಂದೆ ಮುಂಬೈ ಮೇಲೆ ಉಗ್ರರ ದಾಳಿ ನಡೆದಾಗ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಅವಕಾಶ ಇದ್ದರೂ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅವಕಾಶ ಕೈಚೆಲ್ಲಿತು ಎಂದು ಟೀಕಿಸಿದರು.

ಮೋದಿ ಪ್ರಧಾನಿಯಾದ ನಂತರ 5 ವರ್ಷದಲ್ಲಿ 10 ಕೋಟಿ ಶೌಚಗೃಹ ನಿರ್ವಣಗೊಂಡಿವೆ. 34 ಕೋಟಿ ಹೊಸ ಬ್ಯಾಂಕ್ ಖಾತೆಗಳು ತೆರೆದಿವೆ. 13 ಕೋಟಿ ಹೊಸ ಗ್ಯಾಸ್ ಸಂಪರ್ಕ ನೀಡಲಾಗಿದೆ. ನಿತ್ಯ 59 ಕಿಮೀ ರಸ್ತೆ ಮತ್ತು 132 ಕಿಮೀ ಗ್ರಾಮೀಣ ರಸ್ತೆ ನಿರ್ವಿುಸಲಾಗುತ್ತಿದೆ. 505 ಪಾಸ್​ಪೋರ್ಟ್ ಕೇಂದ್ರಗಳನ್ನು ತೆರೆಯಲಾಗಿದೆ. 118 ಮೆಡಿಕಲ್ ಕಾಲೇಜ್, 57 ಏಮ್್ಸ, 14 ಐಐಐಟಿ, 7 ಐಐಟಿ, ಒಂದು ಎನ್​ಐಟಿ, 103 ಕೇಂದ್ರೀಯ ವಿದ್ಯಾಲಯ, 63 ನವೋದಯ ವಿದ್ಯಾಲಯಗಳನ್ನು ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.

ಮುದ್ರಾ ಯೋಜನೆಯಡಿ ಇದುವರೆಗೆ 17.68 ಕೋಟಿ ಜನರು ಸಾಲ ಪಡೆದಿದ್ದು, ಇವರಲ್ಲಿ 12 ಕೋಟಿ ಮಹಿಳೆಯರಿದ್ದಾರೆ. ಕೌಶಲ ವಿಕಾಸ ಯೋಜನೆಯಡಿ ಉದ್ದಿಮೆಗೆ ಬೇಕಾದ ತರಬೇತಿ ನೀಡಿ, ಮುದ್ರಾ ಯೋಜನೆಯಡಿ ಸಾಲ ನೀಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಹಜ್ ಯಾತ್ರೆಗೆ ಮಹಿಳೆಯರೊಂದಿಗೆ ಪುರುಷರು ಇರಬೇಕೆಂಬ ನಿರ್ಬಂಧ ಸಡಿಲಿಸಲಾಗಿದೆ. ಹಜ್ ಯಾತ್ರೆಗೆ ಹೋಗುವವರ ಸಂಖ್ಯೆಯನ್ನು 1.75 ಲಕ್ಷದಿಂದ 2 ಲಕ್ಷಕ್ಕೆ ಏರಿಸಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಯಬೇಕಾದರೆ ಬಿಜೆಪಿಗೆ ಬಹುಮತ ನೀಡುವ ಅಗತ್ಯವಿದೆ. ಧಾರವಾಡ ಕ್ಷೇತ್ರದಲ್ಲಿಯೂ ಪ್ರಲ್ಹಾದ ಜೋಶಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮತ್ತೊಮ್ಮೆ ಚುನಾಯಿಸುವಂತೆ ಮನವಿ ಮಾಡಿದರು.

ಸಂಸದ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಹಾನಗರ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ ಮತ್ತಿತರರಿದ್ದರು.

‘ಮಾನ್ಯ ಜಿಲ್ಲಾಧ್ಯಕ್ಷ ನಾಗೇಶ ಅವರೆ, ಧಾರವಾಡ ಲೋಕಸಭೆ ಕ್ಷೇತ್ರದ ಭಾಜಪ ಅಭ್ಯರ್ಥಿ ಜೋಶಿ ಅವರೆ, ಬಂಧು-ಭಗಿನಿಯರೆ ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಧಾರವಾಡ ಸಾಹಿತ್ಯದ ಮತ್ತು ಪವಿತ್ರವಾದ ಭೂಮಿ ಎಂದರು.

ಸಂಗೀತಗಾರರು, ಸ್ವಾತಂತ್ರ ಹೋರಾಟಗಾರರು, ಸಿದ್ಧಾರೂಢರು, ಸಂತ ಶಿಶುನಾಳ ಶರೀಫರು, ಪಂ. ಭೀಮಸೇನ್ ಜೋಶಿ, ಡಾ. ಗಂಗೂಬಾಯಿ ಹಾನಗಲ್, ಡಾ. ಗೋಕಾಕ, ಬೇಂದ್ರೆ ಅವರಂತವರು ಈ ಪುಣ್ಯಭೂಮಿಯಲ್ಲಿ ಓಡಾಡಿದ್ದಾರೆ ಎಂದು ಹೇಳಿದರು.ಧಾರವಾಡ ಪೇಢೆೆ, ಖಡಕ್ ರೊಟ್ಟಿ ಸದಾ ಸ್ಮರಣೀಯ ಎಂದರು.

ಪಾಕಿಸ್ತಾನದ ಯುವತಿಯನ್ನು ಪ್ರೇಮಿಸಿ, ಮದುವೆಯಾಗಿದ್ದ ಹುಬ್ಬಳ್ಳಿ ನಿವಾಸಿ ಡ್ಯಾನಿಯಲ್, ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಮದುವೆಯಾದ ನಂತರ ಡ್ಯಾನಿಯಲ್ ತನ್ನ ಪತ್ನಿಯನ್ನು ಭಾರತಕ್ಕೆ ಕರೆತರಲು ಪರದಾಡಿದ್ದರು. ಆಗ ಸಚಿವೆ ಸುಷ್ಮಾ ಸ್ವರಾಜ್ ಡ್ಯಾನಿಯಲ್​ಗೆ ಸಹಾಯ ಮಾಡಿದ್ದರು.

ಮೇ 23ಕ್ಕೆ ಎರಡೆರೆಡು ಪೇಢೆ ತಿನ್ನಿ. ಒಂದು ಪ್ರಲ್ಹಾದ ಜೋಶಿಯವರನ್ನು ಸಂಸದರನ್ನಾಗಿಸಿದ್ದಕ್ಕೆ, ಮತ್ತೊಂದು ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಚುನಾಯಿಸಿದ್ದಕ್ಕೆ.

ಸುಷ್ಮಾ ಸ್ವರಾಜ್, ಕೇಂದ್ರ ಸಚಿವೆ

Leave a Reply

Your email address will not be published. Required fields are marked *