ಬಾಲ್ಯದಲ್ಲಿ ಪಡೆದ ಅಂತಃಶಕ್ತಿ

ಎಲ್ಲೆಡೆಯೂ ಮಳೆ ಮತ್ತು ಪ್ರವಾಹದ ರುದ್ರ ನರ್ತನವನ್ನು ನೋಡುತ್ತಿದ್ದಾಗ ನಿಮ್ಮೊಂದಿಗೆ ನನ್ನ ಬಾಲ್ಯದ ಅನುಭವದ ಪಾಠವನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಹುಟ್ಟಿ ಬೆಳೆದಿದ್ದು ಮಲೆನಾಡಿನಲ್ಲಿ. ಶಿರಸಿಯಿಂದ 30 ಕಿಲೋಮೀಟರ್ ದೂರದ ಅತಿ ಸಣ್ಣ ಗ್ರಾಮದಲ್ಲಿ.

ಘಟನೆ-1: ನಮ್ಮ ತಾತ ಶ್ರೀ ನಾರಾಯಣ ಹೆಗಡೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಮಕ್ಕಳಲ್ಲಿ ಕೆಲಸ ಮಾಡುವ ಪ್ರವೃತ್ತಿ ಬೆಳೆಸಬೇಕು ಎಂದು ಶಾಲೆಗೆ ರಜಾ ಇದ್ದಾಗ ತೋಟ ಮತ್ತು ಗದ್ದೆಯಲ್ಲಿ ಕೆಲಸ ಮಾಡಲು ಕೆಲವು ಗಂಟೆಗಳ ಕಾಲ ನಾವು ಹೋಗಲೇಬೇಕಾದ ಸಂಪ್ರದಾಯ ಇತ್ತು. ಈ ನಿಯಮಕ್ಕೆ ಅನುಗುಣವಾಗಿ ಕುಟುಂಬದ ಸದಸ್ಯರು ಮತ್ತು ಕೆಲಸಗಾರರ ಜೊತೆ ಸೇರಿ ಗದ್ದೆಯಲ್ಲಿ ಭತ್ತದ ಸಸಿಯನ್ನು ನಾಟಿ ಮಾಡಿ ಬಂದಿದ್ದೆವು. ಮರುದಿನ ಸಂಜೆ ಸುಮಾರು ಅದೇ ಸಮಯಕ್ಕೆ ಗದ್ದೆಯ ಹತ್ತಿರದಲ್ಲಿರುವ ಬಿಳಿ ಹೊಳೆ (ಎಂತಹ ಪ್ರವಾಹದಲ್ಲಿಯೂ ಹೊಳೆಯ ನೀರು ಸಾಮಾನ್ಯವಾಗಿ ಕೆಂಬಣ್ಣಕ್ಕೆ ತಿರುಗುವುದಿಲ್ಲ, ಹಾಗಾಗಿ ಈ ಹೊಳೆಗೆ ಈ ಹೆಸರು) ಉಕ್ಕಿ ಹರಿಯುತ್ತಿದೆ ಎನ್ನುವ ಸುದ್ದಿ ಬಂದಾಗ ನಾವೆಲ್ಲರೂ ಕಂಬಳಿ ಹೊದ್ದು ಹೊಳೆ ಉಕ್ಕಿ ಹರಿಯುವುದನ್ನು ನೋಡಲು ಹೋಗಿದ್ದೆವು.

ಮೊದಲನೇ ದಿನ ಅಷ್ಟೊಂದು ಜನ ಸೇರಿ ಪ್ರಯತ್ನ ಮಾಡಿದ ನಾವೇ ಕೈಯ್ಯಾರೆ ನೆಟ್ಟ, ಭತ್ತದ ಸಸಿಗಳು ಹೊಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದುದನ್ನು ನೋಡಿದಾಗ ಮಕ್ಕಳಾದ ನಮಗೆ ನೋವಾಗಿತ್ತು. ಕಣ್ಣಲ್ಲಿ ನೀರು ಜಿನುಗಿತ್ತು. ಆದರೆ ನಮಗೆ ಆಶ್ಚರ್ಯ ಮತ್ತು ಧೈರ್ಯ ತುಂಬಿದ ಸಂಗತಿಯೆಂದರೆ ನಮ್ಮ ತಾತ ಮತ್ತು ಪಾಲಕರು ಗೋಳಾಟ, ಗೊಣಗಾಟವಿಲ್ಲದೆ ಪ್ರಕೃತಿಯ ವಿಕೋಪವನ್ನು ಮೌನವಾಗಿ ನಿಂತು ವೀಕ್ಷಿಸಿದ ರೀತಿ. ಅವರ ಮನಸ್ಸಿನಲ್ಲಿ ಏನು ನಡೆಯುತ್ತಿತ್ತು ನಮಗೆ ಗೊತ್ತಿರಲಿಲ್ಲ. ಆದರೆ ಅವರ ಸ್ಥಿತಪ್ರಜ್ಞತೆಯನ್ನು ನೋಡಿದಾಗ ಮನಸ್ಸಿನಲ್ಲಿ ಏನೋ ಒಂದು ಭರವಸೆ, ಸಮಾಧಾನ. ಹಿಂತಿರುಗಿ ನೋಡಿದಾಗ ಅವರ ಯಾವ ಭಾವನೆಗಳೂ ಹೊರಬರದೆ ಪ್ರಕೃತಿಯ ವಿಕೋಪವನ್ನು ಮೌನವಾಗಿ ಸ್ವೀಕರಿಸಿದ ರೀತಿ ಇವತ್ತಿಗೂ ಆಶ್ಚರ್ಯವಾಗುತ್ತದೆ. ಯಾರೋ ಬಂದು ನಮಗೆ ಸಹಾಯ ಮಾಡುತ್ತಾರೆ, ಪರಿಹಾರ ಬರುತ್ತದೆ ಅನ್ನುವ ಯಾವ ವಿಚಾರವಾಗಲೀ ಕಲ್ಪನೆಯಾಗಲೀ ಅಂದು ಲವಲೇಶವೂ ಇರಲಿಲ್ಲ. ಅಂತಹ ಆಡಳಿತಾತ್ಮಕ ವ್ಯವಸ್ಥೆಯೂ ಇರಲಿಲ್ಲ.

ಹಳ್ಳಿಗಳಲ್ಲಿ ಸಾಮಾನ್ಯವಾಗಿ ಎಲ್ಲರ ಬಗ್ಗೆ ಎಲ್ಲರಿಗೂ ಮಾಹಿತಿ ಇರುತ್ತಿತ್ತು. ಯಾರ ಮನೆಯಲ್ಲಿ ಹೆಚ್ಚಿನ ಸಸಿಗಳು ಉಳಿದಿವೆ, ಎಲ್ಲಿಂದ ತೆಗೆದುಕೊಂಡು ಬಂದು ಅದನ್ನು ಮತ್ತೆ ನೆಟ್ಟಿ ಮಾಡಬೇಕು ಇತ್ಯಾದಿ ವ್ಯವಹಾರಿಕ ಸಂಗತಿಗಳನ್ನು ಹೊಂದಾಣಿಕೆ ಮಾಡಿ ಕೆಲವೇ ದಿನಗಳಲ್ಲಿ ಪರಿಸ್ಥಿತಿಯನ್ನು ತಹಬಂದಿಗೆ ತಂದು ಮುನ್ನಡೆಸಿಕೊಂಡು ಹೋದ ರೀತಿ ಇಂದಿಗೂ ಅದ್ಭುತವೆನಿಸುತ್ತದೆ. ಇದು ಸಾರ್ವತ್ರಿಕವಾಗಿ ಮಲೆನಾಡಿನ ಮನೆಮನೆಯ ವಾತಾವರಣ.

ಘಟನೆ-2: 5ನೇ ಕ್ಲಾಸಿನ ನಂತರ ನಾವು ಸಮೀಪದ ಬಂಧುಗಳ ಮನೆಯಲ್ಲಿ ಉಳಿದು ಶಾಲೆಗೆ ಹೋಗಬೇಕಿತ್ತು. ಪ್ರತಿದಿನ ಎರಡರಿಂದ ಮೂರು ಕಿಲೋಮೀಟರ್ ಮಾರ್ಗ ಕ್ರಮಿಸುತ್ತಿದ್ದೆವು. ಅತಿಯಾಗಿ ಮಳೆ ಜಾಸ್ತಿಯಾದಾಗ ಮುನ್ನೆಚ್ಚರಿಕೆಯ ಕ್ರಮವಾಗಿ ಮಕ್ಕಳು ಮನೆಗೆ ಬೇಗ ತಲುಪಲಿ ಎಂದು ಶಾಲೆಯನ್ನು ಬೇಗ ಮುಗಿಸುವ ಪರಿಪಾಠವಿತ್ತು. ಇದು ಅಲಿಖಿತ ವ್ಯವಹಾರಿಕ ಒಪ್ಪಂದ. ಶಾಲೆ-ಗ್ರಾಮಗಳ ಮಧ್ಯದಲ್ಲಿ ನಡೆದು ಬಂದ ರೀತಿಯಾಗಿತ್ತು. ಇದಕ್ಕೆ ಎರಡು ಕಾರಣ, ಒಂದು ಮಲೆನಾಡಿನಲ್ಲಿ ಮಳೆ ಸಂಜೆ ಶುರುವಾದರೆ ರಾತ್ರಿಯವರೆಗೂ ಹೆಚ್ಚುತ್ತ ಹೋಗುವ ಸಾಧ್ಯತೆ ಮತ್ತು ಕರಿ ಮೋಡದಿಂದ ಕತ್ತಲಿನ ವಾತಾವರಣ ನಿರ್ವಣವಾಗುತ್ತದೆ. ಎರಡನೆಯದೆಂದರೆ ಸಣ್ಣಪುಟ್ಟ ಕಾಲುವೆಗಳು ಕೂಡ ದೊಡ್ಡ ಹೊಳೆಯ ಪ್ರವಾಹದಂತೆ ಆಗಿಬಿಡುತ್ತವೆ.

ಮಳೆಗಾಲದ ನೀರಿನಲ್ಲಿರುವ ಸಾಮರ್ಥ್ಯವನ್ನು ಸೂಕ್ತ ಅನುಭವವಿಲ್ಲದಿದ್ದರೆ ನಿರ್ಧರಿಸುವುದು ಕಷ್ಟ. ಕಾಲುದಾರಿಯಲ್ಲಿ ಇಂತಹ ಸಣ್ಣಪುಟ್ಟ ಹಳ್ಳಕೊಳ್ಳಗಳು ಬಂದಾಗ ನಾವು ಒಬ್ಬರಿಗೊಬ್ಬರು ಕೈಹಿಡಿದುಕೊಂಡು ನಡೆಯುತಿದ್ದೆವು. ಮೇಲೆ ಸುರಿಯುವ ಮಳೆ, ಕೆಳಗೆ ಹರಿಯುವ ಪ್ರವಾಹ. ಚಪ್ಪಲಿ ಧರಿಸುವುದು ಸಾಧ್ಯವೇ ಇರಲಿಲ್ಲ. ಎರಡು ಕೈಯಲ್ಲೂ ಒಬ್ಬರನ್ನೊಬ್ಬರು ಹಿಡಿಯಬೇಕಾದ ಅನಿವಾರ್ಯತೆ. ಇದರ ಜೊತೆಗೆ ಉದ್ದನೆ ಛತ್ರಿ, ಚಪ್ಪಲಿ, ಶಾಲೆಯ ಬ್ಯಾಗ್​ಅನ್ನು ಕೂಡ ಸಂಭಾಳಿಸಿಕೊಳ್ಳಬೇಕಿತ್ತು. ಯಾವ ಕ್ಷಣದಲ್ಲಿ ನೀರು ಅಕಸ್ಮಾತ್ ಹೆಚ್ಚು ಆಗಿ ಬಿಡುತ್ತದೆ ಎಂದು ಅರಿವಾಗುವುದಿಲ್ಲ. ಇಂತಹ ಒಂದು ಸಂದರ್ಭದಲ್ಲಿ ಸಹಪಾಠಿಯೊಬ್ಬಳನ್ನು ಇನ್ನೇನು, ಕಳೆದುಕೊಂಡು ಬಿಟ್ಟೆವು… ಎನ್ನುವ ಸ್ಥಿತಿಯಲ್ಲಿ ಅಕಸ್ಮಾತಾಗಿ ದಡಕ್ಕೆ ಎಳೆದುಕೊಂಡು ರಕ್ಷಣೆ ಮಾಡಿಕೊಂಡ ಸಂದರ್ಭ ಇನ್ನೂ ಹಚ್ಚ ಹಸಿರಾಗಿದೆ.

ಘಟನೆ-3: ತಿಂಗಳಿಗೊಮ್ಮೆ ವಾರಾಂತ್ಯದಲ್ಲಿ ನಾವು ಮನೆಗೆ ಹಿಂತಿರುಗುವಾಗ ಹುಲಿಹಳ್ಳ ದಾಟಬೇಕಿತ್ತು. ನಮ್ಮಲ್ಲೇ ಒಬ್ಬರು ಬಲಶಾಲಿಗಳು ನೀರಿನ ಸೆಳೆತ ಜಾಸ್ತಿ ಇದ್ದಾಗ ಒಬ್ಬೊಬ್ಬರನ್ನಾಗಿ ದಾಟಿಸಿ ಬಿಡುತ್ತಿದ್ದರು. ಹೀಗೆ ಅವರು ಹೊಳೆಯ ಇನ್ನೊಂದು ದಡ ತಲುಪುವಷ್ಟರಲ್ಲಿ ಇದ್ದಕ್ಕಿದ್ದಂತೆ ನೀರಿನ ಪ್ರವಾಹ ಹೆಚ್ಚಾಯಿತು. ದಡದ ಈ ಕಡೆಯಲ್ಲಿ 3 ಜನ, ಆ ಕಡೆಯಲ್ಲಿ ಎರಡು ಜನ, ಮಧ್ಯದಲ್ಲಿ ಉಕ್ಕಿ ಹರಿಯುವ ಹಳ್ಳ. ಹೊಳೆಯ ಮೇಲ್ಭಾಗದ ಪ್ರದೇಶದಲ್ಲಿ ಎಲ್ಲೋ ಜೋರಾಗಿ ಮಳೆ ಸುರಿಯುತ್ತಿದೆ. ಎಷ್ಟು ಹೊತ್ತಿಗೆ ನಿಲ್ಲುತ್ತದೆ ಎನ್ನುವ ಪರಿಕಲ್ಪನೆಯೂ ಇಲ್ಲ. ಅಲ್ಲೇ ಕುಳಿತು ನೀರು ಕಮ್ಮಿಯಾಗಲಿ ಎಂದು ಕಾಯುವ ಭರವಸೆ ಇರುತ್ತಿರಲಿಲ್ಲ. ಕಾಡಿನ ಮಾರ್ಗದಲ್ಲಿ ಹೋಗಬೇಕಾಗಿರುವುದರಿಂದ ಜಾಸ್ತಿ ಕತ್ತಲಾಗುವವರೆಗೆ ಕಾಯುವಂತಿಲ್ಲ. ಹಾಗಾಗಿ ಮತ್ತೆ ಮೂರು ಕಿಲೋಮೀಟರ್ ದೂರದ ಮಾರ್ಗ ಕ್ರಮಿಸಿ ಯಾವುದೋ ಹಳ್ಳಿಯ ಮುಖಾಂತರ ಹಾಯ್ದು ಬಂದು ಮತ್ತೆ ಅವರನ್ನು ಸೇರಿಕೊಂಡು ಮುನ್ನಡೆಯುವ ಅನಿವಾರ್ಯತೆ. ಮಕ್ಕಳ ಇಂತಹ ಪರಿಸ್ಥಿತಿಯನ್ನು ಅರಿತು ಸಹಾಯಮಾಡುವ ಇಡೀ ಹಳ್ಳಿಯ ಜನ. ಹೊಳೆ ಅಂಚಿನ ಮನೆಯವರಿಗೆ ಇದೊಂದು ಹೆಚ್ಚುವರಿ ಸಾಮಾಜಿಕ ಜವಾಬ್ದಾರಿ.

ಪ್ರಕೃತಿಯ ವಿಕೋಪವನ್ನು ಮಾನಸಿಕ ಅಂಜಿಕೆಯಿಲ್ಲದೆ ದೃಢವಾಗಿ ಸ್ವೀಕರಿಸುತ್ತ, ಮಾಡಬೇಕಾದ್ದನ್ನು ಮಾಡುತ್ತ ಹೋಗುವ ಪರಿ ಪ್ರಕೃತಿಯ ಮಡಿಲಲ್ಲಿ ಕಲಿಯುವುದು ಸುಲಭ. ಬಾಲ್ಯದಲ್ಲಿ ಎದುರಾಗುವ ಇಂಥ ಸಂದರ್ಭಗಳು ಮನುಷ್ಯನನ್ನು ಗಟ್ಟಿಗೊಳಿಸುತ್ತವೆ. ದೊಡ್ಡವರು ಇಂತಹ ಸಂದರ್ಭಗಳನ್ನು ನಿರ್ವಹಿಸುವ ರೀತಿ ಮನಸ್ಸಿಗೆ ಆದರ್ಶಪ್ರಾಯವಾಗುತ್ತದೆ ಮತ್ತು ಅವರ ಸಾಮರ್ಥ್ಯವನ್ನು ನೋಡಿದಾಗ ಮನಸ್ಸಿನಲ್ಲಿ ಧೈರ್ಯ ತಾನಾಗಿ ಅಚ್ಚೊತ್ತಿ ಬಿಡುತ್ತದೆ.

ರಸ್ತೆಯ ಅಗಲಕ್ಕೂ ವ್ಯಾಪಿಸಿಕೊಳ್ಳುವಷ್ಟು ಉದ್ದದ ಹಾವುಗಳು, ಹುಲಿ, ಕಾಡುಕೋಣಗಳು ಮುಂತಾದ ಕಾಡುಪ್ರಾಣಿಗಳ ಜೊತೆಯಲ್ಲಿ ಆಗುವ ಮುಖಾಮುಖಿ ಎಲ್ಲವೂ ಮನಸ್ಸಿನ ಒಳಗಿನ ಭಯ ನಿವಾರಿಸಿ ವಿಶ್ವ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಳ್ಳಲು ಪ್ರಕೃತಿ ಮಾತೆ ಕೊಟ್ಟ ವರದಾನ. ಬದುಕೆಂದರೆ ಬಂದಿದ್ದನ್ನು ಬಂದಂತೆ ಸ್ವೀಕರಿಸಿ ಮುನ್ನಡೆಯಬೇಕಾದ ಪಥ ಎನ್ನುವ ಸ್ಪಷ್ಟತೆ, ಸಮಾಧಾನ ಮನಸ್ಸಿನಲ್ಲಿ ಮೂಡುತ್ತದೆ. ಈ ಎಲ್ಲ ಅನುಭವಗಳು ಹೋರಾಟ ಬದುಕಿನ ಅನಿವಾರ್ಯ ಎನ್ನುವ ಸತ್ಯವನ್ನು ಇಂದಿಗೂ ನನ್ನೊಳಗೆ ಜೀವಂತವಾಗಿಟ್ಟಿವೆ. ಇದು ಕೇವಲ ನನ್ನೊಬ್ಬಳ ಅನುಭವವಾಗಿರುವುದಿಲ್ಲ. ಪ್ರಕೃತಿಯ ಮಡಿಲಲ್ಲಿ ಹುಟ್ಟಿ ಬೆಳೆದ ಎಲ್ಲರಲ್ಲಿಯೂ ಇದನ್ನು ಕಾಣಬಹುದು. ಮಲೆನಾಡು, ಗುಡ್ಡಗಾಡು ಪ್ರದೇಶಗಳು, ಸಮುದ್ರ ತಟ, ಹಿಮಾಲಯ, ಪರ್ವತ, ಕಣಿವೆಗಳಲ್ಲಿ ವಾಸಿಸುವ ಜನರಲ್ಲಿ ಇಂತಹ ಸಹಜ ಸ್ವಭಾವ ತಾನಾಗಿಯೇ ಬೆಳೆದುಬಿಡುತ್ತದೆ. ಕಷ್ಟದಿಂದ ಮಕ್ಕಳನ್ನು ದೂರ ಬಿಡದೆ ಇಂತಹ ಪರಿಸರಗಳಲ್ಲಿ ಅವರಿಗೆ ಬದುಕಿನ ಅನುಭವ ಕಲಿಸುವುದು ಅತಿದೊಡ್ಡ ಪಾಠಶಾಲೆಯಾಗುತ್ತದೆ. ಅವಿರತ ಹೋರಾಟ, ಕಷ್ಟಸಹಿಷ್ಣುತೆ ಎಲ್ಲವೂ ವರದಾನವಾಗಿ ಬರುತ್ತವೆ. ಇಂತಹ ಮಹಾನ್ ಪಾಠಶಾಲೆ ಒದಗಿಸಿಕೊಟ್ಟ ಮಲೆನಾಡ ದೇವಿಗೆ ನಮೋ ನಮಃ.

ಉನ್ನತಿ ಹೀಲಿಂಗ್ ಫೌಂಡೇಷನ್: 9845426049, 080-23518271.

Leave a Reply

Your email address will not be published. Required fields are marked *