ಬಿಜೆಪಿಗೆ ಗೆಲ್ಲುವ ವಿಶ್ವಾಸ

ರಾಮನಗರ : ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗುತ್ತಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್​ನಲ್ಲಿರುವ ಯೋಗ್ಯರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.

ರಾಮನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರೊಂದಿಗೆ ಮಾತನಾಡಿದರು. ಚುನಾವಣೆಯಲ್ಲಿ ಅಪ್ಪನ ಆಣೆ ಹಾಕಿ ಅಧಿಕಾರಕ್ಕೆ ಬರಲ್ಲ, ಮುಖ್ಯಮಂತ್ರಿ ಆಗಲ್ಲ ಎನ್ನುತ್ತಿದ್ದವರು ಇಂದು ದೋಸ್ತಿಗಳಾಗಿದ್ದಾರೆ. ಇದರಿಂದ ಬೇಸರ ಹೊಂದಿದವರು ಆ ಪಕ್ಷಗಳಿಂದ ಹೊರ ಬರುತ್ತಿದ್ದಾರೆ. ಬಿಜೆಪಿಗೆ ಬರುವವರನ್ನು ಮನೆಗೆ ಸೊಸೆಯನ್ನು ಬರ ಮಾಡಿಕೊಂಡಂತೆ ಸ್ವಾಗತಿಸುತ್ತಿದ್ದೇವೆ. ಅವರ ಯೋಗ್ಯತೆ ಅನುಸಾರ ಅಧಿಕಾರ ನೀಡುತ್ತೇವೆ ಎಂದರು.

ರಾಜ್ಯದ್ದು ಅಸ್ಥಿರ ಸರ್ಕಾರ: ರಾಜ್ಯದ ಸಮ್ಮಿಶ್ರ ಸರ್ಕಾರ ಸ್ಥಿರವಾಗಿಲ್ಲ ಎಂಬುದನ್ನು ಆ ಎರಡೂ ಪಕ್ಷದ ನಾಯಕರೇ ಒಪ್ಪಿಕೊಳ್ಳುತ್ತಾರೆ. ಬಳ್ಳಾರಿ ಚುನಾವಣೆ ಸಂಬಂಧ ಸಚಿವರು ಸಭೆ ಕರೆದರೆ ನಾಲ್ವರು ಸ್ಥಳೀಯ ಶಾಸಕರೇ ಗೈರಾಗುತ್ತಾರೆ. ಇನ್ನು ಶಿವಮೊಗ್ಗದಲ್ಲಿ ಕಾಂಗ್ರೆಸ್​ಗೆ ಅಭ್ಯರ್ಥಿಯೇ ಇಲ್ಲ ಎನ್ನುವಂತಾಗಿದೆ ಎಂದು ಸದಾನಂದಗೌಡ ಲೇವಡಿ ಮಾಡಿದರು.

ತ್ರಿಪುರಾ ಮಾದರಿಯಲ್ಲಿ ರಾಮನಗರದಲ್ಲೂ ಬಿಜೆಪಿ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸದಾನಂದಗೌಡ, ವಿಪಕ್ಷಗಳಲ್ಲಿರುವ ಅತೃಪ್ತಿಯ ಲಾಭ ಪಡೆದು ಚುನಾವಣೆ ಗೆಲ್ಲುವುದಕ್ಕಿಂತ, ನರೇಂದ್ರ ಮೋದಿಯವರ ಜನಪ್ರಿಯ ಆಡಳಿತವನ್ನು ಜನತೆ ಮುಂದಿಟ್ಟು ಚುನಾವಣೆ ಗೆಲ್ಲುತ್ತೇವೆ ಎಂದರು.

ಯೋಗೇಶ್ವರ್ ನೇತೃತ್ವದಲ್ಲಿಯೇ ಈ ಉಪಚುನಾವಣೆ ನಡೆಯುತ್ತಿದೆ. ಚನ್ನಪಟ್ಟಣದಲ್ಲಿ ಕೆರೆಗಳನ್ನು ತುಂಬಿಸಿ ಹೇಗೆ ಜನತೆಗೆ ನೀರು ಕೊಟ್ಟರೋ ಅದೇ ರೀತಿ ಬಿಜೆಪಿಗೆ ಶಕ್ತಿಯನ್ನೂ ತುಂಬಲಿದ್ದಾರೆ ಎಂದರು.

ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ನೂರಕ್ಕೆ ನೂರರಷ್ಟು ವಿಜಯಶಾಲಿ ಆಗುತ್ತಾರೆ. ಐದು ತಿಂಗಳು ಕಳೆದರೂ ರಾಜ್ಯ ಸರ್ಕಾರ ಇನ್ನೂ ಟೇಕ್​ಆಫ್ ಆಗಿಲ್ಲ. ರೈತರ ಸಾಲಮನ್ನಾ ಘೊಷಣೆ ಹೊರತಾಗಿಯೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿಂತಿಲ್ಲ ಎಂದರು.

ರಾಜ್ಯಮಟ್ಟದಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದರೂ, ರಾಮನಗರದಲ್ಲಿ ಎರಡೂ ಪಕ್ಷಗಳ ನಡುವಿನ ಕಲಹ ಬೀದಿಗೆ ಬಂದಿದೆ. ಇದು ಬಿಜೆಪಿಗೆ ಅನುಕೂಲಕರವಾಗಿದ್ದು, ಈ ಕ್ಷೇತ್ರದಲ್ಲಿ ಖಾತೆ ತೆರೆಯುವ ಎಲ್ಲ ಲಕ್ಷಣಗಳಿವೆ. ಇದೇ ವಿಶ್ವಾಸದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಸರ್ಕಾರ ಕೋಮಾ ಸ್ಥಿತಿ ತಲುಪಿದೆ ಎಂದರು.

ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಗೌಡ ಮಾತನಾಡಿ, ರಾಮನಗರ ಕ್ಷೇತ್ರದಲ್ಲಿ ಗೆದ್ದು, ಇದು ನನಗೆ ಬೇಡ ಎಂದು ಬಿಸಾಡಿ ಹೋಗಿರುವ ಎಚ್.ಡಿ.ಕುಮಾರಸ್ವಾಮಿಗೆ ಸ್ವಾಭಿಮಾನಿ ಮತದಾರರು ತಕ್ಕಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ರಾಮನಗರದಿಂದ ಎಲ್ಲವನ್ನೂ ಪಡೆದ ಕುಮಾರಸ್ವಾಮಿ ಇಲ್ಲಿದ್ದುಕೊಂಡೇ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡುತ್ತಾರೆ. ಚನ್ನಪಟ್ಟಣಕ್ಕೆ ಹೋಗಿ ಅಲ್ಲಿ ನಿಲ್ಲುತ್ತಾರೆ. ಅವರಿಗೆ ತಮ್ಮ ಸ್ವಾರ್ಥ ಬಿಟ್ಟು ಬೇರೆಗೊತ್ತಿಲ್ಲ, ಇದನ್ನು ರಾಮನಗರ ಜಿಲ್ಲೆಯ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.

ಈ ಬಾರಿ ಚುನಾವಣೆಯಲ್ಲಿ ನಡೆಯುವುದು ಸ್ವಾಭಿಮಾನದ ರಾಜಕಾರಣ ಎಂದ ಅವರು, ಅನಿತಾ ಕುಮಾರಸ್ವಾಮಿ ಅತ್ಯಂತ ದುರ್ಬಲ ಸ್ಪರ್ಧಿ. ಇವರಿಗೆ ಗೆದ್ದರಷ್ಟೇ ಕ್ಷೇತ್ರಬೇಕು ಎನ್ನುವುದಕ್ಕೆ ಮಧುಗಿರಿ, ಚನ್ನಪಟ್ಟಣ ಕ್ಷೇತ್ರಗಳೇ ಸಾಕ್ಷಿ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರೂ ಅಸಮಾಧಾನಗೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಎಚ್​ಡಿಕೆ ನಡುವಿನ ಅಪವಿತ್ರ ಮೈತ್ರಿಯನ್ನು ರಾಮನಗರ ಸ್ವಾಭಿಮಾನಿ ಜನತೆ ತಿರಸ್ಕಾರ ಮಾಡುತ್ತಾರೆ ಎಂದರು.

ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಿ: ಕುಮಾರಸ್ವಾಮಿ ಅವರಿಗೆ ನಿಜವಾಗಲೂ ಜಾತ್ಯತೀತ ಮನೋಭಾವವಿದ್ದರೆ ಅಲ್ಪಸಂಖ್ಯಾತರೊಬ್ಬರಿಗೆ ಅವಕಾಶ ಮಾಡಿಕೊಡಬೇಕಿತ್ತು. ಕಳೆದ ಚುನಾವಣೆಯಲ್ಲಿ ಇಕ್ಬಾಲ್ ಹುಸೇನ್ 69 ಸಾವಿರ ಮತ ಪಡೆದುಕೊಂಡಿದ್ದರು. ಇವರಿಗೆ ಗೆಲ್ಲುವ ಅವಕಾಶವಿದ್ದರೂ ಏಕೆ ಅವರಿಗೆ ಟಿಕೆಟ್ ನೀಡಿಲ್ಲ ಎಂದು ತೇಜಸ್ವಿನಿ ಪ್ರಶ್ನಿಸಿದರು.

ಸಂಸದ ಪಿ.ಸಿ. ಮೋಹನ್, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಅಬ್ದುಲ್ ಅಜೀಂ, ವಿಧಾನ ಪರಿಷತ್ ಸದಸ್ಯರಾದ ಅ.ದೇವೇಗೌಡ, ಮುನಿರಾಜುಗೌಡ, ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಮುಂತಾದವರು ಇದ್ದರು.

ಅನಿತಾಗೆ ವಿಭಿನ್ನ ಸ್ವಾಗತ : ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ನಾಮಪತ್ರ ಸಲ್ಲಿಸಿ ಮುಖಂಡರೊಟ್ಟಿಗೆ ಹೊರ ಬರುತ್ತಿದ್ದಂತೆ, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಸಹ ಕಾರಿನಲ್ಲಿ ಆಗಮಿಸಿದರು. ಈವೇಳೆ ತಮ್ಮ ನಾಯಕರಿಗೆ ಜೈ ಕಾರ ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರು, ಅನಿತಾರನ್ನು ಕಾಣುತ್ತಿದ್ದಂತೆ, ಮೋದಿ… ಮೋದಿ.. ಮೋದಿ.. ಎಂದು ಕೂಗುತ್ತಾ ವಿಭಿನ್ನ ರೀತಿಯ ಸ್ವಾಗತವನ್ನು ಅವರಿಗೆ ಕೋರಿದರು. ಇದರಿಂದ ಅನಿತಾ ಅವರಿಗೆ ಕೊಂಚ ಇರಿಸುಮುರುಸುಗೊಂಡರಾದರೂ, ಇದನ್ನು ತೋರ್ಪಡಿಸದೆ ಚುನಾವಣಾಧಿಕಾರಿ ಕಚೇರಿಯತ್ತ ತೆರಳಿದರು.

ಸ್ವಾಭಿಮಾನದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ. ಸ್ಥಳೀಯರೇ ಆದ ಕೆ.ರಾಜು ಶಾಸಕರಾಗಿದ್ದು ಬಿಟ್ಟರೆ, ಸ್ಥಳೀಯರ ಸಮಸ್ಯೆಗೆ ಸ್ಪಂದಿಸುವವರು ಯಾರೂ ಇಲ್ಲ. ದೇವೇಗೌಡರ ಕುಟುಂಬ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿಲ್ಲ.

| ಎಲ್. ಚಂದ್ರಶೇಖರ್, ಬಿಜೆಪಿ ಅಭ್ಯರ್ಥಿ