ಬಾಗಿನಕಟ್ಟಾದಲ್ಲಿ ಹಳ್ಳಿ ಹಬ್ಬ

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಗಿನಕಟ್ಟಾದ ಹುಣಸೇ ಮಕ್ಕಿಯ ಬಯಲಿನಲ್ಲಿ ಅಪ್ಪಟ ದೇಸಿ ಸೊಗಡು ಪರಿಚಯಿಸುವ ಬಾಗಿನಕಟ್ಟಾ ಹಳ್ಳಿ ಹಬ್ಬ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಗ್ರಾಮಸ್ಥರು ಆಯೋಜಿಸುವ ಮೂಲಕ ಗಮನ ಸೆಳೆದರು.

ದೇಸಿ ಕ್ರೀಡೆಗಳು, ವಿವಿಧ ಬಗೆಯ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ಬೆಳದಿಂಗಳ ಊಟ ಸೇರಿ ಇಡೀ ದಿನ ನಡೆದ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು ಹಬ್ಬ ಆಚರಿಸಿದರು. ಬೆಳಗ್ಗೆ 10 ಕ್ಕೆ ಆರಂಭವಾದ ಈ ಹಳ್ಳಿ ಹಬ್ಬದಲ್ಲಿ ಪರ ಉರಿನ ನಾಗರಿಕರು ಆಗಮಿಸಿ ಹಬ್ಬದ ಸೊಬಗು ಸವಿದರು.

ಗ್ರಾಪಂ ಅಧ್ಯಕ್ಷ ಗಜಾನನ ಭಟ್ಟ ಕಳಚೆ ಹಳ್ಳಿ ಹಬ್ಬಕ್ಕೆ ಚಾಲನೆ ನೀಡಿದರು. ಮಕ್ಕಳಿಂದ ವೃದ್ಧರವರೆಗೆ ಬೇಧ- ಭಾವವಿಲ್ಲದೇ ಈ ಮನರಂಜನೆಯ ಆಟೋಟಗಳಲ್ಲಿ ಪಾಲ್ಗೊಂಡು ಖುಷಿಪಟ್ಟರು. ಗ್ರಾಮಸ್ಥರಿಗಾಗಿ ಗೋಣಿ ಚೀಲದ ಓಟ, ಬೆಂಕಿ ಕಡ್ಡಿ ಜೋಡಿಸುವುದು, ಪುಗ್ಗಿ ಉಬ್ಬಿಸುವುದು, ನೀರಿನ ಕೊಡ ಹೊತ್ತು ಓಡುವುದು, ಬಿಸ್ಕಿಟ್ ತಿನ್ನುವುದು, ತೆಂಗಿನಕಾಯಿ ತಲೆ ಮೇಲಿಟ್ಟು ಓಡುವುದು, ಒಂಟಿಕಾಲಿನ ಓಟ, ಮಣೆ ಎತ್ತುವುದು, ಅಡಕೆ ಹೆಕ್ಕುವುದು, ಕೊಳವೆಯಲ್ಲಿ ಅಡಕೆ ಎಸೆಯುವುದು ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಯುವ ಒಕ್ಕೂಟದ ಗೌರವಾಧ್ಯಕ್ಷ ಡಾ.ರವಿ ಭಟ್ಟ ಬರಗದ್ದೆ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪ್ರಶಾಂತ ಸಭಾಹಿತ, ಪ್ರಮುಖರಾದ ಗ. ನಾ. ಕೋಮಾರ ಬೀಗಾರ, ಸುಬ್ಬಣ್ಣ ಕುಂಟೆಗಾಳಿ, ಸದಾನಂದ ಭಟ್ಟ ಮಲವಳ್ಳಿ, ಚಂದ್ರಶೇಖರ ಗಾಂವ್ಕಾರ, ರಾಮಕೃಷ್ಣ ಮಾ ಭಟ್ಟ, ಅನಂತ ಭಾಗ್ವತ, ಉದಯ ಭಾಗ್ವತ, ನವೀನ ಕಿರಗಾರೆ, ದತ್ತಾತ್ರೇಯ ಗಾಂವ್ಕಾರ, ಜೆ.ಸಿ. ಭಟ್ಟ, ಶಿಕ್ಷಕರಾದ ಸಣ್ಣಪ್ಪ ಭಾಗ್ವತ, ಶಿವರಾಮ ಕೋಮಾರ, ನಾಗರಾಜ ಹೆಗಡೆ ಇದ್ದರು. ಸ್ಥಳೀಯ ಗ್ರಾ.ಪಂ. ಸದಸ್ಯ ಸುಬ್ರಹ್ಮಣ್ಯ ಗಾಂವ್ಕಾರ ಬಾಗಿನಕಟ್ಟಾ ಅವರ ನೇತೃತ್ವದಲ್ಲಿ ಈ ವಿಶಿಷ್ಟ ಕಲ್ಪನೆಯ ಹಬ್ಬ ನಡೆಯಿತು. ಸಂಜೆಯ ಚಳಿಗೆ ನಾಲ್ಕಾರು ಕಡೆಯಲ್ಲಿ ಹಾಕಿದ ಬೆಂಕಿಯ ಬಳಿ ಗ್ರಾಮಸ್ಥರೆಲ್ಲ ಸೇರಿ ಚಳಿ ಕಾಯಿಸುತ್ತಾ ಮಕ್ಕಳು, ಮಹಿಳೆಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಅಲ್ಲಿಯೇ ಒಲೆಗಳನ್ನು ನಿರ್ವಿುಸಿ ವಿವಿಧ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿ, ರಾತ್ರಿ ಬೆಳದಿಂಗಳಲ್ಲಿ ಭೋಜನ ಸವಿದರು.ಧಾವಂತದ ಬದುಕಿನಲ್ಲಿ ಹಳ್ಳಿಯ ಸೊಗಡನ್ನು ಪರಿಚಯಿಸುವ ಜೊತೆಗೆ, ಅದು ಮರೆಯಾಗದಂತೆ ಕಾಳಜಿ ವಹಿಸಬೇಕಾದ ಎಚ್ಚರಿಕೆಯನ್ನು ಈ ಹಬ್ಬ ನೆನಪಿಸಿತು.