ಬಾವಿಗೆ ಬಿದ್ದು ಯುವಕನ ಸಾವು

ಬಸವಕಲ್ಯಾಣ: ನೀರಿಗಾಗಿ ಹೋದ ಯುವಕನೊಬ್ಬ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಹಿರೇನಾಗಾಂವ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಗ್ರಾಮದ ಶರಣಪ್ಪ ಬಿರಾದಾರ(30) ಮೃತ ವ್ಯಕ್ತಿ. ಬಾವಿಯಲ್ಲಿ ಹಗ್ಗದಿಂದ ನೀರು ಸೇದುವಾಗ ಕಾಲು ಜಾರಿ ಬಿದ್ದಿದ್ದಾನೆ ಎನ್ನಲಾಗಿದೆ.
ಮುಡಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಹಸೀಲ್ದಾರ್ ಸಾವಿತ್ರಿ ಸಲಗರ, ತಾಪಂ ಇಒ ಬಿರೇಂದ್ರಸಿಂಗ್ ಠಾಕೂರ, ಪಿಎಸ್ಐ ವಾಸಿಮ್ ಪಟೇಲ್ ಸೇರಿ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಶಾಸಕರ ಭೇಟಿ: ಘಟನೆ ಬಗ್ಗೆ ಮಾಹಿತಿ ಪಡೆದ ಶಾಸಕ ಬಿ.ನಾರಾಯಣರಾವ ಗ್ರಾಮಕ್ಕೆ ಭೇಟಿ ನೀಡಿ, ಮೃತ ವ್ಯಕ್ತಿ ಕುಟುಂಬದವರಿಗೆ ಸಾಂತ್ವನ ಹೇಳಿದ ಶಾಸಕರು, ವೈಯಕ್ತಿಕವಾಗಿ 50 ಸಾವಿರ ಧನ ಸಹಾಯ ಮಾಡಿದರು. ಸರ್ಕಾರದಿಂದ ಸಾಧ್ಯವಿರುವ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಸ್ಥರ ದೂರು: ಹಿರೇನಾಗಾಂವ ಗ್ರಾಮದಲ್ಲಿ ನೀರಿನ ಸಮಸ್ಯೆ ಕುರಿತು ಸಾಕಷ್ಟು ಸಲ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತಿಲ್ಲ. ಗ್ರಾಮದ ನಲ್ಲಿಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗುತಿಲ್ಲ. ಟ್ಯಾಂಕರ್ ನೀರು ಸಾಕಾಗುತ್ತಿಲ್ಲ. ನೀರಿನ ಸಮಸ್ಯೆಯಿಂದ ಜನರು ಬಾವಿಗಳಿಗೆ ತೆರಳಿ ನೀರು ತರಬೇಕಾಗುತ್ತಿದೆ ಎಂದು ಗ್ರಾಮಸ್ಥರು ಶಾಸಕರ ಎದುರು ಸಮಸ್ಯೆ ತೋಡಿಕೊಂಡರು.
ಬಾವಿಗಳಿಗೆ ಕಬ್ಬಿಣದ ಜಾಲಿ ಅಳವಡಿಸಬೇಕು ಎಂದು ಮನವಿ ಮಾಡಿದರೂ ಜಾಲಿ ಅಳವಡಿಸಿಲ್ಲ. ಯುವಕನ ಸಾವಿಗೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷೃವೇ ಕಾರಣ ಎಂದು ಗ್ರಾಮಸ್ಥರು ಶಾಸಕರ ಎದುರು ಅಳಲು ತೊಡಿಕೊಂಡರು. ನೀರಿನ ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.

Leave a Reply

Your email address will not be published. Required fields are marked *