ಬಿಆರ್​ಟಿಎಸ್ ಕಾರಿಡಾರ್​ನಲ್ಲಿ ಮಕ್ಕಳ ಸರ್ಕಸ್!

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಧ್ಯೆ ನಿರ್ವಿುಸಲಾಗಿರುವ ಬಿಆರ್​ಟಿಎಸ್ ಕಾರಿಡಾರ್ ಮಕ್ಕಳ ಪಾಲಿಗೆ ಯಮಧೂತನಾಗಿ ಪರಿವರ್ತನೆಯಾಗುತ್ತಿದೆ. ಬಸ್ ನಿಲ್ದಾಣಗಳಿಗೆ ಹೋಗಲು ಮಕ್ಕಳು ನಿತ್ಯವೂ ಕಾರಿಡಾರ್ ಮಧ್ಯದ ಬ್ಯಾರಿಕೇಡ್ ಹಾರಿಕೊಂಡು ಹೊರಟಿದ್ದಾರೆ. ಸುತ್ತುಬಳಸಿ ಬರುವುದನ್ನು ತಪ್ಪಿಸಿಕೊಳ್ಳಲು ಮಕ್ಕಳು ಬ್ಯಾರಿಕೇಡ್ ಹಾರಿ ಹೋಗುತ್ತಿದ್ದಾರೆ. ಆದರೆ, ಈ ಒಳದಾರಿ ಬಳಸುವುದು ಅತ್ಯಂತ ಅಪಾಯಕಾರಿಯಾಗಿದೆ. ಮಕ್ಕಳಿಗೆ ಮಾತ್ರ ಸಂಭವನೀಯ ಅಪಾಯದ ಯಾವುದೇ ಅರಿವು ಇಲ್ಲ.

ಇಲ್ಲಿಯ ನವನಗರ ಬಸ್ ನಿಲ್ದಾಣಕ್ಕೆ ಹೋಗಲು ಫುಟ್ ಓವರ್ ಬ್ರಿಜ್ (ಪಾದಚಾರಿ ಮೇಲ್ಸೇತುವೆ) ನಿರ್ವಿುಸಲಾಗಿದೆ. ಆದರೆ, ಹೆಚ್ಚಿನ ಮಕ್ಕಳು ಮೇಲ್ಸೇತುವೆ ಬಳಸುವುದಿಲ್ಲ. ಬದಲಾಗಿ ಕಾರಿಡಾರ್ ಪ್ರತ್ಯೇಕಿಸಲು ನಿರ್ವಿುಸಿರುವ ಬ್ಯಾರಿಕೇಡ್ ಹಾರುವುದು ಸಾಮಾನ್ಯವಾಗಿ ಬಿಟ್ಟಿದೆ.

ಅನೇಕ ಸಲ ಅತಿ ವೇಗವಾಗಿ ಬರುವ ಹಾಗೂ ಹೋಗುವ ವಾಹನಗಳ ಮಧ್ಯೆ ತೂರಿಕೊಂಡು ಮಕ್ಕಳು ಬ್ಯಾರಿಕೇಡ್ ಜಿಗಿಯುವ ಸಾಹಸ ಮಾಡುತ್ತಿದ್ದಾರೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿಗಳು ಬಿಆರ್​ಟಿಎಸ್​ನ ಎಡವಟ್ಟು ಕಾಮಗಾರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಫ್ಟ್ ಹೆಸರಿಗಷ್ಟೇ: ಮೇಲ್ಸೇತುವೆಗೆ ತಲುಪಲು ಬಿಆರ್​ಟಿಎಸ್​ನವರು ಲಿಫ್ಟ್​ಗಳನ್ನು ನಿರ್ವಿುಸಿದ್ದಾರೆ. ಆದರೆ, ಅವುಗಳನ್ನು ಇನ್ನೂ ಬಳಕೆಗೆ ಮುಕ್ತಗೊಳಿಸಿಲ್ಲ. ಹಾಗಾಗಿ ವೃದ್ಧರು, ಮಹಿಳೆಯರು, ಮಕ್ಕಳು ಯಾರೇ ಇದ್ದರೂ ಸುತ್ತಿ ಬಳಸಿ ಬಸ್ ನಿಲ್ದಾಣಕ್ಕೆ ಬರಬೇಕು. ಇದೇ ಕಾರಣಕ್ಕೆ ಕೆಲವರು ಬ್ಯಾರಿಕೇಡ್ ಹಾರುವ ಅಡ್ಡ ದಾರಿಯಲ್ಲಿ ಪಾರಾಗಿ ಬರುತ್ತಿದ್ದಾರೆ.

ಈ ಮೊದಲು ಫ್ಲೈಓವರ್ ಪಕ್ಕದಲ್ಲಿ ಸಣ್ಣದಾದ ದಾರಿ ಇತ್ತು. ಅದು ಒಂದಿಷ್ಟು ಸುರಕ್ಷಿತವಾಗಿತ್ತು. ಅದನ್ನು ಬಂದ್ ಮಾಡಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಹೋಗುವಷ್ಟು ಸಮಯ ಮತ್ತು ಕಾಳಜಿ ಹಲವರಿಗೆ ಇಲ್ಲವಾಗಿದೆ. ಬ್ಯಾರಿಕೇಡ್ ದಾಟುವುದನ್ನು ಯಾರೂ ತಡೆಯುವುದಿಲ್ಲ, ಪ್ರಶ್ನಿಸುವವರೂ ಇಲ್ಲ. ಶಾಲಾ ಮಕ್ಕಳಂತೂ ಹೆಗಲಿಗೆ ಭಾರವಾದ ಬ್ಯಾಗ್ ಹಾಕಿಕೊಂಡೇ ಈ ಸಾಹಸ ಮಾಡುತ್ತಿದ್ದಾರೆ.

ರಸ್ತೆ ಮಧ್ಯೆ ಇರುವ ಬಿಆರ್​ಟಿಎಸ್ ನಿಲ್ದಾಣಕ್ಕೆ ಕೆಳಸೇತುವೆ ನಿರ್ವಿುಸಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿತ್ತು. ಆದರೆ, ಅದು ಸುರಕ್ಷಿತವಲ್ಲ ಎನ್ನುವ ಯಾರೋ ಎಲ್ಲೋ ನಡೆಸಿದ ಸಮೀಕ್ಷೆ ನೆಪ ಹೇಳಿ ಬಿಆರ್​ಟಿಎಸ್​ನವರು ಮೇಲ್ಸೇತುವೆ ನಿರ್ವಿುಸಿದ್ದಾರೆ. ಜನರಿಗೆ ರ‍್ಯಾಂಪ್ ಹತ್ತಿ (ಸುತ್ತು ಬಳಸಿ) ಹೋಗುವುದು ರೂಢಿಯಾಗುತ್ತಿಲ್ಲ.

ನವನಗರ ಬಸ್ ನಿಲ್ದಾಣಕ್ಕೆ ತೆರಳುವವರು ಪಡುವ ಸಾಹಸವನ್ನು ಸ್ಥಳೀಯ ಕೆಲವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಬಿಆರ್​ಟಿಎಸ್​ನ ಅಪ್ರಾಯೋಗಿಕವಾದ ಈ ವ್ಯವಸ್ಥೆಯ ಇನ್ನೊಂದು ಪರಿಣಾಮ ಏನು ಎನ್ನುವುದನ್ನು ಬಿಂಬಿಸಿದ್ದಾರೆ. ‘ಬಿಆರ್​ಟಿಎಸ್ ಲಿಫ್ಟ್- ಪ್ರಾಣ ಹೋದ್ರೆ ಈ ಭೂಮಿಯಿಂದನೇ ಲೆಫ್ಟ್’ ಎಂಬ ಒಕ್ಕಣೆಯೊಂದಿಗೆ ಬಸವರಾಜ ಗೋಕಾವಿ ಎಂಬುವವರು ಫೇಸ್​ಬುಕ್​ನಲ್ಲಿ ಟೀಕಾತ್ಮಕವಾಗಿ ಬರೆದಿದ್ದಾರೆ. ಇನ್ನಾದರೂ ಬಿಆರ್​ಟಿಎಸ್ ಅಧಿಕಾರಿಗಳು ಇದನ್ನು ಗಮನಿಸಿ, ಪ್ರಯಾಣಿಕರಿಗೆ ಸುರಕ್ಷಿತತೆ ಒದಗಿಸುವರೆ?

ಅಂಡರ್ ಬ್ರಿಜ್ ಸುರಕ್ಷಿತ : ಬೆಂಗಳೂರಿನ ಮೆಜೆಸ್ಟಿಕ್ ಮತ್ತು ವಿಧಾನಸೌಧ ಎದುರು ರಸ್ತೆ ದಾಟುವುದು ಒಂದು ಹರಸಾಹಸ. ಸಂಭವಿಸುತ್ತಿದ್ದ ಅಪಘಾತಗಳಿಗೆ ಲೆಕ್ಕವಿರಲಿಲ್ಲ. ಸುಮಾರು 15 ವರ್ಷದ ಹಿಂದೆ ಅಂಡರ್ ಬ್ರಿಜ್ (ಕೆಳಸೇತುವೆ) ನಿರ್ಮಾಣ ಮಾಡಿದ ಮೇಲೆ ಅಲ್ಲಿ ಪಾದಚಾರಿಗಳಿಗೆ ರಸ್ತೆ ದಾಟುವುದು ಕಷ್ಟವಲ್ಲ. ಕೆಳಸೇತುವೆಯಲ್ಲಿ 24 ಗಂಟೆ ವಿದ್ಯುದ್ದೀಪ ಬೆಳಗುವಂತೆ, ಸಿಸಿ ಕ್ಯಾಮರಾ ಚಾಲೂ ಇರುವಂತೆ ಹಾಗೂ ಒಬ್ಬಿಬ್ಬರು ಭದ್ರತಾ ರಕ್ಷಕರು ಕರ್ತವ್ಯದಲ್ಲಿರುವಂತೆ ನೋಡಿಕೊಂಡರೆ ಅಸುರಕ್ಷತೆ ಪ್ರಶ್ನೆ ಉದ್ಭವಿಸುವುದಿಲ್ಲ.

ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಜಾರಿ ಮಾಡಿರುವ ಮಹಾನ್ ಬಿಆರ್​ಟಿಎಸ್ ಅಧಿಕಾರಿಗಳು ಮಾತ್ರ ಇಂಥ ಉದಾಹರಣೆ ನೋಡಿ, ಅಧ್ಯಯನ ಮಾಡಿಕೊಂಡು ಬರಲು ತಯಾರಿಲ್ಲ. ಇನ್ನೂ ಕೆಲವು ಕಡೆ ಫುಟ್ ಓವರ್ ಬ್ರಿಜ್, ಲಿಫ್ಟ್ ಎಂದು ನಿರ್ಮಾಣ ಕಾರ್ಯ ನಡೆಸಿದ್ದಾರೆ. ಇನ್ನೇನು ಆಗಲಿದೆಯೊ!

Leave a Reply

Your email address will not be published. Required fields are marked *