ಬಿಜೆಪಿಗೆ ಕೋಲಿ ಸಮಾಜದ ಬೆಂಬಲ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲು ಕೋಲಿ ಸಮಾಜ ನಿರ್ಧರಿಸಿದೆ ಎಂದು ಸಮಾಜದ ರಾಜ್ಯ ಕಾರ್ಯದರ್ಶಿ, ಸಂಚಾಲಕ ಶಾಂತಪ್ಪ ಕೋಡಿ ಹೇಳಿದ್ದಾರೆ.

ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಲು ನಾವು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ಕೇಳಿಕೊಂಡಿದ್ದೆವು. ಅವರು ಈ ಕುರಿತಂತೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಪ್ರಧಾನಿ ಮೋದಿಯವರು ಕಲಬುರಗಿಗೆ ಬಂದಾಗ ನಮ್ಮ ಸಮಾಜವನ್ನು ನನೆಪಿಸಿಕೊಂಡಿದ್ದಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ಸಮಾಜದ ಹಿರಿಯ ನಾಯಕ ಬಾಬುರಾವ್ ಚಿಂಚನಸೂರ್ ಅವರನ್ನು ಖರ್ಗೆ ಮತ್ತು ಕಂಪನಿ ಮೂಲೆಗುಂಪು ಮಾಡಲು ಹೊರಟಿದೆ. ನಮ್ಮ ಸಮಾಜದ ಮತಗಳಿಂದಲೇ ಗೆದ್ದು ಬರುತ್ತಿರುವ ಖರ್ಗೆಯವರಿಗೆ ನಮ್ಮ ನಾಯಕರೆಂದರೆ ಅಲರ್ಜಿ. ನಮ್ಮ ಸಮಾಜವನ್ನು ಇವರು ಕಡೆಗಣಿಸುತ್ತಲೇ ಇದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.

ದಿ.ವಿಠ್ಠಲ ಹೇರೂರ ಅವರ ನಂತರ ಕೋಲಿ ಸಮಾಜವನ್ನು ಬೆನ್ನಿಗೆ ಕಟ್ಟಿಕೊಂಡು ಕರ್ನಾಟಕದುದ್ದಕ್ಕೂ ಸಂಘಟನೆ ಮಾಡುತ್ತಿರುವ ಬಾಬುರಾವ ಚಿಂಚನಸೂರ ಅವರಿಗೆ ಅಧಿಕಾರ ಸಿಕ್ಕಾಗ ಸಮಾಜಕ್ಕೆ ಸಹಾಯ ಮಾಡಿದ್ದಾರೆ. ಸಮಾಜವನ್ನು ಎಸ್ಟಿಗೆ ಸೇರ್ಪಡೆಗೊಳಿಸಲೇ ಬೇಕು ಎಂದು ಪ್ರಾಮಾಣಿಕ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಈ ಹಿಂದೆ ಯಾನಾಗುಂದಿಯಲ್ಲಿ ಕೋಲಿ ಸಮಾಜದ ಬೃಹತ್ ಸಮಾವೇಶ ಮಾಡಿ, ಎಸ್ಟಿಗೆ ಸೇರ್ಪಡೆ ಮಾಡಲು ಸಚಿವ ಸಂಪುಟದ ಮೂಲಕ ಕೇಂದ್ರಕ್ಕೆ ಶಿಫಾರಸು ಮಾಡಿಸಿದ್ದರೂ, ಸಂಸದರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ಈ ಕುರಿತು ಆಸಕ್ತಿ ತೋರದ ಕಾರಣ ನನೆಗುದಿಗೆ ಬಿದ್ದಿತು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಿಂಗಣ್ಣ ಹುಳಗೋಳಕರ, ಶ್ರೀನಾಥ ಪಿಲ್ಲೆ ಸೇಡಂ, ಶಂಕು ಮ್ಯಾಕೇರಿ ಅಫಜಲಪುರ, ಪಿಡ್ಡಪ್ಪ ಜಾಲಗಾರ ಯಾದಗಿರಿ, ದಯಾನಂದ ವಿ.ಕೆ.ಸಲಗರ, ವಿಠ್ಠಲ ಕರಾರೆ ಆಳಂದ, ಶ್ರೀನಿವಾಸ ಘಾಲಿ ಚಿಂಚೋಳಿ, ಸಂತೋಷ ತಳವಾರ, ಶಿವಕುಮಾರ ಸುಣಗಾರ ಚಿತ್ತಾಪೂರ, ಸೂರ್ಯಕಾಂತ ಔರಾದಿ, ಶ್ರೀಶೈನ ನಾಟಿಕಾರ ಇಂಗಳಗಿ, ಅವಧೂತ ಬಂದರವಾಡ ಜೇವಗಿ, ಶಿವಾನಂದ ನಾಯಿಕೋಡಿ ಗುರುಮಠಕಲ್, ಕೃಷ್ಣಾದಯಾಳ ಬುಶೆಟ್ಟಿಪಲ್ಲಿ, ಶರಣಪ್ಪ ಹದನೂರ, ಸಾಯಿಬಣ್ಣಬಸವಂತಪೂರ ಇತರರಿದ್ದರು.

ಮೋದಿಗೆ ಸಮಾಜದ ಅಭಿನಂದನೆ

ಮಾ.6ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಬಂದಾಗ, ಸಮಾಜದ ನಾಯಕ ಬಾಬುರಾವ ಚಿಂಚನಸೂರ ಅವರು, ಅಲ್ಲಿ ನೆರೆದಿದ್ದ ಲಕ್ಷಾಂತರ ಜನರ ಸಮ್ಮುಖದಲ್ಲಿ ಪ್ರಧಾನಿಗೆ ಸಮಾಜದ ಪರವಾಗಿ ಸನ್ಮಾನಿಸಿದಾಗ, ಕೋಲಿ ಸಮಾಜಕ್ಕೆ ನಾನು ಋಣಿಯಾಗಿದ್ದೇನೆ. ಈ ಸಮಾಜವನ್ನು ನಾನೆಂದೂ ಮರೆಯಲಾರೆ ಎಂದು ಹೇಳಿರುವುದು ಸಮಾಜಕ್ಕೆ ಬಲ ಬಂದಂತಾಗಿದೆ. ಚುನಾವಣೆಯ ನಂತರ ಖಂಡಿತವಾಗಿಯೂ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಿಸುವಲ್ಲಿ ಯಾವ ಸಂಶಯವೂ ಇಲ್ಲ. ಮೋದಿಜಿ ಅವರೇ ಪ್ರಧಾನಿ ಆಗಬೇಕು ಎಂಬ ಹಂಬಲದಿಂದ ಸಮಾಜವು ಬಿಜೆಪಿಗೆ ಬೆಂಬಲಿಸಬೇಕು, ಅಭಿನಂದಿಸಬೇಕು ಎಂಬುದು ಸಮಾಜದ ಅಭಿಪ್ರಾಯವಾಗಿದೆ ಎಂದು ಲಕ್ಷ್ಮಣ ಆವಂಟಿ ವಿವರಿಸಿದರು.

ಈ ಹಿಂದೆ ಕಲಬುರಗಿಗೆ ಹಲವಾರು ಪ್ರಧಾನ ಮಂತ್ರಿಗಳು ಬಂದು ಹೋಗಿದ್ದಾರೆ. ಯಾರೊಬ್ಬರೂ ಕೋಲಿ ಸಮಾಜದ ಹೆಸರು ಉಲ್ಲೇಖ ಮಾಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ಕೋಲಿ ಸಮಾಜವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳುವ ಮೂಲಕ ಸಮಾಜಕ್ಕೆ ಗೌರವ ನೀಡಿದ್ದಾರೆ. ಅವರಿಗೆ ಸಮಾಜವು ಗೌರವ ನೀಡುತ್ತದೆ.
| ಶರಣಪ್ಪ ಹದನೂರ ಸಮಾಜದ ಮುಖಂಡ