ಬಸ್ ತಂಗುದಾಣದಲ್ಲಿ ಜ್ಞಾನ ಭಂಡಾರ

ಕುಮಟಾ: ಪ್ರಯಾಣಿಕರಲ್ಲಿ ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ತಾಲೂಕಿನ ಮೂರೂರಿನಲ್ಲಿ ನಿರ್ವಣವಾಗುತ್ತಿರುವ ಬಸ್ ತಂಗುದಾಣದಲ್ಲಿ ‘ಜ್ಞಾನ ಭಂಡಾರ’ ಎಂಬ ಕಪಾಟು ಅಳವಡಿಸ ಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಮೂರೂರಿನ ಕಲ್ಲಬ್ಬೆ ಮಾರ್ಗದ ಜೋಗಿಮನೆ ಕೇರಿ ಬಳಿ ಬಸ್ ತಂಗುದಾಣ ನಿರ್ವಿುಸಲಾಗುತ್ತಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ. ತಾಲೂಕು ಪಂಚಾಯಿತಿಯ 2017-18ನೇ ಸಾಲಿನ ಅನುದಾನದಡಿ 2 ಲಕ್ಷ ರೂ. ವೆಚ್ಚದಲ್ಲಿ ಬಸ್ ತಂಗುದಾಣ ಕಾಮಗಾರಿ ನಡೆದಿದೆ. ತಂಗುದಾಣ ದಲ್ಲಿ ಸಂಪೂರ್ಣ ಟೈಲ್ಸ್ ಅಳವಡಿಸಿ ಸುಂದರವಾಗಿ ನಿರ್ವಿುಸಲಾಗಿದೆ. ಮುಂಭಾಗದಲ್ಲಿ ಸ್ಟೀಲ್​ಗ್ರಿಲ್ ಅಳವಡಿಸುವ ಕಾರ್ಯ ಬಾಕಿ ಇದೆ. ವಿಶೇಷವಾಗಿ ಈ ತಂಗುದಾಣದಲ್ಲಿ ಬಸ್​ಗಾಗಿ ಕಾಯುವ ಪ್ರಯಾಣಿಕರಿಗೆ ಓದಲು ಸ್ಥಳೀಯ ತಾಪಂ ಸದಸ್ಯ ಬಾಲಕೃಷ್ಣ ನಾಯ್ಕ ಅವರು ‘ಜ್ಞಾನ ಭಂಡಾರ’ವೆಂಬ ಕಪಾಟು ಅಳವಡಿಸಿದ್ದಾರೆ. ಇಲ್ಲಿ ದಿನಪತ್ರಿಕೆ, ವಾರಪತ್ರಿಕೆ, ಕತೆ, ಕವನ ಸಹಿತ ಇತರ ಮಹತ್ವದ ಪುಸ್ತಕಗಳನ್ನು ಇಡಲಾಗುತ್ತದೆ. ಇದರಿಂದ ಪ್ರೇರಣೆಗೊಂಡ ಪ್ರಯಾಣಿಕರೂ ತಮಗೆ ಇಷ್ಟವಾದ ಪುಸ್ತಕಗಳನ್ನು ತಂದು ಇರಿಸುತ್ತಾರೆ ಮತ್ತು ಮೂರ್ನಾಲ್ಕು ದಿನಗಳ ನಂತರ ಒಯ್ಯುತ್ತಾರೆ. ಹೀಗಾಗಿ ಇನ್ನೂ ಅಧಿಕೃತ ಉದ್ಘಾಟನೆಯಾಗದ ಬಸ್ ತಂಗುದಾಣ ಚಿಕ್ಕ ಗ್ರಂಥಾಲಯದಂತೆ ಜ್ಞಾನ ಪ್ರಸಾರದ ಕಾರ್ಯ ಆರಂಭಿಸಿದೆ.

ಸದ್ಯ ತಂಗುದಾಣದ ಮುಂದಿನ ಗ್ರಿಲ್ ಆಳವಡಿಕೆಗೆ ಹಣಕಾಸಿನ ಮುಗ್ಗಟ್ಟು ಎದುರಾಗಿದೆ. ಹಾಗೆಯೇ ಮೂರೂರಿನ ಅಂಗಡಿಕೇರಿಯಲ್ಲಿರುವ ಹಳೆಯ ಗ್ರಂಥಾಲಯವನ್ನೂ ಹೈಟೆಕ್ ಮಾದರಿ ಯಲ್ಲಿ ನಿರ್ವಿುಸಿ ನಿತ್ಯ ನೂರಾರು ಓದುಗರನ್ನು ಆಕರ್ಷಿಸುವ ಆಶಯ ಬಾಲಕೃಷ್ಣ ನಾಯ್ಕರದ್ದಾಗಿದೆ. ಇದಕ್ಕೆ ಸರ್ಕಾರದ ನೆರವು ಹಾಗೂ ಜನರ ಸಹಕಾರವೂ ಅಗತ್ಯವಿದೆ.

ಜನರಲ್ಲಿ ಓದುವ ಹವ್ಯಾಸ ಬೆಳೆಸುವುದರೊಂದಿಗೆ ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳಬೇಕು. ಟೈಂಪಾಸ್​ಗೆ ಮೊಬೈಲ್ ಬದಲು ಕೈಯಲ್ಲಿ ಪುಸ್ತಕವಿರಲಿ ಎಂಬ ಉದ್ದೇಶದಿಂದ ಹೊಸ ಪ್ರಯೋಗ ಮಾಡಿದ್ದೇನೆ. ನಿರೀಕ್ಷೆ ಮೀರಿದ ಸ್ಪಂದನೆ ಜನರಿಂದ ವ್ಯಕ್ತವಾಗಿದೆ. | ಬಾಲಕೃಷ್ಣ ನಾಯ್ಕ ತಾಪಂ ಸದಸ್ಯ, ಮೂರೂರು

Leave a Reply

Your email address will not be published. Required fields are marked *