ಬಿಎಸ್ಸೆನ್ನೆಲ್ ಗ್ರಾಹಕರ ಪರದಾಟ

ರಾಮನಗರ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಬಿಎಸ್ಸೆನ್ನೆಲ್ ಲೈನ್‌ಗಳು ತುಂಡಾಗುತ್ತಿದ್ದು, ಇದನ್ನು ಶೀಘ್ರ ದುರಸ್ತಿಪಡಿಸದ ಕಾರಣ ಸಂಪರ್ಕ ಕಡಿತಗೊಂಡು ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.

ದಶಪಥ ರಸ್ತೆ ಕಾಮಗಾರಿ ಆರಂಭವಾದ ದಿನದಿಂದಲೂ ಬಿಎಸ್ಸೆನ್ನೆಲ್ ಸಂಪರ್ಕ ಕಡಿತಗೊಂಡು ಜನರು ಕಿರುಕುಳ ಅನುಭವಿಸುವಂತಾಗಿದೆ. ರಸ್ತೆ ವಿಸ್ತರಣೆ ವೇಳೆ ಭೂಮಿ ಅಗೆಯುವಾಗ ರಸ್ತೆ ಪಕ್ಕದಲ್ಲಿ ಅಳವಡಿಸಿದ್ದ ಬಿಎಸ್ಸೆನ್ನೆಲ್ ತಂತಿಗಳು ತುಂಡಾಗುತ್ತವೆ. ಇದರಿಂದ ಫೋನ್ ಹಾಗೂ ಅಂತರ್ಜಾಲ ಸಂಪರ್ಕ ಕಡಿತಗೊಂಡು ಗ್ರಾಹಕರು ಯಾವುದೇ ಕೆಲಸಗಳಾಗದೆ ಕೂರುವಂತಾಗಿದೆ.

ಅಂತರ್ಜಾಲ ಸಂಪರ್ಕವಿಲ್ಲದೆ ಕೆಲಸವಿಲ್ಲ: ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸರ್ಕಾರಿ ಕಚೇರಿಗಳು, ನ್ಯಾಯಾಲಯ, ಬ್ಯಾಂಕುಗಳು, ಸಹಕಾರಿ ಬ್ಯಾಂಕ್‌ಗಳು, ಸಹಕಾರಿ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ಹಾಗೂ ಇಂಟರ್‌ನೆಟ್ ಸೇವಾ ಕೇಂದ್ರಗಳು, ಸೈಬರ್ ಶಾಪ್‌ಗಳು ಬಿಎಸ್ಸೆನ್ನೆಲ್ ಸಂಪರ್ಕವಿಲ್ಲದೆ ಕಾರ್ಯ ನಿರ್ವಹಿಸಲಾಗುತ್ತಿಲ್ಲ. ಒಂದು ಸಮಸ್ಯೆ ಬಗೆಹರಿಸಲು ಕನಿಷ್ಠ ಎರಡು ದಿನ ತೆಗೆದುಕೊಳ್ಳುತ್ತಿದೆ. 10 ನಿಮಿಷದ ಕೆಲಸಕ್ಕೂ 2ರಿಂದ ಮೂರು ದಿನ ಅಲೆದಾಡುವಂತಾಗಿದ್ದು, ಸಾಮಾನ್ಯ ಸಾರ್ವಜನಿಕರ ಕೆಲಸ ಕಾರ್ಯಗಳಿಗೂ ಹಿನ್ನಡೆಯಾಗಿದೆ.

ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಸಮಸ್ಯೆ: ದಶಪಥ ರಸ್ತೆ ನಿರ್ಮಾಣದ ಮೊದಲನೇ ಪ್ಯಾಕೇಜ್‌ನ ಕಾಮಗಾರಿ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಮದ್ದೂರು ತಾಲೂಕಿನ ನಿಡಗಟ್ಟದವರೆಗೂ ನಡೆಯುತ್ತಿದೆ. ಇಲ್ಲಿ ಬೈಪಾಸ್ ರಸ್ತೆ ಬಿಟ್ಟು ರಸ್ತೆ ವಿಸ್ತರಣೆಯಾಗುವ ಸ್ಥಳದಲ್ಲಿ ತಂತಿಗಳು ತುಂಡಾಗುತ್ತಿವೆ. ಇದರಿಂದ ರಾಮನಗರ ಹಾಗೂ ಚನ್ನಪಟ್ಟಣ ಅವಳಿ ನಗರಗಳ ಸಾರ್ವಜನಿಕರು ಮತ್ತು ಎಲ್ಲ ಕಚೇರಿಗಳು ಫೋನ್ ಹಾಗೂ ಇಂಟರ್‌ನೆಟ್ ಸಂಪರ್ಕವಿಲ್ಲದೆ ತೊಂದರೆ ಅನುಭವಿಸುತ್ತಿವೆ.

ದೂರವಾಣಿ ಕರೆ ಸ್ವೀಕರಿಸುವುದಿಲ್ಲ: ರಾಮನಗರ ಹಾಗೂ ಚನ್ನಪಟ್ಟಣ ನಗರಗಳ ಬಿಎಸ್ಸೆನ್ನೆಲ್ ಗ್ರಾಹಕ ಸೇವಾ ಕೇಂದ್ರಗಳಲ್ಲೂ ಸಂಪರ್ಕ ಕಡಿತವಾಗಿದ್ದು, ಸಾರ್ವಜನಿಕರು ಕರೆ ಮಾಡಿದರೂ ಸಂಪರ್ಕ ಸಿಗುತ್ತಿಲ್ಲ. ಜತೆಗೆ ಒಂದು ವೇಳೆ ಸಂಪರ್ಕವಿದ್ದು, ಕರೆ ಮಾಡಿದರೂ ಕಚೇರಿ ಸಿಬ್ಬಂದಿ ಕರೆ ಸ್ವೀಕರಿಸುವುದಿಲ್ಲ. ಸಮಸ್ಯೆ ತೀವ್ರವಾಗಿದ್ದು, ಕನಿಷ್ಠ 100ಕ್ಕಿಂತಲೂ ಹೆಚ್ಚು ಜನ ಪ್ರತಿನಿತ್ಯ ಅಲೆದಾಡುವಂತಾಗಿದೆ. ಇನ್ನು ರಜೆ ಬಂದರಂತೂ ಕಚೇರಿಗಳು ಕಾರ್ಯನಿರ್ವಹಿಸದ ಕಾರಣ ಬಿಎಸ್ಸೆನ್ನೆಲ್ ಗ್ರಾಹಕರು 2ರಿಂದ 4 ದಿನದವರೆಗೂ ಸಂಪರ್ಕವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಕನಕಪುರ, ಮಾಗಡಿಗೆ ಬದಲಿ ಮಾರ್ಗ: ರಾಮನಗರ ಸೇವಾ ಕೇಂದ್ರದಿಂದ ಜಿಲ್ಲೆಯ ನಾಲ್ಕು ತಾಲೂಕುಗಳಿಗೂ ಸಂಪರ್ಕ ಕಲ್ಪಿಸಲಾಗಿತ್ತು. ಹೆದ್ದಾರಿ ಕಾಮಗಾರಿಯಿಂದಾಗಿರುವ ಸಮಸ್ಯೆ ಅರಿತು ಕನಕಪುರ ಹಾಗೂ ಮಾಗಡಿ ತಾಲೂಕು ಕೇಂದ್ರಗಳು ಮತ್ತು ಸುತ್ತಲಿನ ಪ್ರದೇಶಗಳಿಗೆ ಬೆಂಗಳೂರು ಸೇವಾ ಕೇಂದ್ರದಿಂದ ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಚನ್ನಪಟ್ಟಣದ ಕೆಲವು ಪ್ರದೇಶಗಳಿಗೆ ಮಂಡ್ಯ ಬಿಎಸ್ಸೆನ್ನೆಲ್ ಸೇವಾ ಕೇಂದ್ರದಿಂದ ಸಂಪರ್ಕ ಕಲ್ಪಿಸಲಾಗುತ್ತದೆ. ಉಳಿದಂತೆ ರಾಮನಗರದಲ್ಲಿ ಇಂಜಿನ್ ಬದಲಾವಣೆ, ಹೊಸ ಕೇಬಲ್ ಅಳವಡಿಸಿ ಸಂಪರ್ಕ ಒದಗಿಸುವ ಕಾರ್ಯ ಭರದಿಂದ ಸಾಗಿದೆ.

ಹೆದ್ದಾರಿ ಕಾಮಗಾರಿಯ ರಸ್ತೆ ವಿಸ್ತರಣೆ ವೇಳೆ ತಂತಿಗಳು ತುಂಡಾಗಿ ಸಂಪರ್ಕ ಕಡಿತಗೊಳ್ಳುತ್ತಿದೆ. ಹೀಗಾಗಿ ರಾಮನಗರ ಮತ್ತು ಚನ್ನಪಟ್ಟಣ ವ್ಯಾಪ್ತಿಯಲ್ಲಿ ಬಿಎಸ್ಸೆನ್ನೆಲ್ ಸಂಪರ್ಕ ಹೊಂದಿರುವ ಸಾರ್ವಜನಿಕರಿಂದ ದೂರು ಹೆಚ್ಚಾಗಿದೆ. ಗ್ರಾಹಕರಿಂದ ದೂರು ಸ್ವೀಕರಿಸುತ್ತಿದ್ದು, ಸಂಪರ್ಕ ಒದಗಿಸಲು 2ರಿಂದ 3 ದಿನ ಬೇಕಾಗುತ್ತದೆ. ಇದಕ್ಕೆ ಗ್ರಾಹಕರು ಸಹಕಾರ ನೀಡಬೇಕು.
ಚಂದ್ರು ವಿಭಾಗೀಯ ಸಹಾಯಕ ಇಂಜಿನಿಯರ್, ಬಿಎಸ್ಸೆನ್ನೆಲ್, ರಾಮನಗರ

Leave a Reply

Your email address will not be published. Required fields are marked *