ಬಾವಿ ಹೂಳೆತ್ತಲು ಮುಂದಾದ ನಿವಾಸಿಗಳು

ನರೇಗಲ್ಲ: ಅಂತರ್ಜಲ ಕುಸಿತದಿಂದ ನೀರಿನ ಕೊರತೆ ಹಿನ್ನೆಲೆಯಲ್ಲಿ ಸ್ಥಳೀಯ ಕಟ್ಟಿ ಬಸವೇಶ್ವರ ಸಂಘದೊಂದಿಗೆ ನಾಗರಿಕರು ಪಟ್ಟಣದ ಪಾಯಪ್ಪಗೌಡ್ರ ಓಣಿಯಲ್ಲಿನ ಪುರಾತನ ಕಾಲದ ಬಾವಿ ಹೂಳೆತ್ತುವ ಕಾರ್ಯ ಕೈಗೊಂಡಿದ್ದಾರೆ.

ಬಾವಿ ಸಂಪೂರ್ಣ ಸ್ವಚ್ಛವಾಗಿದ್ದು ಮಳೆ ನೀರು ಸಂಗ್ರಹಕ್ಕೆ ಸಿದ್ಧವಾಗಿದೆ. ಇತ್ತೀಚೆಗೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದ ಬಾವಿಯನ್ನು ಸ್ಥಳೀಯರು ಹಾಗೂ ರಿನ್​ವಿನ್ ಕಂಪನಿಯ ಸಹಾಯದೊಂದಿಗೆ ಸ್ವಚ್ಛವಾಗಿಸಿದ್ದರು. ಇದನ್ನು ಕಂಡು ಕಟ್ಟಿ ಬಸವೇಶ್ವರ ಸಂಘದ ಸದಸ್ಯರು ಹಾಗೂ ಓಣಿಯ ಹಿರಿಯರು ತಮ್ಮ ಓಣಿಯ ಬಾವಿ ಹೂಳೆತ್ತಲು ಮುಂದಾಗಿದ್ದಾರೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಬಾವಿಯ ನೀರನ್ನು ಜನ ಕುಡಿಯಲು ಬಳಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ನೀರಿಗೆ ಬೇರೆ ಮೂಲ ಅವಲಂಬಿಸಿದ್ದರಿಂದ ಇದರ ಬಳಕೆ ಸ್ಥಗಿತವಾಗಿತ್ತು. ಈಗ ಅಂತರ್ಜಲ ಕಡಿಮೆಯಾಗಿ ನೀರಿನ ಕೊರತೆ ಎದುರಾಗಿದೆ. ಹೀಗಾಗಿ ಮತ್ತೆ ಇಲ್ಲಿನ ನಿವಾಸಿಗಳು ಬಾವಿ ಪುನಃಶ್ಚೇತನ ಕಾರ್ಯ ಕೈಗೊಂಡಿದ್ದಾರೆ. ಬಾವಿ ಹೂಳೆತ್ತುವ ಕಾರ್ಯಕ್ಕೆ ಬೆಂಗಳೂರಿನ ರಿನ್​ವಿನ್ ಕಂಪನಿಯ ಮಾಲೀಕ, ಸ್ಥಳೀಯ ನಿವಾಸಿ ಮಲ್ಲಿಕಾರ್ಜುನ ರಾಗಿ 10 ಸಾವಿರ ರೂ. ಸಹಾಯಧನ ನೀಡಿ ನೆರವಾಗಿದ್ದಾರೆ.

ಕೆರೆ ಹಾಗೂ ಬಾವಿಗಳ ಹೂಳೆತ್ತುವ ಕಾರ್ಯಕ್ಕೆ ಜನತೆ ಸ್ವಯಂ ಪ್ರೇರಿತವಾಗಿ ಕಾರ್ಯ ಮಾಡುತ್ತಿರುವುದು ಖುಷಿ ತಂದಿದೆ. ಅಂತರ್ಜಲ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಜನತೆಯ ಕಾರ್ಯ ನಿಜಕ್ಕೂ ಶ್ಲಾಘನೀಯ.

| ಜ್ಯೋತಿ ಪಾಯಪ್ಪಗೌಡ್ರ, 9ನೇ ವಾರ್ಡ್ ಸದಸ್ಯೆ