ಬಹುಗ್ರಾಮ ಯೋಜನೆಯಡಿ ನೀರು ಕೊಡಿ

ರೋಣ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದ ಚೋಳಚಗುಡ್ಡದ ಹತ್ತಿರದ ಮಲಪ್ರಭೆ ನದಿಯಲ್ಲಿ ನೀರು ಖಾಲಿಯಾಗಿದ್ದು, ಜನತೆ, ಜಾನುವಾರು ಪರದಾಡುವಂತಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಡಿಬಿಒಟಿ)ಯಡಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಪುರಸಭೆ ಸದಸ್ಯ ಗದಿಗೆಪ್ಪ ಕಿರೇಸೂರ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್ ನೇತೃತ್ವದಲ್ಲಿ ಶುಕ್ರವಾರ ನಡೆದ ಪುರಸಭೆ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಪುರಸಭೆ ಇಂಜಿನಿಯರ್ ಬಿ.ಎ. ನದಾಫ್ ಮಾತನಾಡಿ, ನೀವು ಪ್ರತಿಭಟನೆ ನಡೆಸುವ ಪೂರ್ವದಲ್ಲಿ ಈ ವಿಚಾರವಾಗಿ ಜಿಲ್ಲಾಧಿಕಾರಿ ಜೊತೆ ಮಾತನಾಡುವುದು ಸೂಕ್ತ ಎಂದರು. ಅದಕ್ಕೆ ಒಪ್ಪದ ಪುರಸಭೆ ಸದಸ್ಯರು ಈಗಾಗಲೇ ಈ ವಿಷಯವಾಗಿ ನಾವು ಹಲವು ಭಾರಿ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದೇವೆ. ಆಗ ಜಿಲ್ಲಾಧಿಕಾರಿಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಡಿಬಿಒಟಿ) ಮೂಲಕ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಿದರೆ ಕಾನೂನಾತ್ಮಕವಾಗಿ ತೊಡಕುಗಳು ಉಂಟಾಗುತ್ತವೆ ಎಂದು ಹೇಳಿದ್ದರು. ಆದರೆ ಗಜೇಂದ್ರಗಡ ಪಟ್ಟಣಕ್ಕೆ ನೀರು ಬಿಟ್ಟಿದ್ದಾರೆ. ಈಗ ಕಾನೂನಾತ್ಮಕ ತೊಡಕು ಉಂಟಾಗಿಲ್ಲವೆ? ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ನಾವು ಜಿಲ್ಲಾಧಿಕಾರಿಯನ್ನು ಭೇಟಿ ಮಾಡುವುದಿಲ್ಲ. ನೀವು ಬೇಕಿದ್ದರೆ ಭೇಟಿ ಮಾಡಿ ನಮ್ಮ ಸಮಸ್ಯೆ ಇತ್ಯರ್ಥಗೊಳಿಸಿ ಎಂದು ಪುರಸಭೆ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ಅವರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಇಂಜಿನಿಯರ್ ಬಿ.ಎ. ನದಾಫ್, ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇರುವುದು ಗ್ರಾಮೀಣ ಪ್ರದೇಶಕ್ಕೆ ಮಾತ್ರ. ಈ ಯೋಜನೆಯಡಿ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ನೀರು ಪೂರೈಕೆಗೆ ಅವಕಾಶವಿಲ್ಲ ಎಂದರು. ಇದರಿಂದ ಕೆರಳಿದ ಬಹುತೇಕ ಸದಸ್ಯರು ‘ಗಜೇಂದ್ರಗಡ ಗ್ರಾಮೀಣ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತದೆಯೇ? ಎಂದು ಪ್ರಶ್ನಿಸಿದರು.

ಪುರಸಭೆ ಸದಸ್ಯರಾದ ಮಲ್ಲಯ್ಯ ಮಹಾಪುರುಷಮಠ, ಅಲ್ತಾಫ್​ಅಹ್ಮದ್ ತಹಸೀಲ್ದಾರ, ಶಕುಂತಲಾ ದೇಶಣ್ಣವರ, ಗೀತಾ ಮಾಡಲಗೇರಿ, ಲಕ್ಷ್ಮೀ ಕೊಪ್ಪದ, ಸಂಗನಗೌಡ ಪಾಟೀಲ, ಈರಪ್ಪ ಕಡುಬಿನಕಟ್ಟಿ, ದುರಗಪ್ಪ ಹಿರೇಮನಿ, ಸಂಗಪ್ಪ ಜಿಡ್ಡಿಬಾಗಿಲ, ರಂಗವ್ವ ಭಜಂತ್ರಿ, ಶಕುಂತಲಾ ಚಿತ್ರಗಾರ, ವಿಜಯೇಂದ್ರ ಗಡಗಿ, ವಿಜಯಲಕ್ಷ್ಮೀ ಕೊಟಗಿ, ರೇಣುಕಾ ರಂಗನಗೌಡ್ರ, ಸಂತೋಷ ಕಡಿವಾಲ, ಅಂದಪ್ಪ ಗಡಗಿ, ಬಸವ್ವ ಕೊಪ್ಪದ, ಬಾವಾಸಾಬ್ ಬೇಟಗೇರಿ, ಚೆನ್ನಬಸಮ್ಮ ಹಿರೇಮಠ, ದಾವಲಸಾಬ್ ಬಾಡಿನ, ವಿದ್ಯಾ ದೊಡ್ಡಮನಿ ಇತರರು ಇದ್ದರು.

ಪ್ರತಿಭಟನೆಯ ಎಚ್ಚರಿಕೆ
ಪುರಸಭೆಯ ಎಲ್ಲ ಸದಸ್ಯರು ಮಾತನಾಡಿ, ‘ಈಗಾಗಲೇ ಗಜೇಂದ್ರಗಡ ಪಟ್ಟಣಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಕೆಯಾಗುತ್ತಿದೆ. ಅದೇ ರೀತಿ ರೋಣ ಪಟ್ಟಣಕ್ಕೂ ಪೂರೈಕೆಯಾಗಬೇಕು. ಇಲ್ಲದಿದ್ದರೆ ಮೇ 14ರಂದು ರೋಣ ಪುರಸಭೆ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಮೇ 15ರಂದು ಪಟ್ಟಣದ ಸಾರ್ವಜನಿಕರ ಸಹಕಾರದೊಂದಿಗೆ ರೋಣ ಬಂದ್ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.