ನರಗುಂದ: ಮೂರು ತಿಂಗಳ ಬಾಕಿ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಪೌರ ಕಾರ್ವಿುಕರು ನಿತ್ಯದ ಕಾರ್ಯ ಸ್ಥಗಿತಗೊಳಿಸಿ ಪುರಸಭೆ ಎದುರು ಗುರುವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.
ಪೌರ ಕಾರ್ವಿುಕ ನೌಕರರ ಸಂಘದ ತಾಲೂಕಾಧ್ಯಕ್ಷ ಬಿ.ಎನ್. ಚಲವಾದಿ ಮಾತನಾಡಿ, ಪುರಸಭೆಯಲ್ಲಿ ಒಟ್ಟು 97 ಪೌರ ಕಾರ್ವಿುಕರು ದುಡಿಯುತ್ತಿದ್ದೇವೆ. ಮೂರು ತಿಂಗಳಿಂದ ಪೌರ ಕಾರ್ವಿುಕರಿಗೆ ಸಂಬಳ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಇದರಿಂದ ಪೌರ ಕಾರ್ವಿುಕರ ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.
ಪ್ರತಿ ತಿಂಗಳು 5ನೇ ತಾರೀಖಿನೊಳಗಾಗಿ ವೇತನ ಪಾವತಿಸುವಂತೆ ಆಗ್ರಹಿಸಿ ಅನೇಕ ಬಾರಿ ಪ್ರತಿಭಟನೆ ನಡೆಸಿ ಪುರಸಭೆಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಇಲಾಖೆಯಲ್ಲಿ ಹಣವಿದ್ದರೂ ವೇತನ ಪಾವತಿಸುತ್ತಿಲ್ಲ ಎಂದು ಆರೋಪಿಸಿದರು.
ಚಳಿ ಕಾಯಿಸಿಕೊಂಡರು: ಪೌರ ಕಾರ್ವಿುಕರು ಪುರಸಭೆ ಎದುರು ಗುರುವಾರ ಬೆಳಗಿನ ಜಾವ 5 ಗಂಟೆಗೆ ಪ್ರತಿಭಟನೆ ನಡೆಸಿದರು. ಚಳಿಯಿಂದ ರಕ್ಷಿಸಿಕೊಳ್ಳಲು ಪುರಸಭೆ ಎದುರು ಒಲೆ ಹೂಡಿ, ಚಹಾ ತಯಾರಿಸಿ ಕುಡಿದರು. ಕೆಲವರು ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡರು.
ಸ್ವಚ್ಛತಾ ಕಾರ್ಯಗಳಿಗೆ ವಿದಾಯ: ಪೌರ ಕಾರ್ವಿುಕರು ಗುರುವಾರ ಸ್ವಚ್ಛತಾ ಕಾರ್ಯಗಳಿಗೆ ವಿದಾಯ ಹೇಳಿ ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಆದ್ದರಿಂದ ಪಟ್ಟಣದ ಮಾರ್ಕೆಟ್, ಜವಳಿ ಬಜಾರ್ ಸೇರಿ ವಿವಿಧ ಬಡಾವಣೆ ಹಾಗೂ ಮನೆಮನೆಗಳ ಕಸ ಸಂಗ್ರಹ ವಿಲೇವಾರಿಯಾಗದೆ ಪ್ರಮುಖ ರಸ್ತೆಗಳೆಲ್ಲವೂ ತ್ಯಾಜ್ಯದಿಂದ ತುಂಬಿಕೊಂಡಿದ್ದವು. ಅಲ್ಲದೆ, ವಿವಿಧ ಬಡಾವಣೆಗಳಿಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಜನರು ಕುಡಿಯುವ ನೀರಿಲ್ಲದೆ ಪುರಸಭೆಗೆ ಹಿಡಿಶಾಪ ಹಾಕಿದರು.