ಬಿಆರ್​ಟಿಎಸ್ ಬಸ್​ನಲ್ಲಿ ದೋಷ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಧ್ಯೆ ಸಂಚರಿಸುತ್ತಿರುವ ಬಿಆರ್​ಟಿಎಸ್ ಬಸ್​ವೊಂದರಲ್ಲಿ ಈಚೆಗೆ ಹೊಗೆ ಹಾಗೂ ವಾಸನೆ ಕಾಣಿಸಿಕೊಂಡು ಕೆಲಕಾಲ ಪ್ರಯಾಣಿಕರನ್ನು ಕಾಡಿತ್ತು.

ಹುಬ್ಬಳ್ಳಿ ರೈಲು ನಿಲ್ದಾಣದಿಂದ ಹೊರಟ ಚಿಗರಿ ಬಸ್ ಹೊಸೂರವರೆಗೆ ಬರುತ್ತಿದ್ದಂತೆ ಸಣ್ಣಗೆ ಸಮಸ್ಯೆ ಕೊಡಲು ಆರಂಭಿಸಿತು. ಬಸ್​ನ ವೇಗ ಕೂಡ ಕಡಿಮೆಯಾಯಿತು. ಆಗಲೇ ಹಿಂದಿನಿಂದ ಸುಟ್ಟ ವಾಸನೆಯೂ ಪ್ರಯಾಣಿಕರಿಗೆ ಬಂದಿದೆ. ವಿದ್ಯಾನಗರ ಬಿವಿಬಿ ಎದುರಿಗೆ ಬರುತ್ತಿದ್ದಂತೆ ಸುಟ್ಟ ವಾಸನೆ ಹೆಚ್ಚಾಗಿದೆ. ಪ್ರಯಾಣಿಕರೊಬ್ಬರು ಚಾಲಕನಿಗೆ ಹೇಳಿ ಬಸ್ ನಿಲ್ಲಿಸಿದ್ದಾರೆ. ಕೂಡಲೇ ಎಲ್ಲರೂ ಕೆಳಗೆ ಇಳಿದಿದ್ದಾರೆ ಎಂದು ಹೇಳಲಾಗಿದೆ.

ಈ ಘಟನೆಯನ್ನು ಪ್ರಯಾಣಿಕರೊಬ್ಬರು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಅದು ಚಿಗರಿಯಲ್ಲಿ ಅವರ ಮೊದಲ ಅನುಭವ ಎಂದೂ ಹೇಳಿಕೊಂಡಿದ್ದಾರೆ.

ಕಳೆದ ವರ್ಷದ ಅಕ್ಟೋಬರ್​ನಿಂದ ಚಿಗರಿ ಸಂಚಾರ ಆರಂಭವಾಗಿದೆ. ಎಲ್ಲ ಬಸ್​ಗಳು ಎಸಿಯಾಗಿದ್ದು, ಪ್ರಯಾಣಿಕರಿಗೆ ವಾತಾನುಕೂಲಿ ಅನುಭವ ನೀಡುತ್ತಿರುವುದೇನೋ ನಿಜ. ಆದರೆ, ಅದರಲ್ಲಿನ ಪ್ರಯಾಣದ ಸುರಕ್ಷತೆ ಬಗ್ಗೆ ಜನ ಆತಂಕ ಪಡುವಂತಾಗಿದೆ.

ಇಲ್ಲಿಯ ಹಳೇ ಬಸ್ ನಿಲ್ದಾಣ ಎದುರು ಕೂಡ ಭಾನುವಾರ ಒಂದು ಬಸ್ ಬಹಳ ಹೊತ್ತಿನವರೆಗೆ ಚಲಿಸದೇ ನಿಂತುಕೊಂಡಿತ್ತು ಎಂದು ಹೇಳಲಾಗಿದೆ.

ಚಿಗರಿ ಬಸ್​ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ತಾಂತ್ರಿಕ ದೋಷ, ಘಟನೆ ಬಗ್ಗೆ ಪ್ರತಿಕ್ರಿಯೆಗಾಗಿ ಬಿಆರ್​ಟಿಎಸ್ ವ್ಯವಸ್ಥಾಪಕ ನಿರ್ದೇಶಕರು, ಉಪ ಪ್ರಧಾನ ವ್ಯವಸ್ಥಾಪಕರು ಸೇರಿದಂತೆ ಅಧಿಕಾರಿಗಳನ್ನು ಸಂರ್ಪಸಿದರೆ ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.