ಬಾಲಗಂಗಾಧರನಾಥಶ್ರೀ ಚಿರಸ್ಮರಣೀಯ

ತಿಪಟೂರು: ಕೆಳಸ್ತರದ ವರ್ಗದಿಂದ ಉನ್ನತ ವರ್ಗದವರಿಗೂ ಸರ್ವ ರೀತಿಯ ಶೈಕ್ಷಣಿಕ ಸೌಲಭ್ಯ ಒದಗಿಸಿದ ಬಾಲಗಂಗಾಧರನಾಥ ಸ್ವಾಮೀಜಿ ಜಗತ್ತಿನಾದ್ಯಂತ ಚಿರಸ್ಮರಣೀಯರಾಗಿದ್ದರು ಎಂದು ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದರು.

ದಸರೀಘಟ್ಟದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಚೌಡೇಶ್ವರಿ ದೇವಾಲಯದಲ್ಲಿ ಭಾನುವಾರ ಆದಿಚುಂಚನಗಿರಿ ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ 6ನೇ ಪುಣ್ಯಾರಾಧನೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಸಾಮಾಜಿಕ, ಧಾರ್ವಿುಕ ಕ್ಷೇತ್ರದಲ್ಲಿಯೂ ತನ್ನದೇ ಆದ ವಿಶಿಷ್ಟ ಸೇವೆಗಳ ಮೂಲಕ ಸಾಮರಸ್ಯ ಮೂಡಿಸಿ ಸರ್ವ ಜನಾಂಗದ ಶಾಂತಿಯ ತೋಟದ ನಂದಾದೀಪವಾಗಿ ಕಂಗೊಳಿಸಿದ ಶ್ರೀಗಳ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಿದೆ ಎಂದು ಕರೆ ನೀಡಿದರು.

ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಗತಿಗೆ ಆದ್ಯತೆ ನೀಡಿ ಎಲ್ಲ ವರ್ಗದ ಜನರಿಗೆ ದಾರಿದೀಪವಾಗಿ ಬಾಲಗಂಗಾಧರನಾಥ ಶ್ರೀಗಳು ಪ್ರಜ್ವಲಿಸಿದ್ದರು. ಶ್ರೀಗಳು ಪರಿಸರ ಕಾಳಜಿ ಹೊಂದಿದ್ದಕ್ಕೆ ಸಾಕ್ಷಿಯಾಗಿ ಕರ್ನಾಟಕ ವನಸಂವರ್ಧನ ಟ್ರಸ್ಟ್ ಪ್ರಾರಂಭಿಸಿ 5 ಕೋಟಿ ಸಸಿ ನೆಡಿಸುವ ಕಾರ್ಯಕ್ರಮ ಜಾರಿಗೆ ತಂದು ಯಶಸ್ವಿಯಾಗಿದ್ದರು. ಶ್ರೀಗಳ ಪ್ರೇರಣೆಯೇ ಇಂದು ಪರಿಸರ ದಿನಾಚರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಎಲ್ಲೆಡೆ ನಡೆಯುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಮಾಜಿ ಶಾಸಕ ಕೆ.ಷಡಕ್ಷರಿ, ತಾಪಂ ಅಧ್ಯಕ್ಷ ಎಂ.ಎನ್.ಸುರೇಶ್, ಶ್ರೀರಂಗ ಆಸ್ಪತ್ರೆ ಡಾ.ವಿವೇಚನ್, ಡಾ.ರಾಮೇಗೌಡ, ದಸರೀಘಟ್ಟ ಗ್ರಾಪಂ ಸದಸ್ಯ ಮೋಹನ್ ಕುಮಾರ್, ತಹಸೀಲ್ದಾರ್ ಡಾ.ವಿ.ಮಂಜುನಾಥ್, ಶಿಕ್ಷಕರಾದ ಟಿ.ರಾಮೇಗೌಡ, ಎಚ್.ಬಿ.ಕುಮಾರಸ್ವಾಮಿ, ರಂಗಸ್ವಾಮಿ, ಗುಡಿಗೌಡರು ಹುಚ್ಚೇಗೌಡ, ರುಕ್ಮಿಣಿ, ಎಂ.ದಿವ್ಯಾ ಮತ್ತಿತರರಿದ್ದರು.

ವೃಕ್ಷಗಳನ್ನು ದೇವರ ರೂಪದಲ್ಲಿ ಪೂಜಿಸುವ ಮನೋಭಾವವನ್ನು ಶ್ರೀಗಳು ಹೊಂದಿದ್ದರು. ಪ್ರತಿಯೊಂದು ಮರಕ್ಕೂ ತನ್ನದೇ ಆದಂತಹ ವೈಶಿಷ್ಟತೆ ಹೊಂದಿದ್ದು, ಪೂಜನೀಯ ಸ್ಥಾನದ ಜತೆಗೆ ಆರೋಗ್ಯ ವೃದ್ಧಿಸುವ ಗಿಡ, ಮರಗಳನ್ನು ಕಾಣಬಹುದಾಗಿದೆ. ಹಾಗಾಗಿ, ನಮ್ಮ ಪೂರ್ವಜರು ಹೆಚ್ಚಾಗಿ ಗಿಡಮರ ನೆಡುವ ಜತೆಗೆ ಪರಿಸರದೊಂದಿಗೆ ಉತ್ತಮ, ಬಾಂಧವ್ಯ ಹೊಂದಿದ್ದರು.

| ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾಮಠ ದಸರೀಘಟ್ಟ