ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರ ನೀಡಿ

ಲಕ್ಷ್ಮೇಶ್ವರ: ಬುದ್ಧಿ, ಭಾವನೆಗಳ ವಿಕಸನಕ್ಕೆ ಸಂಸ್ಕಾರ, ಸಂಸ್ಕೃತಿ, ಉಪದೇಶ ಅವಶ್ಯಕ. ಈ ನಿಟ್ಟಿನಲ್ಲಿ ವೀರಶೈವ ಧರ್ಮ ಪರಂಪರೆಯಂತೆ ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಪಟ್ಟಣದ ರಂಭಾಪುರಿ ಸಮುದಾಯ ಭವನದಲ್ಲಿ ಸ್ಥಳೀಯ ಹಾಲೇವಾಡಿಮಠ ಕುಟುಂಬದವರು ಶುಕ್ರವಾರ ಹಮ್ಮಿಕೊಂಡಿದ್ದ ಶಿವದೀಕ್ಷಾ ಕಾರ್ಯಕ್ರಮ, ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ವೀರಶೈವ ಧರ್ಮಕ್ಕೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿಯಿದೆ. ಧರ್ಮ ಇಲ್ಲದೆ ಜಗತ್ತು ಇಲ್ಲ. ಧರ್ಮವೇ ಜಗತ್ತಿನ ಜೀವರಾಶಿಗಳ ಮೂಲಾಧಾರ. ದಯೆ, ಪ್ರೀತಿ, ಅನುಕಂಪ, ಕರುಣೆ ಪರೋಪಕಾರಗಳೇ ಧರ್ಮ. ಇವುಗಳನ್ನರಿತು ಬದುಕು ಸಾಗಿಸಬೇಕು. ಇಂದು ಈ ಮಾನವೀಯ ಮೌಲ್ಯಗಳ ಕೊರತೆಯಿಂದಲೇ ಜಗತ್ತಿನಲ್ಲಿ ಅಶಾಂತಿಗೆ ಕಾರಣವಾಗಿದೆ. ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಉತ್ತಮ ಆಚಾರ ವಿಚಾರ ಕಲಿಸಬೇಕು. ಸಮಾಜದೊಂದಿಗೆ ಹೊಂದಿಕೊಂಡು ಬಾಳುವವನೇ ಶ್ರೇಷ್ಠ ಎಂದು ಎಲ್ಲರೂ ತಿಳಿದುಕೊಳ್ಳಬೇಕು. ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ಹೆಚ್ಚುತ್ತದೆ. ಸಮಾಜದಲ್ಲಿನ ಧಾರ್ವಿುಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರಾಪ್ತವಾಗುತ್ತದೆ. ವಿಭೂತಿ, ಲಿಂಗ, ಜೋಳಿಗೆ, ದಂಡ ಇವು ವೀರಶೈವ ಧರ್ಮದ ಸಂಸ್ಕಾರದ ಸಂಕೇತಗಳಾಗಿವೆ. ನಿತ್ಯ ಓಂ ನಮಃ ಶಿವಾಯ ಶಿವಮಂತ್ರ ಪಠಣ ಮಾಡಬೇಕು ಎಂದರು.

ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಗಂಜಿಗಟ್ಟಿಯ ವೈಜನಾಥ ಶಿವಲಿಂಗೇಶ್ವರ ಸ್ವಾಮೀಜಿ, ಲಕ್ಷ್ಮೇಶ್ವರ ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಸ್ವಾಮೀಜಿ, ಶಿವಯೋಗೀಶ್ವರ ಸ್ವಾಮೀಜಿ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಪಾರ್ವತೆಮ್ಮ ಹಾಲೇವಾಡಿಮಠ, ಆನಂದ ಮೆಕ್ಕಿ, ಡಾ. ವೈ.ಎಫ್. ಹಂಜಿ, ಕುಬೇರಪ್ಪ ಮಹಾಂತಶೆಟ್ಟರ, ಎಸ್.ಜಿ. ಹಾಲೇವಾಡಿಮಠ, ಸೋಮಣ್ಣ ವಡಕಣ್ಣವರ, ವಿಜಯ ಮಹಾಂತಶೆಟ್ಟರ, ದೇವಣ್ಣ ಬಳಿಗಾರ, ಜಯಶ್ರೀ ಕೋಲಕಾರ, ಆರ್.ಜಿ. ಹಾಲೇವಾಡಿಮಠ, ಜಿ.ಜಿ. ಹಾಲೇವಾಡಿಮಠ, ಪಿ.ಜಿ. ಹಾಲೇವಾಡಿಮಠ, ಬಾಳಿಹಳ್ಳಿಮಠ, ಹಾಲೇವಾಡಿಮಠದ ಸದ್ಬಕ್ತ ಮಂಡಳಿ ಇದ್ದರು. ಜಿ.ವಿ. ಸಾಲಿಮಠ ನಿರೂಪಿಸಿದರು.