ಬಿಎಸ್​ಎನ್​ಎಲ್​ಗೆ ಬೆಸ್ಕಾಂ ಶಾಕ್

ಶಿವು ತೂಬಗೆರೆ

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯ ಬಿಎಸ್​ಎನ್​ಎಲ್ ಕಚೇರಿಗೆ ಬೆಸ್ಕಾಂ ಶಾಕ್ ಟ್ರೀಟ್​ವೆುಂಟ್ ನೀಡಿದೆ.

ವಿದ್ಯುತ್ ಬಿಲ್ ಪಾವತಿಸಿದೇ ಸತಾಯಿಸುತ್ತಿದ್ದ ಬಿಎಸ್​ಎನ್​ಎಲ್ ಕಚೇರಿಗೆ ಕಡೆಗೂ ಬೆಸ್ಕಾಂ ಕತ್ತಲೆ ದರ್ಶನ ಮಾಡಿಸಿದೆ.

20 ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕಚೇರಿ ಸಿಬ್ಬಂದಿ ಕತ್ತಲೆಯಲ್ಲಿ ಕಾಲಕಳೆಯುತ್ತಿದ್ದರೆ ನಾಡಕಚೇರಿ, ರೈತಸಂಪರ್ಕ ಕೇಂದ್ರ, ಎಟಿಎಂ ಸೇವೆ ಸೇರಿ ಇಂಟರ್​ನೆಟ್ ಅವಲಂಬಿತ ಎಲ್ಲ ಕಚೇರಿಗಳಿಗೆ ಇದರ ಬಿಸಿ ತಟ್ಟಿದೆ. ಪರಿಣಾಮವಾಗಿ ರೈತಾಪಿ ವರ್ಗ ಸಾರ್ವಜನಿಕ ಸೇವಾ ಸೌಲಭ್ಯಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ವಣವಾಗಿದೆ.

ಉತ್ತಮ ಸೇವೆಗೆ ಹೆಸರಾಗಿರುವ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್​ಎನ್​ಎಲ್)ವಿದ್ಯುತ್ ಬಿಲ್ ಬಾಕಿಯಿಂದಾಗಿ ಹೆಸರು ಕೆಡಿಸಿಕೊಳ್ಳುವಂತಾಗಿದೆ. ಬಿಎಸ್​ಎನ್​ಎಲ್ ಇಂಟರ್​ನೆಟ್ ಅವಲಂಬಿತ ಸರ್ಕಾರಿ ಸ್ವಾಮ್ಯದ ಕಚೇರಿಗಳು ಕೆಲಸವಿಲ್ಲದೆ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.

ಇಂಟರ್​ನೆಟ್ ಸೇವೆ ಬಂದ್: ಹೋಬಳಿಯ ನಾಡ ಕಚೇರಿಯಲ್ಲಿ 20 ದಿನಗಳಿಂದ ಸಾರ್ವಜನಿಕ ಕೆಲಸ ನಡೆಯುತ್ತಿಲ್ಲ. ಸಾರ್ವಜನಿಕರು ಪ್ರಶ್ನಿಸಿದರೆ ಸಿಬ್ಬಂದಿಯಿಂದ ತಾಂತ್ರಿಕ ತೊಂದರೆ ಎಂಬ ಸಿದ್ಧ ಉತ್ತರ ಎದುರಾಗುತ್ತಿದೆ. ಹೋಬಳಿಯ ಗ್ರಾಪಂ ನಾಡಕಚೇರಿ, ಬ್ಯಾಂಕ್, ಎಟಿಎಂ ಕೇಂದ್ರ, ರೈತ ಸಂಪರ್ಕ ಕೇಂದ್ರ ನೆಮ್ಮದಿ ಕೇಂದ್ರಗಳಲ್ಲಿ ಇದೇ ಪರಿಸ್ಥಿತಿ ಇದ್ದು, ಅಕ್ಷರಶಃ ಸರ್ಕಾರದ ಆಡಳಿತ ಯಂತ್ರವೇ ಸ್ಥಗಿತಗೊಂಡಂತಾಗಿದೆ.

ದಾಖಲೆ ಪಡೆಯಲು ಅಲೆದಾಟ: ಮಳೆಗಾಲದಲ್ಲಿ ರೈತರು ಸರ್ಕಾರದ ಸೌಲಭ್ಯ ಪಡೆಯಲು ಅಗತ್ಯ ದಾಖಲೆ ಸಲ್ಲಿಸುವುದು ಅನಿವಾರ್ಯ, ಹೋಬಳಿಯ ನೆಮ್ಮದಿ ಕೇಂದ್ರದಲ್ಲಿ ಪಹಣಿ ಪಡೆಯಲು ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಪರದಾಡುವಂತಾಗಿದೆ. ಅಲ್ಲದೆ ಸರ್ಕಾರದಿಂದ ಎಲ್ಲ ಪಡಿತರ ಚೀಟಿದಾರರಿಗೆ ಬೆರಳಚ್ಚು ದಾಖಲಿಸುವ ಕೆವೈಸಿ ಕಾರ್ಯವನ್ನು ಆಹಾರ ಇಲಾಖೆ ಆರಂಭಿಸಿದೆ. ಆದರೆ ಸರ್ವರ್ ಸ್ವಗಿತಗೊಂಡಿರುವುದರಿಂದ ರೈತರು ದಿಕ್ಕು ತೋಚದ ಪರಿಸ್ಥಿತಿಗೆ ಸಿಲುಕಿದ್ದಾರೆ. ಬಿಎಸ್​ಎನ್​ಎಲ್ ವಿದ್ಯುತ್ ಬಾಕಿ ಉಳಿಸಿಕೊಂಡಿರುವುದೇ ಇದೆಲ್ಲ ತೊಂದರೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿತ್ತನೆ ಬೀಜವೂ ಇಲ್ಲ:

ರೈತರಿಗೆ ಕೃಷಿ ಇಲಾಖೆ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿದೆ. ಆದರೆ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ದಾಖಲೆಗಳನ್ನು ಸಲ್ಲಿಸಬೇಕು. ಆದರೆ ಇಂಟರ್​ನೆಟ್ ಸ್ಥಗಿತಗೊಂಡಿರುವುದರಿಂದ ಯಾವುದೇ ಕಾರ್ಯ ನಡೆಯುತ್ತಿಲ್ಲ. ಪರಿಣಾಮವಾಗಿ ಬಿತ್ತನೆ ಬೀಜಕ್ಕೂ ಕೊಕ್ಕೆ ಬಿದ್ದಿದೆ. ಅಧಿಕಾರಿಗಳು ಏನೂ ಮಾಡಲಾಗದೆ ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.

 

ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿಲ್ಲ. ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ. ಕೂಡಲೇ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಾಗುವುದು.

| ಜಯಮ್ಮ ಅನಿಲ್​ಕುಮಾರ್ ಜಿಪಂ ಅಧ್ಯಕ್ಷೆ ಬೆಂಗಳೂರು ಗ್ರಾಮಾಂತರ ಜಿಲ್ಲೆ

ಕಳೆದ 2 ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ. ಈ ಬಗ್ಗೆ ಈಗಾಗಲೇ 2 ಬಾರಿ ನೋಟಿಸ್ ನೀಡಲಾಗಿದೆ. ಆದರೂ ಬಾಕಿ ಪಾವತಿಯಾಗಲಿಲ್ಲ. ಬೆಸ್ಕಾಂ ಇಲಾಖೆ ನಿಯಮದಂತೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಬಾಕಿ ಪಾವತಿಸಿದರಷ್ಟೆ ಮರುಸಂಪರ್ಕ ಕಲ್ಪಿಸಲಾಗುವುದು.

| ಗೋಪಾಲನಾಯಕ್ ಬೆಸ್ಕಾಂ ಜೆಇ ತೂಬಗೆರೆ

ಬಿಲ್ ಬಾಕಿ ಹಿನ್ನೆಲೆಯಲ್ಲಿ ಕರೆಂಟ್ ಕಟ್ ಮಾಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಲಾಖೆಗೆ ಹಣ ಬಂದ ಕೂಡಲೇ ಪಾವತಿ ಮಾಡಲಾಗುವುದು.

| ರಾಮಕೃಷ್ಣಪ್ಪ ಜೆಇ ಬಿಎಸ್​ಎನ್​ಎಲ್ ಕಚೇರಿ ತೂಬಗೆರೆ

Leave a Reply

Your email address will not be published. Required fields are marked *