ಹನೂರು: ಪಟ್ಟಣದ ದೇವಾಂಗಪೇಟೆಯ ಹೊರವಲಯದಲ್ಲಿರುವ ಬಾವಿಗೆ ಬಿದ್ದಿದ್ದ ಜಿಂಕೆಯನ್ನು ಅಗ್ನಿಶಾಮಕ ಸಿಬ್ಬಂದಿ ಸೋಮವಾರ ಸಂಜೆ ರಕ್ಷಿಸಿದ್ದಾರೆ.
ಸಂಜೆ 6 ಗಂಟೆಯಲ್ಲಿ ಸಮೀಪದ ಅರಣ್ಯ ಪ್ರದೇಶದಿಂದ ಬಂದಿದ್ದ ಜಿಂಕೆ 30 ಅಡಿ ನೀರಿದ್ದ 60 ಅಡಿ ಆಳದ ಬಾವಿಗೆ ಬಿದ್ದಿದೆ. ಇದನ್ನು ಗಮನಿಸಿದ ಬಾಲಾಜಿ ಎಂಬುವರು ಕೂಡಲೇ ಅಗ್ನಿಶಾಮಕ ಠಾಣೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿದರು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಪ್ರಶಾಂತ್ ನಾಯ್ಕ, ಸಿಬ್ಬಂದಿ ಪೆರಿಯನಾಯಗಂ, ಶೇಖರ್, ಪ್ರವೀಣ್, ಅಶೋಕ್, ಹರ್ಷ, ನಾಗಪ್ಪ, ನವೀನ್ ಭಾಗವಹಿಸಿದ್ದರು.