ಬಾವಿಗೆ ಬಿದ್ದಿದ್ದ ವ್ಯಕ್ತಿ ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ

ಸಾಗರ: ಶಿವಪ್ಪನಾಯಕ ನಗರ ಗ್ಯಾಸ್ ಗೋದಾಮು ಹಿಂಭಾಗದಲ್ಲಿ ತೆರೆದ ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಶುಕ್ರವಾರ ಅಗ್ನಿಶಾಮಕ ದಳ ಸಿಬ್ಬಂದಿ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.

ನಿವೃತ್ತ ಮುಖ್ಯ ಶಿಕ್ಷಕ ಎಚ್.ಟಿ.ಚಂದ್ರಪ್ಪ (65) ಕಾಲು ಜಾರಿ 25 ಅಡಿ ಆಳದ ಬಾವಿಯಲ್ಲಿ ಬಿದ್ದಿದ್ದಾರೆ. ಬಾವಿಯಲ್ಲಿ 6ರಿಂದ 8 ಅಡಿಗಳಷ್ಟು ನೀರಿತ್ತು. ಚಂದ್ರಪ್ಪ ಅವರು ಬಾವಿಗೆ ಬಿದ್ದಿದ್ದನ್ನು ಗಮನಿಸಿದ ಕೆಲ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬಾವಿಗೆ ಹಗ್ಗ ಬಿಟ್ಟು, ಪ್ರಮುಖ ಅಗ್ನಿಶಾಮಕ ಈಶ್ವರ ನಾಯಕ್ ಅವರನ್ನು ಕೆಳಗೆ ಇಳಿಸಿದ್ದಾರೆ. ನೀರಿನಲ್ಲಿ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿದ್ದ ಚಂದ್ರಪ್ಪ ಅವರನ್ನು ಸುಮಾರು ಅರ್ಧ ತಾಸು ಸತತ ಪ್ರಯತ್ನದ ಬಳಿಕ ಮೇಲೆಕ್ಕೆ ಕರೆತಂದು ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಪ್ರಮುಖ ಅಗ್ನಿಶಾಮಕ ಈಶ್ವರ ನಾಯಕ್, ಸಿಬ್ಬಂದಿಗಳಾದ ಪರಮೇಶ್ವರ, ಜೆ.ರವಿ, ಶಿವಕುಮಾರ್, ಕುಮಾರಸ್ವಾಮಿ, ಶಾಂತರಾಜ್ ಪಾಲ್ಗೊಂಡಿದ್ದರು.