ಬಾಲಕಿಗೆ ವೃದ್ಧನಿಂದ ಲೈಂಗಿಕ ಕಿರುಕುಳ

ಹುಬ್ಬಳ್ಳಿ: 5 ವರ್ಷದ ಬಾಲಕಿ ಮೇಲೆ 69 ವರ್ಷದ ವೃದ್ಧ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮ ದಲ್ಲಿ ನಡೆದಿದೆ. ಗ್ರಾಮದ ಮೋಹನ ಹನು ಮಂತಪ್ಪ ಮಾಕನ್ನವರ (69) ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಬಾಲಕಿ ಆಟವಾಡುತ್ತಿದ್ದಾಗ ಪುಸಲಾಯಿಸಿ ಗ್ರಾಮದ ಕರೆಮ್ಮದೇವಿ ಗುಡಿ ಬಳಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸ ಲಾಗಿದೆ ಎಂದು ಗುಡಗೇರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬೈಕ್ ಸಮಸ್ಯೆ ಡೀಲರ್​ಗೆ ದಂಡ

ಹುಬ್ಬಳ್ಳಿ: ಹೊಸ ಬೈಕ್​ನಲ್ಲಿನ ಸಮಸ್ಯೆಯನ್ನು ಸರಿಯಾಗಿ ನಿವಾರಣೆ ಮಾಡಿಕೊಡದ ಸುಜುಕಿ ಮೋಟರ್ ಸೈಕಲ್ ಕಂಪನಿ ಹಾಗೂ ಅದರ ಸ್ಥಳೀಯ ಡೀಲರ್​ಗೆ ಗ್ರಾಹಕ ವೇದಿಕೆ ದಂಡ ವಿಧಿಸಿ ಆದೇಶ ಹೊರಡಿಸಿದೆ.

ನೂತನ ಬೈಕ್​ನಲ್ಲಿ ಕಂಡು ಬಂದ್ ವೈಬ್ರೇಷನ್ ಸಮಸ್ಯೆಯನ್ನು ಸರಿಯಾಗಿ ದುರಸ್ತಿ ಮಾಡದ ಬೈಕ್ ಉತ್ಪಾದಕರು ಹಾಗೂ ಅದರ ಡೀಲರ್​ಗೆ ಗ್ರಾಹಕ ವೇದಿಕೆ, ಬೈಕ್​ನ್ನು ಉಚಿತವಾಗಿ ದುರಸ್ತಿ ಮಾಡಿಕೊಡಬೇಕು ಮತ್ತು ಗ್ರಾಹಕರು ಮಾನಸಿಕವಾಗಿ ಅನುಭವಿಸಿದ ವೇದನೆಗೆ ಪರಿಹಾರವಾಗಿ 3000 ರೂ. ಹಾಗೂ ಸಾವಿರ ರೂ. ವೆಚ್ಚವಾಗಿ ನೀಡಬೇಕು. ಈ ಆದೇಶ 30 ದಿನಗಳೊಳಗೆ ಪಾಲಿಸಲು ಸೂಚಿಸಿದೆ. ಹುಬ್ಬಳ್ಳಿಯ ಬಮ್ಮಾಪುರ ಓಣಿಯ ಮಧುಕರ ಬಡಿಗೇರ ಅವರು ಸುಜುಕಿ ಮೋಟರ್ ಸೈಕಲ್​ನ್ನು ಸ್ಥಳೀಯ ಡೀಲರ್ ಕಡೆಯಿಂದ ಕೊಂಡುಕೊಂಡಿದ್ದರು. ಆದರೆ, ಅದರಲ್ಲಿ ಒಂದೆರಡು ಫ್ರೀ ಸರ್ವಿಸ್ ಆಗುವಷ್ಟರಲ್ಲಿ ವೈಬ್ರೇಷನ್ ಕಂಡು ಬಂತು. ಈ ಬಗ್ಗೆ ಡೀಲರ್​ಗೆ ತಿಳಿಸಿದರು. ಅವರು ದುರಸ್ತಿ ಮಾಡಿದರೂ ಸರಿಯಾಗಿರಲಿಲ್ಲ ಎಂದು ಮಧುಕರ ಅವರು ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಗ್ರಾಹಕ ದೂರು ನಿವಾರಣೆ ವೇದಿಕೆಯ ಅಧ್ಯಕ್ಷ ಜಿ.ಎಂ. ಕುಂಬಾರ ಈ ಆದೇಶ ಮಾಡಿದ್ದಾರೆ.

ಬೀದಿ ಕಾಮಣ್ಣನಿಗೆ ಬಿತ್ತು ಗೂಸಾ

ಹುಬ್ಬಳ್ಳಿ: ಬಾಲಕಿಯ ಅಪಹರಣಕ್ಕೆ ಯತ್ನಿಸಿದ ಬೀದಿ ಕಾಮಣ್ಣನನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಶಿರೂರ ಪಾರ್ಕ್ ಚೇತನಾ ಕಾಲೇಜ್ ಬಳಿ ಭಾನುವಾರ ಸಂಜೆ ನಡೆದಿದೆ. ಕುಂದಗೋಳ ತಾಲೂಕು ಸಂಶಿ ಗ್ರಾಮದ ಸುರೇಶ (32) ಥಳಿತಕ್ಕೀಡಾದ ವ್ಯಕ್ತಿ.

ಅಕ್ಷಯ ಕಾಲನಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಈತ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ. ಭಾನುವಾರ ಸಂಜೆ ಕಂಠಪೂರ್ತಿ ಮದ್ಯ ಸೇವಿಸಿ ಬಾಲಕಿಯೊಬ್ಬಳನ್ನು ಒತ್ತಾಯ ಪೂರ್ವಕವಾಗಿ ಅಪಹರಿಸಿಕೊಂಡು ಹೋಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಬಳಿಕ ಆತನನ್ನು ಕಂಬಕ್ಕೆ ಕಟ್ಟಿ ಹಾಕಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಗೋಕುಲ ರೋಡ್ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.