ಬಾಪು ವಿಚಾರ ಪರಿಚಯ ಅಗತ್ಯ

ಧಾರವಾಡ: ತ್ಯಾಗ, ಬಲಿದಾನದ ಮೂಲಕ ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿ, ನಮ್ಮ ನೆಮ್ಮದಿಯ ಬದುಕಿಗೆ ದಾರಿ ಮಾಡಿ ಕೊಟ್ಟ ಮಹಾತ್ಮರ ಜಯಂತಿಗಳಲ್ಲಿ ಭಾಗವಹಿಸಿ ಅವರನ್ನು ಸ್ಮರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಇಂದಿನ ಮಕ್ಕಳಿಗೆ ಗಾಂಧಿ ಹಾಗೂ ಲಾಲ್​ಬಹಾದ್ದೂರ್ ಶಾಸ್ತ್ರಿ ಅವರ ವಿಚಾರ ಹಾಗೂ ಸರಳತೆಯನ್ನು ಪರಿಚಯಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಅವರ 150ನೇ ಜಯಂತ್ಯುತ್ಸವ ಉದ್ಘಾಟಿಸಿ, ಮಾರ್ಚ್ ಆಫ್ ಕರ್ನಾಟಕ, ಜನಪದ ವಿಶೇಷ ಸಂಚಿಕೆಗಳು ಮತ್ತು ‘ಪಾಪು ಗಾಂಧಿ ಬಾಪು ಗಾಂಧಿಯಾದ ಕಥೆ’ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಗಾಂಧಿ ಅವರು ಭಾರತ ಮಾತ್ರವಲ್ಲ, ಇಡೀ ಜಗತ್ತು ಕಂಡ ಅಪರೂಪದ ವ್ಯಕ್ತಿ. ಅವರ ಸಹನೆ, ಅಹಿಂಸೆ, ತ್ಯಾಗ, ಹೋರಾಟದ ಫಲವಾಗಿ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತು. ಗಾಂಧೀಜಿ ವ್ಯಕ್ತಿತ್ವಕ್ಕೆ ಮತ್ತೊಬ್ಬರನ್ನು ಹೋಲಿಸಲು ಸಾಧ್ಯವಿಲ್ಲ. ಇಂತಹ ಮಹಾತ್ಮರ ಜಯಂತಿಯಲ್ಲಿ ಜನಪ್ರತಿನಿಧಿಗಳು, ನಾಯಕರು ಭಾಗವಹಿಸಿ ತಮ್ಮ ಕರ್ತವ್ಯ ಪಾಲಿಸಬೇಕು ಎಂದರು.

ಗಾಂಧಿವಾದಿ ಡಾ. ಸಂಜೀವ್ ಕುಲಕರ್ಣಿ ಅವರು, ‘ಮಹಾತ್ಮಾ ಗಾಂಧಿ ಮೌಲ್ಯಗಳ ಮಹತ್ವ ಮತ್ತು ಪ್ರಸ್ತುತತೆ’ ಕುರಿತು ವಿಶೇಷ ಉಪನ್ಯಾಸ ನೀಡಿ, ಜಗತ್ತಿನ ಬಹುತೇಕ ದೇಶಗಳಿಂದ ಗೌರವ ಪಡೆಯುತ್ತಿರುವ ಏಕೈಕ ವ್ಯಕ್ತಿ ಗಾಂಧಿ. ಅವರ ಜನ್ಮದಿನವನ್ನು ಅಹಿಂಸಾ ದಿನವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಧೈರ್ಯ ಹಾಗೂ ಪ್ರಯೋಗಶೀಲತೆ ಅವರ ಗುಣಗಳಾಗಿದ್ದವು ಎಂದರು.

ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ದೀಪಾ ಚೋಳನ್, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ., ಉಪ ವಿಭಾಗಾಧಿಕಾರಿ ಮಹ್ಮದ್ ಝುುಬೇರ್ ಸೇರಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಇದ್ದರು.

ಶ್ರೀಧರ ಕುಲಕರ್ಣಿ, ಆಸೀಫ್ ಯರಗಟ್ಟಿ, ಫಾದರ್ ಪ್ರಶಾಂತ ಡಿಸೋಜಾ, ಪಬ್ಜಜ್ಜೊರವಿತಿಪಾಲಿವಿಜ್ಜಾಮುನಿಯೊ ಹಾಗೂ ಬಸವರಾಜ ಅವರಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಆರತಿ ದೇವಶಿಖಾಮಣಿ ನಿರೂಪಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ವಂದಿಸಿದರು.

ಛಾಯಾಚಿತ್ರ ಮತ್ತು ಸಾಕ್ಷ್ಯತ್ರ ಪ್ರದರ್ಶನ: ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಗಾಂಧಿ ಅವರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ನಂತರ ವಾರ್ತಾ ಇಲಾಖೆ ನಿರ್ವಿುಸಿರುವ ಗಾಂಧಿ ಜೀವನ ಚರಿತ್ರೆ ಮತ್ತು ಸಂದೇಶವುಳ್ಳ ಸಾಕ್ಷ್ಯತ್ರ ಪ್ರದರ್ಶಿಸಲಾಯಿತು.

ಶ್ರಮದಾನ: ಗಾಂಧಿ ಜಯಂತಿ ಅಂಗವಾಗಿ ನಗರದ ವಿವಿಧೆಡೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳು ಬೆಳಗ್ಗೆ 7 ಗಂಟೆಗೆ ಶ್ರಮದಾನ ನಡೆಸಿದರು. ಜುಬಿಲಿ ವೃತ್ತದಿಂದ ಶ್ರಮದಾನ ಪ್ರಾರಂಭಿಸಿ ಸಿಬಿಟಿ, ವಿವೇಕಾನಂದ ವೃತ್ತ, ಕಲಾಭವನ ಆವರಣ, ಕೆಸಿಸಿ ಬ್ಯಾಂಕ್ ವೃತ್ತ, ಸೂಪರ್ ಮಾರುಕಟ್ಟೆ ಪ್ರದೇಶ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶ್ರಮದಾನ ನಡೆಸಲಾಯಿತು.

ಪ್ರೋಟೊಕಾಲ್ ಬೇಕಿಲ್ಲ: ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಸ್ಥಳೀಯ ಎಲ್ಲ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ ಯಾರೂ ಬಂದಿಲ್ಲ (ಬಸವರಾಜ ಹೊರಟ್ಟಿ ಹೊರತುಪಡಿಸಿ) ಎಂದು ವಿಶೇಷ ಉಪನ್ಯಾಸಕಾರ ಡಾ. ಸಂಜೀವ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು. ಪ್ರೋಟೊಕಾಲ್ ಪಾಲಿಸಬೇಕು ಎಂದು ಜನಪ್ರತಿನಿಧಿಗಳ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಬೇಕಿಲ್ಲ. ಸಭೆಗೆ ಎಲ್ಲರೂ ಆಗಮಿಸಿ ಸಭಾ ಮರ್ಯಾದೆ, ಸಮಯ ಪಾಲನೆಯ ಮೂಲ ಪಾಠಗಳನ್ನು ಕಲಿತು ಮಕ್ಕಳಿಗೂ ಕಲಿಸಬೇಕು. ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಗಾಂಧೀಜಿಗೆ ಅವಮಾನ ಮಾಡಿದಂತೆ ಎಂದರು.