ತುಮಕೂರು: ಮದುವೆಯಾಗಲು ನಿರಾಕರಿಸಿದ ಬಾಲಕಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಅಪರಾಧಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡದ ವಿಧಿಸಿದೆ.
ಶಿರಾ ತಾಲೂಕು ದೊಡ್ಡಗುಳದ ಕಾವ್ಯ ಎಂಬಾಕೆಯನ್ನು ಅದೇ ಗ್ರಾಮದ ವಾಸಿ ಈರಣ್ಣ ಅಲಿಯಾಸ್ ಸಣ್ಣೀರ ಎಂಬಾತನು ಪ್ರೀತಿಸುವಂತೆ ಒತ್ತಾಯಿಸಿದ್ದ. ಆಕೆ ನಿರಾಕರಿಸಿದ ಹಿನ್ನೆಲೆಯಲ್ಲಿ 2021 ಏ.5ರಂದು ಕಾವ್ಯಾ ತನ್ನ ಸ್ನೇಹಿತರೊಂದಿಗೆ ಕಾಲೇಜಿಗೆ ಹೋಗುತ್ತಿದ್ದಾಗ ದೊಡ್ಡಗುಳ ಕೆರೆಗೆ ಎಳೆದುಕೊಂಡು ಹೋಗಿ ನನ್ನನ್ನು ಮದುಗೆಯಾಗು ತಾಳಿ ತಂದಿದ್ದೇನೆ ಎಂದು ಹೇಳಿ ತಾಳಿ ತೋರಿಸಿದಾಗ ಕಾವ್ಯಾ ಕಪಾಳಕ್ಕೆ ಹೊಡೆದು ಮದುವೆ ಆಗುವುದಿಲ್ಲ ಎಂದು ಹೇಳಿದ್ದಕ್ಕೆ ಈರಣ್ಣ ಕುಡುಗೋಲಿನಿಂದ ಮುಖ, ಕುತ್ತಿಗೆ, ಮುಂಗೈಗಳಿಗೆ ಹೊಡೆದು ಕೊಚ್ಚಿ ಕೊಲೆ ಮಾಡಿದ್ದನು. ಶಿರಾ ಗ್ರಾಮಾಂತರ ಠಾಣೆ ಸಿಪಿಐ ಸಿ.ರವಿಕುಮಾರ್ ತನಿಖೆ ನಡೆಸಿ ಆರೋಪಿ ವಿರುದ್ಧ ಕಲಂ 302ಐಪಿಸಿ ಅಡಿಯಲ್ಲಿ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕಿ ಆರ್.ಟಿ.ಅರುಣ ವಾದ ಮಂಡಿಸಿದ್ದರು.
