ಹುಬ್ಬಳ್ಳಿ: ವೈನ್ ಶಾಪ್ ಹಾಗೂ ಎಂಎಸ್ಐಎಲ್ ಮಳಿಗೆಗಳಿಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದ ಸರ್ಕಾರ, ಬಾರ್ ಆಂಡ್ ರೆಸ್ಟೋರೆಂಟ್, ಕ್ಲಬ್ಗಳಿಗೂ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶನಿವಾರ 100ಕ್ಕೂ ಹೆಚ್ಚು ಬಾರ್ಗಳು ಬಾಗಿಲು ತೆರೆದಿದ್ದವು.
ದಾಸ್ತಾನು ಅವಧಿ ಮೀರುವ ನೆಪದಲ್ಲಿ ಶನಿವಾರದಿಂದ ಬಾರ್, ರೆಸ್ಟೋರೆಂಟ್, ಕ್ಲಬ್, ಲಾಡ್ಜ್ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ, ಕುಳಿತು ಮದ್ಯ ಸೇವಿಸುವಂತಿಲ್ಲ. ಪಾರ್ಸಲ್ ತೆಗೆದುಕೊಂಡು ಹೋಗಬೇಕು ಎಂಬ ಆದೇಶವನ್ನು ಪಾಲಿಸಲಾಯಿತು. ಎಂಎಸ್ಐಎಲ್ ಹಾಗೂ ವೈನ್ ಶಾಪ್ಗಳಲ್ಲಿ ಬಹುತೇಕ ಬ್ರ್ಯಾಂಡ್ ಮದ್ಯ ಖಾಲಿಯಾಗಿತ್ತು. ಆ ಹಿನ್ನೆಲೆಯಲ್ಲಿ ಮದ್ಯ ಪ್ರಿಯರು ಬಾರ್ಗಳಲ್ಲಿ ಸಂಗ್ರಹವಿದೆ ಎಂದು ಬಾರ್ಗಳಿಗೆ ಎಡತಾಕಿದ್ದರು.
ಜಿಲ್ಲೆಯಲ್ಲಿ ಕಳೆದ ವಾರ ವೈನ್ ಶಾಪ್ ಹಾಗೂ ಎಂಎಸ್ಐಎಲ್ ಸೇರಿ 94 ಮಳಿಗೆ ಆರಂಭಿಸಲಾಗಿತ್ತು. ಇದೀಗ ಬಾರ್ಗಳನ್ನೂ ಆರಂಭಿಸಿದ್ದರಿಂದ ಆ ಸಂಖ್ಯೆ 201ಕ್ಕೆ ಏರಿದೆ. ಸೀಲ್ಡೌನ್ ಪ್ರದೇಶದ 1 ಕಿ.ಮೀ. ವ್ಯಾಪ್ತಿಯ 67 ಮದ್ಯದಂಗಡಿಗಳಿಗೆ ಅನುಮತಿ ನೀಡಿಲ್ಲ ಎಂದು ಅಬಕಾರಿ ಇಲಾಖೆ ಉಪ ಅಧೀಕ್ಷಕ ಮಂಜುನಾಥ ಅರೆಗುಳಿ ತಿಳಿಸಿದ್ದಾರೆ.