ಬಸ್ ನಿಲ್ದಾಣ, ಅಪಾಯದ ತಾಣ!

ಶಿರಸಿ: ನಗರದ ಹಳೇ ಬಸ್ ನಿಲ್ದಾಣದಲ್ಲಿ ಕುಳಿತ ಪ್ರಯಾಣಿಕರು ತಮ್ಮ ಬಸ್ ಬಂತೇ ಎಂದು ಮುಂದೆ ನೋಡುವುದಿಲ್ಲ. ತಲೆಯ ಮೇಲೆ ಏನಾದರೂ ಬಿದ್ದೀತೆಂಬ ಆತಂಕದಲ್ಲಿ ಮೇಲ್ಗಡೆ ನೋಡುತ್ತಿರುತ್ತಾರೆ !
ಹೌದು, ನಗರದ ಹಳೇ ಬಸ್ ನಿಲ್ದಾಣದ ಕಟ್ಟಡ ಈಗ ಶಿಥಿಲಾವಸ್ಥೆ ತಲುಪಿದೆ. ಕಟ್ಟಡದ ಛಾವಣಿಯ ಸಿಮೆಂಟ್ ತುಂಡಾಗಿ ಬೀಳುತ್ತಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಗುರುವಾರ ಮಧ್ಯಾಹ್ನ ನಿಲ್ದಾಣದ ಒಳಗೆ ಪುಸ್ತಕ ಅಂಗಡಿ ಸಮೀಪ ಛಾವಣಿಯ ಸಿಮೆಂಟ್ ಗಿಲಾಯಿ ತುಂಡಾಗಿ ಬಿದ್ದಿದೆ. ಕಟ್ಟಡದ ಮೇಲೆ ಬೆಳೆದ ಗಿಡಗಂಟಿಗಳನ್ನು ಸಿಬ್ಬಂದಿ ಹಲವು ಬಾರಿ ಕಡಿದಿದ್ದಾರೆ. ಆದರೂ ಗೋಡೆಗಳೊಳಗೆ ಬೇರು ಬಿಟ್ಟ ಕಾರಣ ಮತ್ತೆ ಚಿಗುರಿ ಸಂಪೂರ್ಣ ಕಟ್ಟಡವೇ ಶಿಥಿಲಗೊಂಡಿದೆ. ಛಾವಣಿಗೆ ಬಳಸಿದ ಕಬ್ಬಿಣ ತುಕ್ಕು ಹಿಡಿದು ತುಂಡಾಗುವ ಹಂತದಲ್ಲಿದೆ. ಬಸ್ ನಿಲ್ದಾಣದ ಒಳಗಿರುವ ಹೋಟೆಲ್​ನಲ್ಲಿಯೂ ನೀರು ತೊಟ್ಟಿಕ್ಕುತ್ತಿದ್ದು, ಗ್ರಾಹಕರು ಒದ್ದೆಯಾಗದಂತೆ ಕುಳಿತು ಚಹಾ ಹೀರಲು ಹರಸಾಹಸ ಪಡುತ್ತಿದ್ದಾರೆ!

1960ರ ಫೆ. 22ರಂದು ಅಂದಿನ ಮೈಸೂರು ಸರ್ಕಾರದ ಅರ್ಥ ಸಚಿವ ಜೆ.ಎಚ್. ಸಂಶುದ್ದೀನ್ ಈ ಕಟ್ಟಡ ನಿರ್ವಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 1961ರಲ್ಲಿ ಸಾರಿಗೆ ಸಚಿವ ಕೆ.ಎಫ್. ಪಾಟೀಲರು ಬಸ್ ನಿಲ್ದಾಣವನ್ನು ಉದ್ಘಾಟಿಸಿದ್ದರು. ನಂತರದ ವರ್ಷಗಳಲ್ಲಿ ನಗರ ಬೆಳೆದು, ಪ್ರಯಾಣಿಕರ ಸಂಖ್ಯೆ ಏರಿದೆ. ಹದಿನೈದು ವರ್ಷಗಳ ಹಿಂದೆ ಹುಲೇಕಲ್ ರಸ್ತೆಯಲ್ಲಿ ನೂತನ ವಿಶಾಲ ಬಸ್ ನಿಲ್ದಾಣ ನಿರ್ವಿುಸಿ ಉದ್ಘಾಟಿಸಲಾಗಿದೆ. ಹಳೇ ಬಸ್ ನಿಲ್ದಾಣವನ್ನು ನಗರ ಸಾರಿಗೆಗೆ ಮಾತ್ರ ಬಳಸಿಕೊಳ್ಳಬೇಕು ಎಂದು ನಿರ್ಧರಿಸಲಾಗಿತ್ತಾದರೂ ಉದ್ದೇಶ ಈಡೇರಿಲ್ಲ. ಪ್ರಯಾಣಿಕರು, ಅಂಗಡಿಕಾರರು ಹೊಸ ಬಸ್ ನಿಲ್ದಾಣಕ್ಕೆ ತೆರಳಿಲ್ಲ. ಇದರಿಂದಾಗಿ ವೇಗದೂತ, ಗ್ರಾಮೀಣ ಸಾರಿಗೆ ಸೇರಿದಂತೆ ಬಹುತೇಕ ಬಸ್​ಗೆ ಹಳೇ ನಿಲ್ದಾಣವೇ ಕೇಂದ್ರವಾಗಿದೆ. ಹೊಸ ಬಸ್ ನಿಲ್ದಾಣ ನಾಮ್ಕೆವಾಸ್ತೆಯಾಗಿ ಬಿಕೋ ಎನ್ನುತ್ತಿದೆ.

ಎಲ್ಲಿ ಹೋಯ್ತು ಏಳು ಕೋಟಿ ರೂಪಾಯಿ?

ಹಳೇ ಬಸ್ ನಿಲ್ದಾಣವನ್ನು ಕೆಡವಿ ಅದೇ ಜಾಗದಲ್ಲಿ ನೂತನ ಬಸ್ ನಿಲ್ದಾಣವನ್ನು ನಿರ್ವಿುಸುವ ಬಗೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 5 ಕೋಟಿ ರೂ. ಪ್ರಸ್ತಾವನೆಯನ್ನು ಕಳೆದ ವರ್ಷ ಸಿದ್ಧಪಡಿಸಿತ್ತು. ಜನಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರು ಶಿಥಿಲಾವಸ್ಥೆಯ ಈ ಬಸ್ ನಿಲ್ದಾಣವನ್ನು ಪರಿಶೀಲಿಸಿದ್ದರು. ಆ ಬಳಿಕ ಹಳೇ ಬಸ್ ನಿಲ್ದಾಣದ ಕುರಿತಂತೆ ರಾಜಕೀಯ ಪಕ್ಷಗಳಲ್ಲಿ ಜಿದ್ದಿನ ಕಸರತ್ತು ನಡೆದು ‘ಹಳೇ ಬಸ್ ನಿಲ್ದಾಣ ಕಟ್ಟಡಕ್ಕೆ 7 ಕೋಟಿ ರೂ. ಮಂಜೂರಾಗಿದೆ, ನಾವೇ ಮಂಜೂರು ಮಾಡಿಸಿದ್ದೇವೆ’ ಎಂದು ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ಕರೆದು ಹೇಳಿದ್ದರು. ವಾಸ್ತವದಲ್ಲಿ ಹಳೇ ಬಸ್ ನಿಲ್ದಾಣದ ಹೊಸ ಕಟ್ಟಡ ಪ್ರಸ್ತಾವನೆ ಇನ್ನೂ ಫೈಲ್ ರೂಪದಲ್ಲಿಯೇ ಇದೆ. ಇನ್ನು ಮೇಲಷ್ಟೇ ಮಂಜೂರಾಗಬೇಕಿದೆ. ಅಲ್ಲಿಯವರೆಗೂ ಪ್ರಯಾಣಿಕರು ಒಮ್ಮೆ ಬಸ್, ಇನ್ನೊಮ್ಮೆ ನಿಲ್ದಾಣದ ಛಾವಣಿ ನೋಡುತ್ತಲೇ ಇರಬೇಕಾಗಿದೆ!