ಬಿಆರ್​ಟಿಎಸ್ ರಸ್ತೆಯಲ್ಲಿ ಜಲ ಗಂಡಾಂತರ

ಧಾರವಾಡ: ಕೋಟಿಗಟ್ಟಲೇ ಹಣ ಬಂದರೂ ಅಭಿವೃದ್ಧಿ ಹೆಸರಲ್ಲಿ ಅದಕ್ಷ ಅಧಿಕಾರಿಗಳು ಹೇಗೆ ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರ ಪ್ರಾಣ ಹಿಂಡುವಂಥ ಅವ್ಯವಸ್ಥೆ ಸೃಷ್ಟಿಸಬಲ್ಲರು ಎನ್ನುವುದಕ್ಕೆ ಇಲ್ಲಿಯ ಟೋಲ್​ನಾಕಾ ಬಳಿಯ ಬಿಆರ್​ಟಿಎಸ್ ರಸ್ತೆ ಗುರುವಾರ ಮಧ್ಯಾಹ್ನ ಮತ್ತೊಮ್ಮೆ ಸಾಕ್ಷಿಯಾಯಿತು.

ಗುರುವಾರ ಸುರಿದ ಮಳೆಯಿಂದಾಗಿ ಟೋಲ್ ನಾಕಾ ಬಳಿ ರಸ್ತೆ ಮೇಲೆ ಮತ್ತೆ ಭಾರಿ ಪ್ರಮಾಣದ ನೀರು ಜಮಾವಣೆಗೊಂಡಿತ್ತು. ಎಂದಿನಂತೆ ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಅದರ ತೊಂದರೆಗೆ ಗುರಿಯಾದ ಸಾವಿರಾರು ಜನರು ತಮ್ಮದೇ ಧಾಟಿಯಲ್ಲಿ ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿಯನ್ನು ಖಂಡಿಸಿ ಹಿಡಿಶಾಪ ಹಾಕಿದರು.

ಧಾರವಾಡ- ಹುಬ್ಬಳ್ಳಿ ಮಧ್ಯೆ ಬಿಆರ್​ಟಿಎಸ್ ಪಥಗಳನ್ನು ನಿರ್ವಿುಸಿ ಚಿಗರಿ ಬಸ್​ಗಳನ್ನು ಪ್ರಾಯೋಗಿಕವಾಗಿ ಓಡಿಸಲಾಗುತ್ತಿದೆ. ಚಿಗರಿ ಸಂಚಾರಕ್ಕೆ ದ್ವಿಪಥ ಹಾಗೂ ಆಚೆಈಚೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ರಸ್ತೆ ನಿರ್ವಿುಸಲಾಗಿದೆ. ಬಿಆರ್​ಟಿಎಸ್ ದ್ವಿಪಥಕ್ಕೆ ಗ್ರಿಲ್ ಅಳವಡಿಸಿದ ನಂತರ, ಸಣ್ಣ ಮಳೆಯಾದರೂ ಟೋಲ್​ನಾಕಾ ಬಳಿ ‘ಪ್ರವಾಹ’ ಸಾಮಾನ್ಯ ಎಂಬಂತಾಗಿದೆ.

ಹೇಗೆ ಹುಡುಕಿದರೂ ಇದಕ್ಕೆ ಅವೈಜ್ಞಾನಿಕ ಕಾಮಗಾರಿ ಎನ್ನುವುದನ್ನು ಬಿಟ್ಟು ಬೇರೆ ಕಾರಣ ಸಿಗುತ್ತಿಲ್ಲ. ಒಂದು ಸ್ಥಳದಲ್ಲಿ ರಸ್ತೆ ನಿರ್ವಿುಸುವಾಗ ಸೂಕ್ತ ಮಳೆನೀರು ಚರಂಡಿ ನಿರ್ವಿುಸಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲದಂತೆ ಅಧಿಕಾರಿಗಳು ಹಣ ಖರ್ಚು ಮಾಡಿದ್ದಾರೆ. ಇದರ ದುಷ್ಪರಿಣಾಮಕ್ಕೆ ಜನಸಾಮಾನ್ಯರು ಬೆಲೆ ತೆರಬೇಕಾಗಿ ಬಂದಿರುವುದು ದುರಂತವಾಗಿದೆ.

ಮೊದಲು ಹೀಗಾಗುತ್ತಿರಲಿಲ್ಲ:

ಬಿಆರ್​ಟಿಎಸ್ ರಸ್ತೆ ಕಾಮಗಾರಿ ಆರಂಭಕ್ಕೂ ಮೊದಲು ಟೋಲ್ ನಾಕಾದಲ್ಲಿ ‘ಪ್ರವಾಹ’ ಸ್ಥಿತಿ ಎದುರಾಗುತ್ತಿರಲಿಲ್ಲ. ಆದರೆ, ರಸ್ತೆ ಕಾಮಗಾರಿ ಮುಗಿದು ಗ್ರಿಲ್ ಅಳವಡಿಸಿದ ನಂತರ ಅವಾಂತರ ಮುಂದುವರಿದಿದೆ. ನಗರಕರ ಕಾಲನಿ, ಸಾರಸ್ವತಪುರ, ವಿದ್ಯಾಗಿರಿ, ಲಕ್ಷ್ಮೀಸಿಂಗನಕೇರಿ ಪ್ರದೇಶಗಳ ಮಳೆ ನೀರು ಟೋಲ್ ನಾಕಾಕ್ಕೆ ಬರುತ್ತದೆ. ಮೊದಲು ಕೂಡ ಈ ಪ್ರದೇಶಗಳ ನೀರು ಬರುತ್ತಿತ್ತು. ರಸ್ತೆ ಅಡಿಯಲ್ಲಿರುವ 2 ಕಾಲುವೆಗಳಲ್ಲಿ ಆಚೆಯ ನೀರು ಗಾಂವಕರ ಪ್ಲಾಝಾ ಕಟ್ಟಡದ ಕೆಳಗಿರುವ ಚರಂಡಿ ಮೂಲಕ ಜನ್ನತನಗರದತ್ತ ಹರಿಯುತ್ತಿತ್ತು. ಆದರೆ, 2 ಕಾಲುವೆಗಳ ಧಾರಣಶಕ್ತಿ ಕಡಿಮೆ ಇದೆ. ಇದನ್ನು ಪರಿಗಣಿಸದೇ ಅಧಿಕಾರಿಗಳು ಕೆಲಸ ಮಾಡಿಸಿ ಬಿಲ್ ಖರ್ಚು ಹಾಕಿದ್ದಾರೆ.

ರಾಜಕಾಲುವೆ ಏಕಿಲ್ಲ?:

ನಗರಕರ ಕಾಲನಿಯ ಮೇಲ್ಭಾಗದ ಮಳೆ ನೀರು ಮದೀನಾ ಹೋಟೆಲ್ ಎದುರಿನ ಚರಂಡಿ ಮೂಲಕ ಬರುತ್ತದೆ. ಸಾರಸ್ವತಪುರ, ವಿದ್ಯಾಗಿರಿ, ಲಕ್ಷ್ಮೀಸಿಂಗನಕೇರಿ ಪ್ರದೇಶಗಳ ನೀರು ಸಹ ಇಲ್ಲಿ ಜಮಾವಣೆಗೊಂಡು, ಗಾಂವಕರ ಪ್ಲಾಝಾ ಎದುರಿಗಿರುವ ಎರಡು ಚರಂಡಿಗಳಲ್ಲಿ ಹರಿಯುತ್ತದೆ. ಭಾರಿ ಪ್ರಮಾಣದ ನೀರು ಗಾಂವಕರ ಪ್ಲಾಝಾ ಕಟ್ಟಡದ ಅಡಿ ಇರುವ ಕಾಲುವೆ ಮೂಲಕ ಜನ್ನತ ನಗರದತ್ತ ಹೋಗುತ್ತದೆ. ಇಲ್ಲಿ ರಾಜಕಾಲುವೆಯೊಂದನ್ನು ನಿರ್ವಿುಸುವ ಯೋಜನೆ ಇದ್ದರೂ ಜಮೀನು ವಿವಾದದಿಂದ ಸಾಧ್ಯವಾಗಿಲ್ಲ. ಗಾಂವಕರ ಪ್ಲಾಝಾ ಮತ್ತು ಶೆಲ್ ಪೆಟ್ರೋಲ್ ಬಂಕ್ ನಡುವೆ ಹಳ್ಳಿಕೇರಿ ಎಂಬುವರ ಖಾಸಗಿ ಒಡೆತನದ ಜಾಗವಿದೆ. ಅಲ್ಲಿ ರಾಜಕಾಲುವೆ ನಿರ್ವಿುಸುವ ಯೋಜನೆ ಇದೆ ಎಂದು ಪಾಲಿಕೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಹಾಳಾಗಲಿದೆ ರಸ್ತೆ:

ನೀರು ನಿಂತರೆ ಡಾಂಬರು ರಸ್ತೆ ಬೇಗ ಹಾಳಾಗುತ್ತದೆ. ಒಮ್ಮೆ ದೊಡ್ಡ ಮಳೆ ಬಂದರೆ ಟೋಲ್​ನಾಕಾ ಬಳಿ ದಿನಗಟ್ಟಲೇ ರಸ್ತೆಯಲ್ಲಿ ನೀರು ನಿಲ್ಲುತ್ತದೆ. ವಾಹನಗಳು ನೀರಿನಲ್ಲೇ ಸಾಗುತ್ತವೆ. ಹೀಗಾಗಿ ಈ ಮಳೆಗಾಲ ಮುಗಿಯುವಷ್ಟರಲ್ಲಿ ಅಲ್ಲಿ ಡಾಂಬರು ರಸ್ತೆ ಹಾಳಾಗಿ ಹೊಂಡಗಳು ನಿರ್ವಣವಾಗುವ ಅಪಾಯವಿದೆ. ಮುಂದೆ ಅಧಿಕಾರಿಗಳು ಹೊಂಡ ತುಂಬಿಸುವ ತುಂಡುಗುತ್ತಿಗೆ ಕಾಮಗಾರಿ ಕೈಗೊಂಡು ಸಾರ್ವಜನಿಕ ತೆರಿಗೆ ಹಣ ಮತ್ತಿಷ್ಟು ಖರ್ಚು ಮಾಡಲಿದ್ದಾರೆ, ಅವರು ಬರೆದಿದ್ದೇ ಲೆಕ್ಕ! ಸಾರ್ವಜನಿಕ ವ್ಯವಸ್ಥೆ ಉದ್ಧಾರವಾಗಲು ಹೇಗೆ ಸಾಧ್ಯ ಎಂದು ಸ್ಥಳೀಯರು ಖಾರವಾಗಿ ಪ್ರಶ್ನಿಸಿದ್ದಾರೆ.

ತಮ್ಮ ರಸ್ತೆ ಹಾಳಾಗದಂತೆ ನೋಡಿಕೊಳ್ಳಲು ಪಾಲಿಕೆಯವರ ಮೇಲೆ ಒತ್ತಡ ಹಾಕಿ ಮಳೆಗಾಲ ಶುರುವಾಗುವುದರೊಳಗೇ ಚರಂಡಿ ಸ್ವಚ್ಛ ಮಾಡಿಸಲೂ ಬಿಆರ್​ಟಿಎಸ್/ಕೆಆರ್​ಡಿಸಿಎಲ್ ಅಧಿಕಾರಿಗಳು ಲಕ್ಷ್ಯ ಹಾಕಿಲ್ಲ. ಈಗ ಎಲ್ಲ ಅಧಿಕಾರಿಗಳೂ ಹೇಗಾದರೂ ತಮ್ಮ ತಪ್ಪಿಲ್ಲ ಎನ್ನುತ್ತಾರೆಯೆ ಹೊರತು ಯಾರ ತಪ್ಪು ಎಂದು ಗಟ್ಟಿಯಾಗಿ ಹೇಳುವ ಧೈರ್ಯವನ್ನೂ ತೋರಿಸಿದ್ದು ಕಂಡುಬಂದಿಲ್ಲ.

ಪ್ರತಿ ಬಾರಿ ಮಳೆಯಾದಾಗ ನಿಂತ ನೀರನ್ನು ಸಾಗಿಸಲು ಪಾಲಿಕೆ ಕಾರ್ಯನಿರ್ವಹಿಸುತ್ತಿದೆ. ಚರಂಡಿಗಳಲ್ಲಿ ಜಮೆಯಾಗುವ ತ್ಯಾಜ್ಯವನ್ನು ತೆಗೆದು ನಿರ್ವಹಣೆ ಮಾಡಲಾಗುತ್ತಿದೆ.

| ವಿ.ಎಂ. ಸಾಲಿಮಠ, ಪಾಲಿಕೆ ವಲಯಾಧಿಕಾರಿ

ಬಿಆರ್​ಟಿಎಸ್ ಯೋಜನಾ ನೀಲಿನಕ್ಷೆಯಂತೆ ಕಾಮಗಾರಿ ಅನುಷ್ಠಾನ ಮಾಡಲಾಗಿದೆ. ಪಾಲಿಕೆಯ ಸಹಯೋಗದೊಂದಿಗೆ ನಾಲಾ ಸಫಾಯಿ ಅಭಿಯಾನ ನಡೆಸಲಾಗಿತ್ತು. ಟೋಲ್ ನಾಕಾ ಪ್ರದೇಶದ ನಾಲಾಗಳಲ್ಲಿ ಅಗ್ನಿಶಾಮಕ ದಳದ ಪರಿಕರಗಳಿಂದ ತ್ಯಾಜ್ಯ ತೆಗೆಸಲು ಸಲಹೆ ನೀಡಲಾಗಿದೆ.

ಪ್ರೊಜೆಕ್ಟ್ ಮ್ಯಾನೇಜ್​ವೆುಂಟ್ ಕನ್​ಸಲ್ಟಂಟ್ 

ರಾಜಕಾಲುವೆಗಳ ಒತ್ತುವರಿ ಹಾಗೂ ತ್ಯಾಜ್ಯ ಹಾಕುವುದರಿಂದ ನೀರು ಸರಾಗವಾಗಿ ಹೋಗುತ್ತಿಲ್ಲ. ಈ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಅಡಿ ಕಾಮಗಾರಿ ಕೈಗೊಳ್ಳುವ ಯೋಜನೆ ರೂಪುಗೊಳ್ಳುತ್ತಿದೆ. ಸ್ಮಾರ್ಟ್ ಸಿಟಿ ತಂಡ ಈಗಾಗಲೇ ಭೇಟಿ ನೀಡಿದ್ದು, ಜಿಲ್ಲಾಧಿಕಾರಿ ಮಟ್ಟದ ಸಮಿತಿಯಲ್ಲಿ ಯೋಜನೆ ಅಂತಿಮಗೊಳ್ಳಬೇಕಿದೆ.

ಎನ್.ಕೆ. ಕುರಂದಕರ, ಕೆಆರ್​ಡಿಸಿಎಲ್ ಅಧಿಕಾರಿ 

Leave a Reply

Your email address will not be published. Required fields are marked *