ಬಹಿರಂಗ ಪ್ರಚಾರಕ್ಕೆ ತೆರೆ

ಕಾರವಾರ: ಉತ್ತರ ಕನ್ನಡ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಾಯಂಕಾಲ ತೆರೆ ಬಿದ್ದಿದೆ.

ಇಷ್ಟು ದಿನ ವಿವಿಧೆಡೆ ಪ್ರಚಾರ ಸಭೆಗಳನ್ನು ನಡೆಸಿದ್ದ ರಾಜಕೀಯ ಪಕ್ಷಗಳು ಕೊನೆಯ ದಿನ ರ‍್ಯಾಲಿ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದವು. ಕಾರವಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪರ ಬೃಹತ್ ರ‍್ಯಾಲಿ ನಡೆಯಿತು. ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ನಗರದಲ್ಲಿ ರ‍್ಯಾಲಿ ನಡೆಸಿ ಮತ ಯಾಚನೆ ಮಾಡಿದರು. ಅಂಗಡಿಗಳಿಗೆ ತೆರಳಿ ಬಿಜೆಪಿ ಸಾಧನೆ ಸಾರಿದರು.

ಬೆಂಗಳೂರು ಮಹಾನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾರದಾ ನಾಯ್ಕ, ಮಾಜಿ ಶಾಸಕ ಗಂಗಾಧರ ಭಟ್,ಪ್ರಮುಖರಾದ ಗಣಪತಿ ಉಳ್ವೇಕರ್, ಮನೋಜ ಭಟ್ ಸುಜಾತಾ ಬಾಂದೇಕರ್, ರಾಜೇಶ ನಾಯ್ಕ, ಡಾ.ನಿತಿನ್ ಪಿಕಳೆ, ನಾಗೇಶ ಕುರ್ಡೆಕರ್, ಸಂದೇಶ ಶೆಟ್ಟಿ, ಇತರರು ಇದ್ದರು.

ಕಾಶಿಯಲ್ಲಿ ಸ್ವಾಮಿಗಳ ಸಮಾವೇಶ ಮಾಡಿ ಜಾತಿ ಪದ್ಧತಿ ನಿಮೂಲನೆ ಮಾಡಲಿ

‘ಹಿಂದು ಧರ್ಮ ರಕ್ಷಣೆ ಹೆಸರು ಹೇಳುತ್ತಿರುವ ಬಿಜೆಪಿಯ ಅನಂತ ಕುಮಾರ ಹೆಗಡೆ ಕಾಶಿಯಲ್ಲಿ ಸ್ವಾಮಿಗಳ ಸಮಾವೇಶ ಮಾಡಿ ಜಾತಿ ಪದ್ಧತಿ ನಿಮೂಲನೆಗೆ ಕ್ರಮ ವಹಿಸಲಿ’ ಎಂದು ಆನಂದ ಅಸ್ನೋಟಿಕರ್ ಸವಾಲು ಹಾಕಿದ್ದಾರೆ. ನಗರದ ಮಾಲಾದೇವಿ ಮೈದಾನದಿಂದ ನೇತಾಜಿ ಸುಭಾಷ್ ವೃತ್ತದವರೆಗೆ ರ‍್ಯಾಲಿ ನಡೆಸಿದರು. ನಂತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಾವುಟ ಹಿಡಿಯುವುದು, ನಾಮ ಹಾಕಿಕೊಳ್ಳುವುದು ಹಿಂದು ಧರ್ಮದ ರಕ್ಷಣೆಯಲ್ಲ ಎಂದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಅಂಕೋಲಾದಲ್ಲಿ ರ‍್ಯಾಲಿ

ಆನಂದ ಅಸ್ನೋಟಿಕರ್ ಭಾನುವಾರ ಮಧ್ಯಾಹ್ನ ಅಂಕೋಲಾದಲ್ಲಿ ರ‍್ಯಾಲಿ ನಡೆಸಿದರು. ಶಾಂತಾ ದುರ್ಗಾ ದೇವಸ್ಥಾನದಿಂದ ಗಾಂಧಿ ಮಾರುಕಟ್ಟೆವರೆಗೆ ಮೆರವಣಿಗೆ ನಡೆಸಿದರು. ನಂತರ ಬಹಿರಂಗ ಸಭೆಯಲ್ಲಿ ಮಾತನಾಡಿ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ವಣವಾಗಬೇಕಿದೆ ಎಂದರು.

Leave a Reply

Your email address will not be published. Required fields are marked *