ಹನೂರು: ಪಟ್ಟಣದ ಶ್ರೀಮೈಸೂರು ಮಾರಮ್ಮ ದೇಗುಲದ ಸಮೀಪದ ಮನೆ ಹಿಂಬದಿಯಲ್ಲಿ ಶುಕ್ರವಾರ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಮೇಲೆತ್ತಿ ರಕ್ಷಿಸಿದ್ದಾರೆ.
ಬೆಳಗ್ಗೆ 11.30ರಲ್ಲಿ ಪವಿತ್ರಾ ಅವರಿಗೆ ಸೇರಿದ ಮನೆಯ ಹಿಂಭಾಗದಲ್ಲಿದ್ದ 6 ಅಡಿ ಅಗಲ ಹಾಗೂ 30 ಅಡಿ ಆಳದ ಬಾವಿಗೆ ಬಿಡಾಡಿ ಹಸುವೊಂದು ಬಾವಿಗೆ ಬಿದ್ದಿತು.
ಈ ಬಗ್ಗೆ ತಿಳಿದ ಮಹದೇವಪ್ರಸಾದ್ ಎಂಬುವರು ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬಾವಿಯಲ್ಲಿದ್ದ ನೀರನ್ನು ಹೊರಹಾಕಿ ಸ್ಥಳೀಯರ ಸಹಕಾರ ಪಡೆದು ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿ ರಕ್ಷಿಸಿದರು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಪ್ರಶಾಂತ್‌ನಾಯಕ್, ಸಿಬ್ಬಂದಿ ಮಹೇಶ್, ಪೆರಿಯನಾಯಗಂ, ನಾಗೇಶ್, ಲೋಕೇಶ್, ಚಂದ್ರೇಗೌಡ ಹಾಗೂ ಮನೋಹರ್ ಭಾಗವಹಿಸಿದ್ದರು.