20.4 C
Bengaluru
Monday, January 20, 2020

ಬಾಲಖೇಲನದಲ್ಲಿ ಬ್ರಹ್ಮವಿದ್ಯೆ: ಮಕ್ಕಳ ಆಟದಿಂದ ಮೋಕ್ಷದ ಮೆಟ್ಟಿಲಿನತ್ತ

Latest News

ಸಿಎಎ ಬೆಂಬಲಿಸಿ ರ‌್ಯಾಲಿ

ಬಾದಾಮಿ: ವಿಶ್ವದ ದೊಡ್ಡ ಹಿಂದು ರಾಷ್ಟ್ರವಾದ ಭಾರತದ ಸಂಸ್ಕೃತಿ ಉಳಿಸಿ ಬೆಳೆಸಲು ಕೇಂದ್ರ ಸರ್ಕಾರ ಪೌರತ್ವ ತಿದ್ದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಇದರಿಂದ...

ಕೋಟೆನಗರಿಯಲ್ಲಿ ಆಕರ್ಷಕ ಪಥ ಸಂಚಲನ

ಬಾಗಲಕೋಟೆ: ಸಂಕ್ರಾಂತಿ ಹಬ್ಬದ ಅಂಗವಾಗಿ ಆರ್‌ಎಸ್‌ಎಸ್ ಅಂಗ ಸಂಸ್ಥೆ ರಾಷ್ಟ್ರ ಸೇವಿಕಾ ಸಮಿತಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಸೇವಕಿಯರ ಘೋಷ ಸಹಿತ...

ಧರ್ಮದಲ್ಲಿ ರಾಜಕೀಯ ಸಲ್ಲ

ತೇರದಾಳ: ಧರ್ಮ ಶ್ರೇಷ್ಠವಾಗಿದ್ದು, ಧರ್ಮದಲ್ಲಿ ರಾಜಕೀಯ ಬೆರೆಸಬೇಡಿ. ವೀರಶೈವರು ಲಿಂಗವನ್ನು ತ್ರಿಕಾಲಗಳಲ್ಲಿ ಪೂಜೆಗೈಯುತ್ತ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಧರ್ಮ ಮತ್ತು ಗುರು ಜೀವನ...

ಕಲಾದಗಿಯಲ್ಲಿ ಆರ್ಥಿಕ ಗಣತಿಗೆ ಅಸಹಕಾರ

ಕಲಾದಗಿ: ಗ್ರಾಮದಲ್ಲಿ ರಾಷ್ಟ್ರೀಯ 7ನೇ ಆರ್ಥಿಕ ಗಣತಿ ಕಾರ್ಯ ಒಂದು ವಾರದಿಂದ ಸ್ಥಗಿತಗೊಂಡಿದ್ದು, ಪ್ರಬಲ ಕೋಮಿನ ನೂರಾರು ಮನೆಯವರು ಆರ್ಥಿಕ ಗಣತಿದಾರರಿಗೆ ಮಾಹಿತಿ...

ವೇಗ ಕಾಣದ ಫಾಸ್ಟ್ಯಾಗ್​ !

ಹೀರಾನಾಯ್ಕ ಟಿ. ವಿಜಯಪುರ: ವಾಹನಗಳಿಗೆ ಕಡ್ಡಾಯವಾಗಿ ಫಾಸ್ಟ್ಯಾಗ್ ​ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ. ಆದರೆ, ಸಾಕಷ್ಟು ವಾಹನಗಳಿಗೆ ಫಾಸ್ಟ್ಯಾಗ್  ಅಳವಡಿಸದೆ ಇರುವುದರಿಂದ...

ಜಗತ್ತಿನ ಜೀವರಾಶಿಗಳಲ್ಲಿ ಮನುಷ್ಯಜನ್ಮ ಲಭಿಸುವುದು ದುರ್ಲಭ. ಇಂಥ ಜನ್ಮ ದೊರೆತ ಮೇಲೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕಷ್ಟೆ. ಈ ಜನ್ಮ ದೊರೆತಾಗಲೇ ಮೋಕ್ಷಕ್ಕಾಗಿ ಯತ್ನಿಸುವುದು ವಿಹಿತವಾದುದು. ಮನುಷ್ಯನ ಜೀವನದ ಅಂತಿಮ ಗುರಿಯೂ ಮೋಕ್ಷವಷ್ಟೆ. ಅದಕ್ಕೆ ಬೇಕಾದ ವಿಶಿಷ್ಟ ಒಳನೋಟವನ್ನು ನಮ್ಮ ಜಾನಪದ ಕ್ರೀಡೆಗಳೂ ಸೇರಿದಂತೆ ಎಲ್ಲ ಆಟಗಳು, ಕಲೆಗಳು, ಜೀವನವಿಧಾನಗಳಲ್ಲಿ ಕಂಡ ಲೇಖಕರು ಇಲ್ಲಿ ವಿಶ್ಲೇಷಿಸಿದ್ದಾರೆ.

|ಶತಾವಧಾನಿ ಡಾ.ಆರ್.​ ಗಣೇಶ್

ಸಾಮಾನ್ಯವಾಗಿ ಆಟವೆಂಬುದನ್ನು ಮಕ್ಕಳಿಗೇ ಮೀಸಲಾಗಿಸುವುದುಂಟು. ದೊಡ್ಡವರು ಆಟವಾಡಬಾರದೆಂದೇನೂ ನಿಯಮವಿಲ್ಲ. ಅಲ್ಲದೆ, ದೊಡ್ಡವರ ‘ಆಟ’ಗಳೂ ಬಲುಬಗೆಯಾಗಿರುತ್ತವೆಂಬುದು ಬೇರೆಯ ಮಾತು! ಸದ್ಯಕ್ಕದು ಇಲ್ಲಿ ಅಪ್ರಸ್ತುತ, ಅಸ್ತುತವೂ ಹೌದು. ಏನೇ ಆಗಲಿ, ‘ಬಾಲಸ್ತಾವತ್ ಕ್ರೀಡಾಸಕ್ತಃ’ ಎಂದು ಚರ್ಪಟಪಂಜರಿಕಾಸ್ತೋತ್ರವು ಹೇಳುವಂತೆ ಬಾಲ್ಯವನ್ನು ಬಗೆಬಗೆಯ ಖೇಲನವಿನೋದಗಳಿಂದಲೇ ನಿರ್ದೇಶಿಸುವುದು ಸಹಜ, ಯುಕ್ತ.

ಪ್ರತಿಯೊಂದು ಸಂಸ್ಕೃತಿಯೂ ತನ್ನದೇ ಆದ ಕ್ರೀಡಾಕೌಶಲವನ್ನೂ ಕೇಳೀಸಮಯವನ್ನೂ (ಖಟಟ್ಟಠಿಠ ಇಟ್ಞಡಛ್ಞಿಠಿಜಿಟ್ಞಠ) ಬೆಳೆಸಿಕೊಂಡಿರುತ್ತದೆ. ಬಲುಮಟ್ಟಿಗೆ ಆಟವೆಲ್ಲ ಜಾನಪದಜೀವನದ ಅವಿಭಾಜ್ಯಾಂಗವೆಂದು ಹೇಳುವುದುಂಟು. ಹೀಗಾಗಿಯೇ ಇದು ಗ್ರಾಮಜೀವನದ ಉತ್ಪನ್ನವೆಂದೂ ಭಾವಿಸುವರು. ಆದರೆ ಸಂಸ್ಕೃತಿಯೊಂದು ನಾಗರಿಕತೆಯಾಗುತ್ತಿದ್ದಂತೆ ಆಟಗಳ ರೀತಿ-ನೀತಿಗಳೂ ಮಾರ್ಪಡುತ್ತಿರುತ್ತವೆ. ಇಂಥ ಕ್ರೀಡಾವಿಕಾಸದ ಪಥದಲ್ಲಿ ಹತ್ತಾರು ಬಗೆಯ ಕೊಳ್ಳು-ಕೊಡೆಗಳನ್ನು ಕಾಣಬಹುದು. ಇವು ಬೇರೆ ಬೇರೆ ದೇಶಗಳ ನಡುವೆಯೂ ಜನಾಂಗಗಳ ನಡುವೆಯೂ ಸಾಗಿರುವುದುಂಟು. ಪ್ರಸ್ತುತ ಲೇಖನವು ಇಂಥ ಕ್ರೀಡೇತಿಹಾಸಕ್ಕಾಗಲಿ, ಕ್ರೀಡಾವಿನಿಮಯಕ್ಕಾಗಲಿ ಬಗೆ ತೆತ್ತುಕೊಂಡು ಅದರ ನಿರೂಪಣೆಗೆ ಮುಂದಾಗಿಲ್ಲ. ಇದರ ಮುಖ್ಯೋದ್ದೇಶ ಭಾರತೀಯಸಂಸ್ಕೃತಿಯ ಕೆಲವೊಂದು ಗಂಭೀರವಿಶಿಷ್ಟತೆಗಳು ಹೇಗೆ ನಮ್ಮ ಮಕ್ಕಳಾಟಗಳಲ್ಲಿ ಕೂಡ ಮನೆಮಾಡಿಕೊಂಡಿವೆ ಎಂಬುದನ್ನು ಗುರುತುಮಾಡಿಕೊಡುವುದಷ್ಟೇ ಆಗಿದೆ.

ಕಾವ್ಯಕ್ಕೆ ಹೇಗೆ ಬಗೆಬಗೆಯಾದ ಪ್ರಯೋಜನವನ್ನು ನಮ್ಮ ಆಲಂಕಾರಿಕರು ಪೋಣಿಸಿದ್ದಾರೋ ಹಾಗೆಯೇ ಕ್ರೀಡೆಗೂ ಹತ್ತಾರು ಉಪಯೋಗಗಳನ್ನು ಬಲ್ಲವರು ಹವಣಿಸಿದ್ದಾರೆ. ಆ ಪ್ರಕಾರ ಆಟವು ಮೊದಲಿಗೆ ಒಂದು ಉಲ್ಲಾಸಸಾಧನ, ವ್ಯಾಯಾಮವಿಧಾನ, ಸ್ವಾಸ್ಥ್ಯನಿಧಾನ, ಸಂಪತ್ಸಂಧಾನ, ಕೀರ್ತಿಸಂಪಾದನ ಇತ್ಯಾದಿ. ಆದರೆ ಇದಿಷ್ಟೂ ಆಡುವವರ ಪಾಲಿಗೆ ಬರುವುದಾಯಿತು. ನೋಡುವವರಿಗೆ ಮಾತ್ರ ದಕ್ಕುವುದೊಂದೇ; ಅದು ಉಲ್ಲಾಸ, ತನ್ಮೂಲಕ ಮನೋರಂಜನೆ. ಅದೆಷ್ಟೋ ಬಾರಿ ಕ್ರೀಡಾಪಟುಗಳಿಗೂ ದಕ್ಕುವುದು ಆ ಹೊತ್ತಿನ ಉಲ್ಲಾಸ ಮತ್ತು ಕಾಯಪಟುತ್ವಗಳು ಮಾತ್ರ. ಕೆಲವೊಮ್ಮೆ ಆಟದ ಸೋಲು-ಗೆಲವುಗಳ ಸುಳಿಯಲ್ಲಿ ಸಿಲುಕಿದಾಗ ಆಡುಗರಿಗೂ ನೋಡುಗರಿಗೂ ಉಲ್ಲಾಸವಿಲ್ಲದಾಗಿ ‘ಹೆಚ್ಚೆಂದರೆ ಕ್ರೀಡಾಳುಗಳಿಗೆ ಮಾತ್ರ’ ವ್ಯಾಯಾಮಶ್ರಮ ದಕ್ಕಿರುತ್ತದಷ್ಟೆ. ಮತ್ತೆಷ್ಟೋ ಬಾರಿ ಆಟದ ಸೆಣೆಸಾಟವು ವಾಸ್ತವದ ಸೆಣೆಸಾಟವಾಗಿ ವೈರ-ವಿಕ್ಷೋಭೆಗಳಿಗೂ ಕಾರಣವಾಗುವುದುಂಟು. ಆದುದರಿಂದ ಕ್ರೀಡೆಗೊಂದು ಸಂಸ್ಕೃತಿಯಿಲ್ಲದಿದ್ದಲ್ಲಿ, ಕ್ರೀಡಾಪಟುಗಳಿಗೂ ಅವರನ್ನು ಉತ್ತೇಜಿಸಿ ಹರ್ಷಿಸುವವರಿಗೂ ಅದೊಂದು ಬಗೆಯ ಸಂಯಮ – ಸತ್ತೊ್ವೕನ್ನತಿಗಳಿಲ್ಲದಿದ್ದಲ್ಲಿ ಯಾವುದೇ ಆಟದ ಉಪಯೋಗವೂ ಅಪಯೋಗವೇ ಆದೀತು. ಈಚೆಗೆ ವಾಣಿಜ್ಯಕರಣವು ಕ್ರೀಡಾರಂಗವನ್ನು ಪ್ರವೇಶಿಸಿದ ಬಳಿಕ ಪುರುಷಾರ್ಥಗಳಲ್ಲೊಂದಾದ ಅರ್ಥವು ಅರಿಷಡ್ವರ್ಗಗಳಲ್ಲಿ ಒಂದಾದ ಲೋಭದ ಅವತಾರವನ್ನು ತಾಳಿ, ತನ್ಮೂಲಕ ರಾಗ-ದ್ವೇಷಗಳ, ಕೈತವ-ಕೃತ್ರಿಮಗಳ ಮಾಲಿನ್ಯವೇ ಹರಿದಿರುವುದು ಸರ್ವತ್ರ ದೃಷ್ಟಚರ. ಆದರೆ ಅಭಿಜಾತಭಾರತೀಯಸಂಸ್ಕೃತಿಯ ಸಂವೇದನೆ ಇಂಥ ಅಪಸವ್ಯಗಳಿಗೆ ಹೊರತಾದುದು. ಆ ಕೆಲವಂಶಗಳನ್ನು ನಾವೀಗ ನೋಡೋಣ.

ಪುರುಷಾರ್ಥಚಿಂತನೆಯೆಂಬುದು ನಮ್ಮ ಸಂಸ್ಕೃತಿಯ ಮೂಲತತ್ತ್ವಗಳಲ್ಲೊಂದು. ಅದು ಭಾರತೀಯತೆಯ ಮಹಾಲಕ್ಷಣಗಳಲ್ಲಿಯೂ ಪ್ರಮುಖವಾದುದು. ಈ ಪ್ರಕಾರ ನಮ್ಮ ಯಾವುದೇ ಸಾಮಾನ್ಯ-ವಿಶೇಷಕ್ರಿಯೆಗಳೂ ಲಘು-ಗಂಭೀರವರ್ತನೆಗಳೂ ನೇರವಾಗಿಯೋ ಪರ್ಯಾಯವಾಗಿಯೋ ಪುರುಷಾರ್ಥಗಳಿಗೆ ಸಂಬಂಧಿಸಿಯೇ ಇರುತ್ತವೆ. ಇದು ವಾಸ್ತವವೂ ಹೌದು, ವಿಶ್ವಜನೀನವೂ ಹೌದು. ಆಟದಲ್ಲಿ ಅದರದೇ ಆದ ನಿಯಮಗಳಿರುತ್ತವೆ, ವ್ಯವಸ್ಥೆಗಳಿರುತ್ತವೆ. ಕ್ರೀಡಾಪಟುಗಳಿಗೆ ವಿಹಿತವಾದ ಶಿಸ್ತುಗಳು ಕೂಡ ಸಲ್ಲುತ್ತವೆ. ಇವೆಲ್ಲ ಪುರುಷಾರ್ಥಗಳಲ್ಲೊಂದಾದ ಧರ್ಮದ ಪ್ರತೀಕಗಳೇ ಹೌದು. ಇನ್ನು ಆಟದಿಂದ ಉಂಟಾಗುವ ಹಣ-ಹೆಸರುಗಳು, ಜಾಣ್ಮೆ-ಕಾಣ್ಮೆಗಳು ಅರ್ಥಕ್ಕೆ ಸಂವಾದಿ. ಯಾವುದೇ ಆಟದ ಮೂಲಕ ಆಡುಗರೂ ನೋಡುಗರೂ ಸೇರಿದಂತೆ ಎಲ್ಲರಿಗೂ ಎಟುಕುವ ಹರ್ಷೇಲ್ಲಾಸವೇ ಕಾಮದ ಆಯಾಮ. ಇವೆಲ್ಲವುಗಳ ಪರಿಪಾಕವಾಗಿ ನಮ್ಮೊಳಗೆ ಉಂಟಾಗುವ ಅಂಟಿಲ್ಲದ ಆನಂದ ಹಾಗೂ ಸೋಲು-ಗೆಲವುಗಳ ಬಗೆಗೆ ನಿರ್ವಿಕಾರವಾದ ಪರಿಪ್ರೇಕ್ಷೆಗಳೇ ಮೋಕ್ಷದ ಸಂಕೇತ. ಹೀಗೆ ಎಲ್ಲಿಯೂ ಸಲ್ಲುವ ಪುರುಷಾರ್ಥತತ್ತ್ವವು ಇಲ್ಲಿಯೂ ಸಲ್ಲುವುದರಲ್ಲಿ ಅತಿಶಯವೇನಿಲ್ಲ. ಆದರೆ ಆಟವೊಂದರ ಕ್ರಮದಲ್ಲಿಯೇ ಪುರುಷಾರ್ಥಮೌಲ್ಯಗಳ ಧ್ವನಿಯಿದ್ದಲ್ಲಿ ಅದು ಮತ್ತೂ ಸೊಗಸು, ಮತ್ತಿದು ಎಲ್ಲ ಆಟಗಳಲ್ಲಿಯೂ ತೋರುವಂಥದ್ದಲ್ಲ. ಹೀಗಾಗಿ ಈ ಬಗೆಯ ಉಪಕ್ರಮವು ಮಿಗಿಲಾಗಿ ರೋಚಕ ಹಾಗೂ ಉದ್ಬೋಧಕವೆಂದರೆ ತಪ್ಪಲ್ಲ.

ಆಟವೊಂದರಲ್ಲಿ ಮತ್ತಾವುದೋ ಸಂಕೇತವು ಸೇರಿಹೋಗಿರುವುದು ವಿರಳವೇನಲ್ಲ. ಇದು ಅನೇಕಸಂಸ್ಕೃತಿಗಳಲ್ಲಿ ಕಂಡುಬರುವ ವಿದ್ಯಮಾನವೂ ಹೌದು. ಹೇಗೆ ಕಾವ್ಯವು ಬದುಕಿನ ಪ್ರತಿಬಿಂಬವೋ ಹಾಗೆಯೇ ಕ್ರೀಡೆಯೂ ಜೀವನದ ಪ್ರತಿಫಲನವಾದ ಕಾರಣ ನಮ್ಮ ಬಾಳಿನ ಏರಿಳಿತಗಳು ಧ್ವನಿಪೂರ್ಣವಾಗಿ ನಮ್ಮ ಆಟ-ಪಾಟಗಳಲ್ಲಿಯೂ ತಲೆದೋರುವುದುಂಟು. ಉದಾಹರಣೆಗೆ, ಇಂಗ್ಲೆಂಡಿನ ಪ್ರಖ್ಯಾತವಾದ ಮಕ್ಕಳಾಟದ ಹಾಡು ‘ರಿಂಗ ರಿಂಗ ರೋಸಸ್…’ – ಒಂದು ಕಾಲದ ಸಾಂಕ್ರಾಮಿಕರೋಗದ ಚಹರೆ ಮತ್ತು ಭೀಕರಪರಿಣಾಮಗಳನ್ನು ಸಾಭಿನಯವಾಗಿ ಚಿತ್ರಿಸಿರುವುದು ಸ್ಮರಣೀಯ. ಇದೇ ರೀತಿ ಕೆಲವೊಂದು ಐತಿಹಾಸಿಕರಹಸ್ಯಗಳನ್ನೂ ಮಕ್ಕಳಾಟಿಕೆಯ ಹಾಡುಗಳು ಗರ್ಭೀಕರಿಸಿಕೊಂಡಿರುವುದುಂಟು. ಉದಾಹರಣೆಗೆ, ‘ಎತ್ತೋ ಕಲ್ಲ ಕತ್ತೆಯ ಮಗನೆ ಇಕ್ಕುಳ ವರಹ…’ ಎಂಬ ಬಾಲಖೇಲನಗೀತವು ಎರಡು ಕೊಪ್ಪರಿಗೆ ತುಂಬ ತುಂಬಿದ ವರಾಹಮುದ್ರಿಕೆಯ ಚಿನ್ನದ ನಾಣ್ಯಗಳನ್ನು ಪಡೆಯಲು ಬಂಡೆಯೊಂದನ್ನು ಪಕ್ಕಕ್ಕೆ ಸರಿಸಬೇಕಿರುವ ಸೂಚನೆ ಕೊಡುವಂತಿರುವುದು ಮಲೆನಾಡಿನ ಆಸುಪಾಸಿನಲ್ಲಿ ಅದೊಮ್ಮೆ ಪ್ರಸಿದ್ಧವಾಗಿದ್ದ ಸಂಗತಿ. ಹೀಗೆಯೇ ಮಾಸ್ತಿಯವರ ಕಥೆಯೊಂದು ಗುಡ್ಡದೊಳಗೆ ಅವಿತಿದ್ದ ದೇವಾಲಯದ ರಹಸ್ಯವನ್ನು ಹೇಳುವ ಮಕ್ಕಳ ಹಾಡಿಗೆ ಸಂಬಂಧಿಸಿರುವುದು ಕೂಡ ಉಲ್ಲೇಖನೀಯ. ಆದರೆ ಇಲ್ಲೆಲ್ಲ ಇರುವುದು ಅದೊಂದು ಬಗೆಯ ಸಾಂಸ್ಕೃತಿಕದಾಖಲೆ. ಪ್ರಕೃತ ನಾವು ಗಮನಿಸಲಿರುವುದು ಇದಕ್ಕಿಂತ ಸ್ವಲ್ಪ ಭಿನ್ನವಾದ, ಮತ್ತೂ ಸ್ವಾರಸ್ಯಕರವಾದ ಸಂಗತಿ. ಅರ್ಥ-ಕಾಮಗಳೇ ಎದ್ದುತೋರುವ ಕ್ರೀಡಾಪ್ರಪಂಚದಲ್ಲಿ ಕೇವಲ ಆಟದ ನಿಯಮಗಳ ಮಟ್ಟಿಗೆ ಧರ್ಮದ ಆಯಾಮವಿರುತ್ತದೆ. ಇಂಥ ರಾಜಸಕ್ಷೇತ್ರದಲ್ಲಿಯೂ ಸತ್ತೊ್ವೕನ್ನತಿಯನ್ನು ಕಾಣಿಸುವ ಯತ್ನ ಭಾರತೀಯಸಂಸ್ಕೃತಿಯ ಹೆಗ್ಗಳಿಕೆ.

ಅದು ಈ ಬಗೆಯ ಮೌಲ್ಯನಿಷ್ಠೆಯನ್ನು ತನ್ನ ಎಲ್ಲ ಜೀವನಕ್ರಮದಲ್ಲಿಯೂ ವಿಸ್ತರಿಸಿಕೊಂಡಿದೆ. ಇದಕ್ಕೆ ವ್ಯಾಕರಣದಿಂದ ಮೊದಲ್ಗೊಂಡು ಪಾಕಶಾಸ್ತ್ರದವರೆಗೆ ಉದಾಹರಣೆಗಳಿವೆ. ದೃಷ್ಟಾಂತವಾಗಿ ಹೇಳುವುದಾದರೆ, ಸಂಸ್ಕೃತದ ಸುಬಂತಶಬ್ದಗಳ ವಿಭಕ್ತಿ-ವಚನಾದಿಗಳನ್ನು ನಿರೂಪಿಸುವಾಗ ಯಾವುದೇ ನಾಮಪದವನ್ನು ಮಾದರಿಯಾಗಿ ತೆಗೆದುಕೊಂಡು ಹೇಳಬಹುದಾದರೂ ಅನೂಚಾನವಾದ ಸಂಪ್ರದಾಯವು ಅ-ಕಾರಾಂತಪುಂಲಿಂಗಶಬ್ದಗಳಿಗೆ ರಾಮನನ್ನೂ ಆ-ಕಾರಾಂತಸ್ತ್ರೀಲಿಂಗಶಬ್ದಗಳಿಗೆ ರಮೆಯನ್ನೂ ಉ-ಕಾರಾಂತಪುಂಲಿಂಗಶಬ್ದಗಳಿಗೆ ಶಂಭುವನ್ನೂ ಈ-ಕಾರಾಂತಸ್ತ್ರೀಲಿಂಗಶಬ್ದಗಳಿಗೆ ಗೌರಿಯನ್ನೂ ಸಾಮಾನ್ಯವಾಗಿ ಸ್ವೀಕರಿಸಿರುವುದನ್ನು ನೆನೆಯಬಹುದು. ಈ ಬಗೆಯ ಸುಬಂತಗಳ ಅರಿವಿಗೆ ರಾಮನೋ ರಮೆಯೋ ಶಂಭುವೋ ಗೌರಿಯೋ ಅನಿವಾರ್ಯವಲ್ಲ; ಘಟವೋ ಲತೆಯೋ ಭಿಕ್ಷುವೋ ನದಿಯೋ ಆದೀತು. ಆದರೆ ಏಳೆಂಟು ವಿಭಕ್ತಿಗಳಲ್ಲಿ, ಮೂರು ವಚನಗಳಲ್ಲಿ ಶಬ್ದವೊಂದನ್ನು ನಡಸುವಾಗ ಸುಮ್ಮನೆ ವ್ಯಾಕರಣದ ಪ್ರಯೋಜನವಷ್ಟೇ ಆಗದೆ ಭಗವಂತನ ನಾಮಸಂಸ್ಮರಣೆಯೂ ಆಗಲೆಂಬ ಸಾಂಸ್ಕೃತಿಕವಾದ ಭಕ್ತಿಪ್ರಪತ್ತಿಯ ಕಾರಣ ಇಂಥ ಪ್ರಯಾಸಗಳು ಬೆಳೆದುಬಂದಿವೆ. ಇವನ್ನು ಕಂಡಾಗ ನಮ್ಮ ಪರಂಪರೆಯು ಅದೆಷ್ಟು ಬಗೆಯಲ್ಲಿ ಭಗವದ್ಭಕ್ತಿಯನ್ನು ರೂಢಿಸಲು ಯತ್ನಿಸಿದೆಯೆಂಬುದು ಬೆರಗನ್ನೀಯದಿರದು.

ಇದೇ ರೀತಿ ಕನ್ನಡದ ಹಳಗಾಲದ ಮಕ್ಕಳಿಗೆಲ್ಲ ಅನುಬಂಧಿಯಾಗಿದ್ದ ಕಣ್ಣಾಮುಚ್ಚಾಲೆಯಾಟದ ಹಾಡನ್ನೂ ಗಮನಿಸಬಹುದು. ಇದು ರಾಮಾಯಣದ ಸ್ಥೂಲಕಥೆಯನ್ನೇ ಹರಳುಗಟ್ಟಿಸಿಕೊಂಡಿದೆ. ಕೈಕೇಯಿಯು ದಶರಥನಿಗೆ ಮರುಳುಮಾಡಿದ ರೀತಿ ಮತ್ತವನ ಮರಣ (ಕಣ್ಣಾಮುಚ್ಚೇ), ರಾಮನಿಗೆ ಬಂದೊದಗಿದ ವನವಾಸವಿಧಿ (ಕಾಡೇ ಗೂಡೇ), ‘ಮಾಷರಾಶಿಪ್ರತೀಕಾಶ’ನೆಂದು ವಾಲ್ಮೀಕಿಯಿಂದ ವರ್ಣಿತನಾದ ರಾವಣನ ಸಂಹಾರ (ಉದ್ದಿನ ಮೂಟೆ ಉರುಳೇ ಹೋಯ್ತು), ಸೀತಾಪರಿತ್ಯಾಗ ಮತ್ತು ರಾಮನಿರ್ಯಾಣ (ನಮ್ಮಯ ಹಕ್ಕಿ ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ) ಎಂಬಿತ್ಯಾದಿ ಕೊಂಡಿಗಳನ್ನು ಸುಲಭವಾಗಿ ಕಲ್ಪಿಸಿಕೊಳ್ಳಬಹುದು. ಇಲ್ಲೆಲ್ಲ ನಮ್ಮ ಜನರ ರಾಮಾಯಣಪ್ರೀತಿಯೇ ಪ್ರಕಾರಾಂತರವಾಗಿ ಮೈದೋರಿರುವುದು ಸೂರ್ಯಸ್ಪಷ್ಟ.

ಈ ಬಗೆಯ ಸಾಹಿತ್ಯಸಂಕೇತವಿಲ್ಲದೆಯೇ ಅಪ್ಪಟ ಆಟದ ಕ್ರಮದಲ್ಲಿಯೇ ಪುರುಷಾರ್ಥಗಳ ಕೆಲವೊಂದು ಸ್ವಾರಸ್ಯಗಳು ಮಿಂಚುವುದನ್ನು ಕೂಡ ನಾವು ನೋಡಬಹುದು. ಉದಾಹರಣೆಗೆ, ಭಾರತೀಯರ ಆವಿಷ್ಕಾರವೆಂದು ವಿಖ್ಯಾತವಾದ ಚತುರಂಗಕ್ರೀಡೆಯು ತನ್ನ ಹೆಸರಿನಿಂದ ಮೊದಲ್ಗೊಂಡು ಅಕ್ಷರಶಃ ಅರ್ಥಶಾಸ್ತ್ರದ ರಾಜನೀತಿಗೆ ಸಂಬಂಧಿಸಿದೆ. ತತ್ರಾಪಿ ದಂಡನೀತಿಯ ಅಧಿಕರಣಗಳಲ್ಲೊಂದಾದ ಯುದ್ಧವಿಧಾನವನ್ನೇ ಇದು ಮೈಗೂಡಿಸಿಕೊಂಡಿರುವುದು ಸುವೇದ್ಯ. ಇಲ್ಲಿಯ ಉಭಯಪಕ್ಷಗಳು, ಆಟದ ಕಾಯಿಗಳ ಹೆಸರುಗಳು (ರಾಜ, ಮಂತ್ರಿ, ಆನೆ, ಕುದುರೆ, ಒಂಟೆ, ರಥ, ಪದಾತಿ) ಮತ್ತವುಗಳ ಗತಿಚಮತ್ಕಾರಗಳು ಇದಕ್ಕೆ ಸಾಕ್ಷಿಗಳಾಗಿವೆ. ಅಲ್ಲದೆ ಬಗೆಬಗೆಯ ವ್ಯೂಹನಿರ್ವಣ ಮತ್ತವುಗಳ ಭೇದನ ಕೂಡ ಇಲ್ಲಿ ವಿವಕ್ಷಿತ. ಹೀಗೆ ಆಟವೊಂದು ಯುದ್ಧರಂಗವನ್ನೇ ಕ್ರೀಡಾಳುಗಳ ಮುಂದಿರಿಸಿರುವುದು ತೀರ ಈಚಿನ ಕಾಲದವರೆಗೆ ಅನ್ಯತ್ರ ಕಂಡುಬಾರದ ಸಂಗತಿಯಾಗಿತ್ತು. ಇಂದಿನ ಎಷ್ಟೋ ಗಣಕೀಯಕ್ರೀಡೆಗಳು (ಇಟಞಟ್ಠಠಿಛ್ಟಿ ಎಚಞಛಿಠ) ಚತುರಂಗದ ಮತ್ತೂ ವಿಸ್ತ್ರತರೂಪಗಳೇ ಆಗಿವೆಯೆನ್ನಬೇಕು. ನಮ್ಮ ಜಾನಪದರ ಹುಲಿಗತ್ತಿನಂಥ ಆಟಗಳೂ ಈ ಬಗೆಯ ಬೇಟೆ-ರಣತಂತ್ರಗಳ ಬಗೆಗಳೇ ಆಗಿವೆ. ಇಲ್ಲೆಲ್ಲ ಅರ್ಥವೆಂಬ ಮೌಲ್ಯಕ್ಕೆ ಅಗ್ರತಾಂಬೂಲ ದಕ್ಕಿದೆ.

ಗಂಜೀಫಾ ಕ್ರೀಡೆಯೇ ಆಧುನಿಕ ಇಸ್ಪೀಟಾಟದ ಪೂರ್ವಜನೆನ್ನಬೇಕು. ಇದು ಮಧ್ಯಕಾಲೀನಭಾರತದ ಕೊಡುಗೆ. ಇಲ್ಲಿಯ ಆಟದ ಎಲೆಗಳು ಮೊದಲಿಗೆ ಬಗೆಬಗೆಯ ದೇವತಾಚಿತ್ರಗಳಿಂದ ಕೂಡಿದ್ದವು. ತ್ರಿಮೂರ್ತಿಗಳು ಮತ್ತವರ ಪರಿವಾರ, ದಿಕ್ಪಾಲಕರು, ನವಗ್ರಹಗಳು, ದಶಾವತಾರಗಳೇ ಮೊದಲಾದ ಮಾದರಿಗಳು ವಿಶ್ರುತವಾಗಿದ್ದುವು. ಇಲ್ಲಿ ಬೇರೆ ಬೇರೆ ಪ್ರಾಂತಗಳ ಚಿತ್ರಶೈಲಿಗಳೂ ತಮ್ಮ ಪಾತ್ರವನ್ನು ಯಥೋಚಿತವಾಗಿ ನಿರ್ವಹಿಸಿವೆ. ಇಂಥ ದೇವತಾಚಿತ್ರಕೇಂದ್ರಿತಕ್ರೀಡೆಯು ಬಗೆಬಗೆಯ ಜನರುಚಿಗಳಿಗೆ ಅನುಸಾರವಾಗಿ ಮಿಥುನಚಿತ್ರಗಳನ್ನೂ ಮೃಗಯಾಪ್ರಸಂಗಗಳನ್ನೂ ಆಳುವ ದೊರೆಗಳ ರೂಪಚಿತ್ರಗಳನ್ನೂ ಅಳವಡಿಸಿಕೊಂಡದ್ದು ಈ ಕ್ರೀಡೆಯ ಇತಿಹಾಸದಲ್ಲೊಂದು ಭಾಗವೇ ಆಗಿದೆ. ಹೀಗೆ ಬೇಟ ಮತ್ತು ಬೇಟೆಗಳಂಥ ಲಂಪಟವಿಕ್ಷೇಪಗಳ ಚಿತ್ರಗಳನ್ನು ಆಧುನಿಕಜಗತ್ತಿನ ಇಸ್ಪೀಟು ವಿಶ್ವತೋಮುಖವಾಗಿ ಬೆಳೆಸಿಕೊಂಡಿರುವುದು ಸರ್ವವೇದ್ಯ. ಆದರೆ ಭಾರತದ ಮೂಲಭೂತಸಾಂಸ್ಕೃತಿಕೋತ್ಕರ್ಷದಲ್ಲಿ ಇದು ತಳೆದಿದ್ದ ಧರ್ವವಿರುದ್ಧಸ್ವರೂಪ ಗಮನಾರ್ಹ. ಒಟ್ಟಿನಲ್ಲಿ ಕಾಮವೆಂಬ ಪುರುಷಾರ್ಥವು ಕಂಡ ಹದ ಮತ್ತು ಹದಗೆಡುವಿಕೆಗಳನ್ನು ನಾವಿಲ್ಲಿ ಗಮನಿಸಬಹುದು.

ಕಡೆಯದಾಗಿ ಮೋಕ್ಷವನ್ನು ಧ್ವನಿಸುವ ನಮ್ಮ ಆಟಗಳ ಪೈಕಿ ಎರಡನ್ನು ಪರಿಶೀಲಿಸೋಣ. ನಮ್ಮ ಹಳ್ಳಿಯ ಹೆಣ್ಣುಮಕ್ಕಳಿಗೆಲ್ಲ ಚೆನ್ನಾಗಿ ಪರಿಚಿತವಿರುವ ಆಟಗಳಲ್ಲೊಂದು ಮನೋನ್ಮನೀಕ್ರೀಡೆ. ಇದನ್ನು ಜಾನಪದರು ಆರು ಕಲ್ಲಾಟವೆಂದು ಕರೆಯುವುದುಂಟು. ಈ ಕ್ರೀಡೆಯ ಹೆಚ್ಚಿನ ವಿವರಗಳು ನಮಗೆ ಸದ್ಯಕ್ಕೆ ಅಪ್ರಕೃತ. ಆದರೆ ಇದರ ಮುಖ್ಯಾಂಗವೆಂದರೆ ಒಂದು ಕಲ್ಲನ್ನು ಕೈಯಿಂದ ಮೇಲಕ್ಕೆಸೆದು ಅದು ಕೆಳಗೆ ಬೀಳುವಷ್ಟರೊಳಗೆ ನೆಲದ ಮೇಲಿರುವ ಉಳಿದೈದು ಕಲ್ಲುಗಳನ್ನು ಆಯ್ದುಕೊಂಡು ಆ ಕೈಯಲ್ಲಿಯೇ ಬೀಳಲಿರುವ ಕಲ್ಲನ್ನು ಹಿಡಿದುಕೊಳ್ಳುವುದು. ಇದು ತತ್ತ್ವತಃ ವೇದಾಂತಮಯವಾದ ಖೇಲನ.

ಈ ಆಟದ ಹೆಸರೇ ಅದನ್ನು ವಿವರಿಸುತ್ತಿದೆ. ಮನಸ್ಸನ್ನು ಉನ್ಮನೀಕರಿಸುವುದೇ (ಮನಸ್ + ಉನ್ಮನೀಕರಣ = ಮನ ಉನ್ಮನೀಕರಣ ಎಂದು ಸಾಮಾನ್ಯಸಂಧಿನಿಯಮ. ಆದರೆ ಮನೋನ್ಮನೀಕರಣವೆಂದು ಮತ್ತೆ ಸಂಧಿಯಾಗಿರುವುದು ವೈದಿಕವ್ಯಾಕರಣದ ವಿಶೇಷ. ಅಲ್ಲಿ ‘ಛಂದಸಿ ಬಹುಲಂ’ ಎಂಬ ಪಾಣಿನಿಯ ಸೂತ್ರಾನುಸಾರ ಎರಡು ಬಾರಿ ಸಂಧಿಯಾಗಿದೆ. ಇದೂ ಈ ಕ್ರೀಡೆಯ ಆರ್ಷತ್ವಕ್ಕೊಂದು ಸಾಕ್ಷಿಯೆನ್ನಬಹುದೇನೋ!) ಇಲ್ಲಿಯ ವಿವಕ್ಷೆ. ಉನ್ಮನೀಕರಿಸುವುದೆಂದರೆ ಉನ್ನತಿಯತ್ತ ಉತ್ಕಂಠತೆಯಿಂದ ತಿರುಗುವಂತೆ ಮಾಡುವುದೆಂದು ತಾತ್ಪರ್ಯ. ಅರ್ಥಾತ್, ಉನ್ನತಮೌಲ್ಯಗಳತ್ತ ಆಭಿಮುಖ್ಯ. ಇದಾದರೂ ಹೇಗೆ ಸಾಧ್ಯ? ಇಂದ್ರಿಯನಿಗ್ರಹದಿಂದಲ್ಲವೇ! ಮುಖ್ಯವಾಗಿ ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳೆಂಬ ಪಂಚತನ್ಮಾತ್ರಗಳಿಗೆ ಸಂಬಂಧಿಸಿದ ಜ್ಞಾನೇಂದ್ರಿಯಗಳನ್ನು ಅವುಗಳ ವಿಷಯಗಳಾದ ಪಾಂಚಭೌತಿಕಜಗದ್ವಿಶೇಷಗಳಿಂದ ಹಿಂದೆ ಸೆಳೆದು ಮನಸ್ಸಿನಲ್ಲಿ ಕೇಂದ್ರೀಕರಿಸುವುದು; ಹಾಗೂ ಮನಸ್ಸನ್ನು ಅಂತಮುಖಗೊಳಿಸುವುದು. ಇದೇ ಉನ್ನತಿಗೇರಿದ ಮನಸ್ಸು ತನ್ನಂತೆಯೇ ಮಿಕ್ಕ ಇಂದ್ರಿಯಗಳನ್ನು ನಿಯಂತ್ರಣದಲ್ಲಿರಿಸುವುದೆಂಬ ಮನೋನ್ಮನೀಕ್ರೀಡೆಯ ಸಂಕೇತ. ಇಲ್ಲಿ ಯೋಗವಾಸಿಷ್ಠದ ಶ್ಲೋಕವೊಂದು ಉಲ್ಲೇಖನೀಯ:

ಚಿತ್ತಮಿಂದ್ರಿಯಸೇನಾಯಾ ನಾಯಕಸ್ತಜ್ಜಯಾಜ್ಜಯಃ |

ಉಪಾನದ್ಗೂಢಪಾದಸ್ಯ ಚರ್ವವೃತೇವ ಸರ್ವಭೂಃ ||

(ಮನಸ್ಸೇ ಎಲ್ಲ ಇಂದ್ರಿಯಗಳ ನಾಯಕ. ಅದನ್ನು ಗೆದ್ದರೆ ಮಾತ್ರ ನಿಜವಾದ ಗೆಲವು. ಕಾಲಿಗೆ ಚಪ್ಪಲಿ ತೊಟ್ಟರೆ ಜಗತ್ತೆಲ್ಲವೂ ನಮ್ಮ ಪಾಲಿಗೆ ಚರ್ವಚ್ಛಾದಿತವೆಂಬಂತೆ ತೋರಿ ನಾವು ನಡದಲ್ಲೆಲ್ಲ ಮಡಿ ಹಾಸಿದಂತಿರುವುದು.) ಈ ಭಾವವನ್ನೇ ನೀಲಕಂಠದೀಕ್ಷಿತನ ವೈರಾಗ್ಯಶತಕವು ಮರುದನಿಸಿದೆ:

ವಿಷಯಾನನುಕೂಲಯಿತುಂ ವಿಷಯಿಣಿ

ಚಿತ್ತೇ ವಿಧೀಯತಾಂ ಯತ್ನಃ |

ದೃಶಿ ದೇಯಮೌಷಧಂ ಕೋ ದೃಶ್ಯೇ ದತ್ವಾ ಕೃತೀ ಭವತಿ ||

(ವಿಷಯಪ್ರಪಂಚವನ್ನು ನಮಗೆ ಅನುಕೂಲವಾಗಿಸಿಕೊಳ್ಳಲು ವಿಷಯಿಯಾದ ಮನಸ್ಸಿನಲ್ಲಿ ಹೆಚ್ಚಿನ ನಿಯಂತ್ರಣವನ್ನು ಸಾಧಿಸಬೇಕು. ಹಾಗಲ್ಲದೆ ವಿಷಯಜಗತ್ತಿನಲ್ಲಿಯೇ ಸುಧಾರಣೆಗೆಳೆಸುವುದು ಅವಿವೇಕ. ಕಾಮಾಲೆಯ ಕಾರಣ ಲೋಕವೆಲ್ಲ ಹಳದಿಯಾಗಿ ತೋರಿದರೆ ಅದಕ್ಕೆ ನಮ್ಮೊಳಗೆ ಚಿಕಿತ್ಸೆ ಬೇಕಲ್ಲದೆ ಹೊರಗಿನ ಪ್ರಪಂಚಕ್ಕೆಲ್ಲ ಬಿಳಿಯ ಬಣ್ಣವನ್ನು ಬಳಿಯುವುದು ತರವಲ್ಲ.)

ಇದೇ ರೀತಿ ಪರಮಪದಸೋಪಾನವೆಂಬ ಮತ್ತೊಂದು ಆಟವೂ ಲೋಕವಿಖ್ಯಾತ. ಇದೀಗ ಹಾವು-ಏಣಿಯಾಟವೆಂದು ವಿಶ್ವವ್ಯಾಪಕವಾದ ಕ್ರೀಡೆಯೆನಿಸಿದೆ. ಇದು ಮೂಲತಃ ಸಾಧಕನೊಬ್ಬನು ಸಾಧನೋಪಾಯಗಳೆಂಬ ಏಣಿಗಳನ್ನು ಹತ್ತುತ್ತ, ಅರಿಷಡ್ವರ್ಗಾದಿವಿಘ್ನಗಳೆಂಬ ಹಾವುಗಳನ್ನು ದಾಟಿಕೊಳ್ಳುತ್ತ, ಕಟ್ಟಕಡೆಗೆ ಪರಮಪದವಾದ ಮುಕ್ತಿಗೆ ಸೇರಬೇಕೆಂಬ ತತ್ತ್ವವನ್ನು ಆಧರಿಸಿ ರೂಪುಗೊಂಡಿದೆ. ಇಲ್ಲಿ ಸಾಧಕನ ಮುಮುಕ್ಷುತ್ವದ ತೀವ್ರತೆಯೇ ಆಟಗಾರನ ‘ಗರ’ಗಳಿಗೆ ಸಂವಾದಿ. ಹೆಚ್ಚಿನ ಹಾಗೂ ಸರಿಯಾದ ಗರ ಬಂದರೆ ಅವನಿಗೆ ತೀವ್ರಮುಮುಕ್ಷುತ್ವವೆಂದೂ ಹಾಗಲ್ಲದಿದ್ದಲ್ಲಿ ಅಲ್ಪಮುಮುಕ್ಷುತ್ವವೆಂದೂ ತಾತ್ಪರ್ಯ. ಈಚಿನ ವರ್ಷಗಳಲ್ಲಿ ಈ ಆಟವು ಬದುಕಿನ ಎಲ್ಲ ಬಗೆಯ ಶಿಕ್ಷಣಗಳಿಗೂ ನೀಲನಕ್ಷೆಯೆಂಬಂತೆ ರೂಪುಗೊಂಡಿರುವುದು ಸರ್ವವೇದ್ಯ. ವ್ಯಕ್ತಿತ್ವವಿಕಾಸ, ಆಹಾರಸಮತೋಲನ, ಸ್ವಸ್ಥವೃತ್ತ, ನಿರ್ವಾಹಕತಂತ್ರ ಮೊದಲಾದ ಅನೇಕವಿಷಯಗಳಿಗೆ ಅನುಕೂಲಿಸುವಂತೆ ಈ ಆಟವು ಹವಣುಗೊಂಡಿರುವುದು ಸರ್ವಜನಪ್ರತ್ಯಕ್ಷ. ಹೀಗೆ ಆತ್ಮೋದ್ಧಾರದ ಆಯಾಮವಿದ್ದ ಆಟವೊಂದು ಬದುಕಿನ ಮಿಕ್ಕೆಲ್ಲ ಮುಖಗಳಿಗೂ ಸಂದಿರುವುದು ಅಧ್ಯಾತ್ಮವಿದ್ಯೆಯ ಸರ್ವಗ್ರಾಸಿತ್ವಕ್ಕೂ ಸಂವಾದಿಯೆನ್ನಬಹುದು.

ಒಟ್ಟಿನಲ್ಲಿ ಆತ್ಮಪ್ರವಣವಾದ ಸಂಸ್ಕೃತಿಯೊಂದು ತನ್ನೆಲ್ಲ ಜೀವನಮುಖಗಳಲ್ಲಿಯೂ ಅದರ ಪ್ರಭೆಯನ್ನು ಹೊಮ್ಮಿಸುತ್ತಿರು ವುದೆಂಬುದಕ್ಕೆ ನಮ್ಮ ಜಾನಪದಖೇಲನಗಳೂ ಸೇರಿದಂತೆ ಎಲ್ಲ

ಆಟಗಳು, ಕಲೆಗಳು, ಜೀವಿಕಾವಿಧಾನಗಳು ಹಾಗೂ ವಿದ್ಯಾಶಾಖೆಗಳು ಸಾಕ್ಷಿಯಾಗಿವೆ. ಇವುಗಳ ಅಂತರರ್ಥವನ್ನು ಗಮನಿಸುವಷ್ಟಾದರೂ ಪಾಟವವನ್ನು ನಾವು ಗಳಿಸಿದರೆ ಎಷ್ಟೋ ಒಳಿತು. ಹೊತ್ತು ಕಳೆಯುವ ಸಾಧನವಾಗಿ, ಮನೋವಿಕ್ಷೇಪದ ಆಯಾಮವಾಗಿ ಬೆಳೆದುಬಂದ ಆಟಗಳು ಹೊತ್ತೆಂಬ ಕಾಲವನ್ನೇ ಮೀರುವ, ಮನಸ್ಸೆಂಬ ಉಪಾಧಿಯನ್ನೇ ದಾಟುವ ಮಟ್ಟಿಗೆ ಆತ್ಮಪ್ರಾವಣ್ಯವನ್ನು ಆಡುಗರಲ್ಲಿ ಮೂಡಿಸಿದರೆ ಇದಕ್ಕಿಂತ ಮಿಗಿಲಾದದ್ದು ಮತ್ತೇನಿದೆ?

(ಲೇಖಕರು ಬಹುಶ್ರುತ ವಿದ್ವಾಂಸರು)

(ಕೃಪೆ: ‘ಪ್ರೇಕ್ಷಾ’ ಅಂತರ್ಜಾಲತಾಣ)

(ಪ್ರತಿಕ್ರಿಯಿಸಿ:[email protected], [email protected])

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...