ಬಸ್​ನಲ್ಲಿ ವೃದ್ಧನ ಅಸಭ್ಯ ವರ್ತನೆ

ಲಕ್ಷ್ಮೇಶ್ವರ: ವಿಶ್ವ ಮಹಿಳಾ ದಿನಾಚರಣೆ ದಿನವೇ ಬಸ್​ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ವೃದ್ಧನನ್ನು ಸಹ ಪ್ರಯಾಣಿಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ಪಟ್ಟಣದಲ್ಲಿ ನಡೆದಿದೆ.

ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಘಟನೆ ನಡೆದಿದೆ. ಲಕ್ಷ್ಮೇಶ್ವರ ಸಾರಿಗೆ ಘಟಕದ ಮೇಲ್ವಿಚಾರಕ ಎಸ್.ಬಿ. ಕುಲಕರ್ಣಿ (60) ಎಂಬುವವರೇ ಅಸಭ್ಯವಾಗಿ ವರ್ತಿಸಿದ ಭೂಪ. ಹುಬ್ಬಳ್ಳಿ-ಲಕ್ಷೆ್ಮೕಶ್ವರ ಬಸ್​ನಲ್ಲಿ ಕುಳಿತಿದ್ದ ಮಹಿಳೆಯ ಪಕ್ಕದಲ್ಲಿ ಕುಳಿತು ಅಸಭ್ಯವಾಗಿ ವರ್ತಿಸಿದ್ದಾರೆ. ಇದರಿಂದ ಬೇಸರಗೊಂಡ ಮಹಿಳೆ ಎದ್ದು ಬೇರೆ ಸೀಟ್​ನಲ್ಲಿ ಕುಳಿತಿದ್ದಾರೆ. ಆದರೂ ಬಿಡದ ಈತ ತನ್ನ ವಿಕೃತ ವರ್ತನೆ ಮುಂದುವರಿಸಿದಾಗ ವಿಚಲಿತಳಾದ ಮಹಿಳೆ ಎದ್ದು ನಿಂತು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಷಯ ಅರಿತ ಸಹ ಪ್ರಯಾಣಿಕರೆಲ್ಲರೂ ಅಸಭ್ಯ ವರ್ತನೆ ತೋರಿದ ವೃದ್ಧ ಕುಲಕರ್ಣಿಗೆ ಧರ್ಮದೇಟು ನೀಡಲು ಮುಂದಾಗಿದ್ದಾರೆ. ಕೆಲವರು ವಯಸ್ಸಾಗಿದೆ ಬಿಟ್ಟು ಬಿಡ್ರಿ, ಸತ್ತು ಗಿತ್ತು ಹೋದಾನು ಎಂದು ಬಿಡಿಸಿದ್ದಾರೆ. ಬಳಿಕ ಈತನನ್ನು ಲಕ್ಷ್ಮೇಶ್ವರ ಬಸ್ ಘಟಕಕ್ಕೆ ತಂದಿಳಿಸಿ ನಿಂದಿಸಿ ಎಚ್ಚರಿಕೆಯನ್ನೂ ನೀಡಿ ತೆರಳಿದ್ದಾರೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ‘ವಯಸ್ಸು ಅರವತ್ತಾದರೂ ಹುಮ್ಮಸ್ಸು ಮಾತ್ರ ಇಪ್ಪತ್ತರ ಕಾಮುಕನದ್ದು’ ಎಂಬ ಶೀರ್ಷಿಕೆಯಡಿ ಸುದ್ದಿ ಸದ್ದು ಮಾಡುತ್ತಿದೆ.