ಬಸ್-ಕಾರು ಅಪಘಾತದಲ್ಲಿ ತಿಪಟೂರಿನ ನಾಲ್ವರ ಸಾವು

ತುರುವೇಕೆರೆ: ಬದರಿಕಾಶ್ರಮ ಗೇಟ್ ಬಳಿ ಶನಿವಾರ ಸಂಜೆ ಕೆಎಸ್​ಆರ್​ಟಿಸಿ ಬಸ್ ಹಾಗೂ ಸ್ಯಾಂಟ್ರೋ ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಒರ್ವ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ.

ತಿಪಟೂರು ತಾಲೂಕಿನ ಈಚನೂರು ಕಾವಲು ಗ್ರಾಮದ ಹೇಮಂತ್(45), ಶಿವಣ್ಣ (55) ಹಾಗೂ ಹುಚ್ಚಗೊಂಡನಹಳ್ಳಿ ಯತೀಶ್ (38) ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಹುಲುಕಟ್ಟೆಯ ಲಿಡೋಚಂದ್ರಯ್ಯ (55) ಮೃತಪಟ್ಟಿದ್ದಾನೆ. ಈಜನೂರಿನ ನಟರಾಜು ತಲೆಗೆ ತೀವ್ರ ಪೆಟ್ಟಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರಿನ ಆದಿ ಚುಂಚನಗಿರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಶಿವಮೊಗ್ಗದಿಂದ ನಾಗಮಂಗಲ ಕಡೆಗೆ ತೆರಳುತ್ತಿದ್ದ ನಾಗಮಂಗಲ ಡಿಪೋಗೆ ಸೇರಿದ ಬಸ್ ಹಾಗೂ ಮಾಯಸಂದ್ರ ಕಡೆಯಿಂದ ತುರುವೇಕೆರೆ ಕಡೆಗೆ ಹೊರಟಿದ್ದ ಕಾರು ಬದರಿಕಾಶ್ರಮ ಸಮೀಪದ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡು ಮೂವರು ಸ್ಥಳದಲ್ಲೇ ಮೃತರಾಗಿದ್ದಾರೆ. ಕಾರಿನಲ್ಲಿ ಸಿಲುಕಿಕೊಂಡಿದ್ದ ಚಾಲಕನ ಮೃತದೇಹವನ್ನು ಹಾರೆಯಿಂದ ಮೀಟಿ ಹೊರ ತೆಗೆಯಲಾಯಿತು.

ಪಂಚಾಯ್ತಿ ಮಾಡಲು ತೆರಳಿದ್ದರು: ಮೃತ ಶಿವಣ್ಣ ಹಾಗೂ ನಾಲ್ವರು ಸ್ನೇಹಿತರು ವಿವಾದವೊಂದರ ಕುರಿತು ಪಂಚಾಯಿತಿ ಮಾಡಲು ಬೆಳಗ್ಗೆಯೇ ಮನೆಯಿಂದ ಕಾರಿನಲ್ಲಿ ತೆರಳಿದ್ದರು ಎನ್ನಲಾಗಿದ್ದು, ಆದರೆ ಯಾವ ಗ್ರಾಮಕ್ಕೆ ತೆರಳಿದ್ದರು ಎಂಬ ಮಾಹಿತಿ ಗೊತ್ತಾಗಿಲ್ಲ.

ಟ್ರಾಫಿಕ್ ಜಾಮ್: ಶನಿವಾರ ಸಂಜೆ 6 ಗಂಟೆ ವೇಳೆಗೆ ಅಪಘಾತ ಸಂಭವಿಸಿದ್ದು, ಇದರಿಂದ ಬೀದರ್-ಶ್ರೀರಂಗಪಟ್ಟಣ ರಸ್ತೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳಕ್ಕಾಮಿಸಿದ ಪೊಲೀಸರು ಸಂಚಾರ ಸುಗಮಗೊಳಿಸಲು ಹರಸಾಹಸ ಪಡಬೇಕಾಯಿತು. ಮೃತ ದೇಹವನ್ನು ಸಾರ್ವಜನಿಕರ ಸಹಕಾರದಿಂದ ಆಸ್ಪತ್ರೆಗೆ ಸಾಗಿಸಿದರು.

ಸಂಬಂಧಿಕರ ಆಕ್ರಂದನ: ಅಪಘಾತ ಸುದ್ದಿ ತಿಳಿದ ಮೃತರ ಕುಟುಂಬ ಹಾಗೂ ಸಂಬಂಧಿಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ್ದರು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದು ನೂರಾರು ಸಾರ್ವಜನಿಕರು ಆಸ್ಪತ್ರೆಗೆ ಮುಂದೆ ಜಮಾಯಿಸಿದ್ದರು. ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *