ಬಸ್ ಇಲ್ಲದೇ ಪ್ರಯಾಣಿಕರ ಪರದಾಟ

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾರಿಗೆ ಬಸ್​ಗಳು ಇಲ್ಲದೇ ಇಲ್ಲಿನ ಹೊಸ ಬಸ್ ನಿಲ್ದಾಣ ಹಾಗೂ ಹಳೇ ಬಸ್ ನಿಲ್ದಾಣದಲ್ಲಿ ಸೋಮವಾರ ಪ್ರಯಾಣಿಕರು ತೀವ್ರವಾಗಿ ಪರದಾಡುವಂತಾಗಿತ್ತು.

ಏ.23ರಂದು ಮತದಾನ ಪ್ರಕ್ರಿಯೆ ಇರುವ ಕಾರಣ ವಾಕರಸಾ ಸಂಸ್ಥೆ ಧಾರವಾಡ ಜಿಲ್ಲೆಯಲ್ಲಿ 180 ಬಸ್​ಗಳನ್ನು ಚುನಾವಣೆಗೆ ನಿಯೋಜಿಸಿದೆ. ಹೀಗಾಗಿ, ಬಸ್​ಗಳ ಸಂಖ್ಯೆ ತೀರಾ ವಿರಳವಾಗಿತ್ತು. ಗದಗ, ಹಾವೇರಿ, ರಾಣೆಬೆನ್ನೂರು, ಶಿರಸಿ, ಬೆಳಗಾವಿ, ಬೆಂಗಳೂರು, ಮಂಗಳೂರು, ಕಾರವಾರ, ವಿಜಯಪುರ, ಮತ್ತಿತರ ಊರುಗಳ ಕಡೆಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿತ್ತು.

ಹಳೇ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಬಸ್​ಗಾಗಿ ಕಾದು ಕುಳಿತಿದ್ದರು. ಆಗೊಂದು ಈಗೊಂದು ಬಸ್ ಬರುತ್ತಿದ್ದಂತೆ ಬಸ್​ಗೆ ಮುತ್ತಿಗೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ತೀರಾ ತೊಂದರೆ ಅನುಭವಿಸಿದರು.

ನಿಯಂತ್ರಕರಿಗೆ ಮುತ್ತಿಗೆ : ಬಸ್ ಸೌಲಭ್ಯ ಇಲ್ಲದ ಕಾರಣ ರೊಚ್ಚಿಗೆದ್ದ ಪ್ರಯಾಣಿಕರು ನಿಲ್ದಾಣದ ನಿಯಂತ್ರಕರ ಕಚೇರಿಗೆ ಮುತ್ತಿಗೆ ಹಾಕಿದರು. ಸಾರಿಗೆ ನಿಯಂತ್ರಕರೊಂದಿಗೆ ವಾಗ್ವಾದ ನಡೆಸಿದರು. ಮತದಾನ ಮಾಡಲೆಂದು ಊರಿಗೆ ತೆರಳುತ್ತಿದ್ದೇವೆ. ಬಸ್ ಒದಗಿಸಿ ಎಂದು ಒತ್ತಾಯಿಸಿದರು.