ಬಸ್​ಗಾಗಿ ವಿದ್ಯಾರ್ಥಿಗಳ ಪರಿತಾಪ

ಸಿದ್ದಾಪುರ: ತಾಲೂಕಿನ ಹಲವೆಡೆ ಅಸಮರ್ಪಕ ಸಾರಿಗೆ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜ್​ಗೆ ತೆರಳಲಾಗದೇ ಪರಿತಪಿಸುವಂತಾಗಿದೆ.

ತಾಲೂಕಿನಲ್ಲಿ ಸಾರಿಗೆ ಅವ್ಯವಸ್ಥೆ ಈ ವರ್ಷ ಹೊಸದೆನಲ್ಲ. ಹಲವು ವರ್ಷಗಳಿಂದ ಸಮಸ್ಯೆ ಇದ್ದರೂ ಕಾಟಾಚಾರಕ್ಕೆ ಎನ್ನುವಂತೆ ಸಾರಿಗೆ ಅಧಿಕಾರಿಗಳು ಸಮಸ್ಯೆ ಪರಿಹರಿಸಿದ್ದಾರೆಯೇ ಹೊರತು ಶಾಶ್ವತ ಪರಿಹಾರಕ್ಕೆ ಮುಂದಾಗದೇ ಇರುವುದರಿಂದ ವರ್ಷದಿಂದ ವರ್ಷಕ್ಕೆ ಸಮಸ್ಯೆ ಹೆಚ್ಚು ಉಲ್ಬಣವಾಗುತ್ತಿದೆ.

ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ಸಂಚಾರದ ಸಮಯವನ್ನು ಸ್ವಲ್ಪ ಮಟ್ಟಿಗೆ ಹೊಂದಿಸಿಕೊಳ್ಳುವಂತೆ ಹಾಗೂ ಕೆಲವು ಮಾರ್ಗದಲ್ಲಿ ಹೆಚ್ಚುವರಿ ಬಸ್ ಬಿಡುವಂತೆಯೂ ತಾ.ಪಂ. ಮಾಸಿಕ ಕೆಡಿಪಿ ಮತ್ತು ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಲ್ಲದೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಅಧಿಕಾರಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಆದೇಶಿಸಿದ್ದರು.

ಸಿದ್ದಾಪುರ-ಶಿರಸಿ ಮಾರ್ಗದಲ್ಲಿ ನಿತ್ಯ ಶಿರಸಿ, ಸಿದ್ದಾಪುರ ಹಾಗೂ ಸಾಗರದ ವಿವಿಧ ಶಾಲಾ-ಕಾಲೇಜಿಗೆ ತೆರಳುವ ಏಳು ನೂರಕ್ಕೂ ಹೆಚ್ಚು, ಸಿದ್ದಾಪುರ-ಸಾಗರ ಮಾರ್ಗದಿಂದ ಪಟ್ಟಣದ ವಿವಿಧ ಶಾಲಾ-ಕಾಲೇಜುಗಳಿಗೆ ತೆರಳುವ ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಬಸ್​ಗಾಗಿ ಕಾಯುತ್ತಾರೆ. ಈ ವೇಳೆ ಬಸ್​ಗೆ ಕೈ ಮಾಡಿದರೂ ಪ್ರಯೋಜನ ಇಲ್ಲದೇ ಕೆಲವರು ಖಾಸಗಿ ವಾಹನ ಏರಿ ಶಾಲಾ-ಕಾಲೇಜಿಗೆ ತೆರಳಿದರೆ ಹಲವು ವಿದ್ಯಾರ್ಥಿಗಳು ಮನೆ ದಾರಿ ಹಿಡಿಯುವಂತಾಗಿದೆ.

ನಿತ್ಯ ಸಾಗರ-ಸಿದ್ದಾಪುರ-ಶಿರಸಿ ಮಾರ್ಗದಲ್ಲಿ ತಡೆರಹಿತ ವಾಹನ ಬಿಟ್ಟು ಶಿರಸಿ ಹಾಗೂ ಸಾಗರ ಡಿಪೋದ ಬಸ್​ಗಳು ಸಂಚರಿಸುತ್ತಿವೆ. ಶಿರಸಿ ಡಿಪೋದ ಕೆಲವು ಬಸ್​ಗಳನ್ನು ನಿಲ್ಲಿಸಿದರೆ ಇನ್ನು ಕೆಲವು ಬಸ್ ನಿಲ್ಲಿಸುವುದಿಲ್ಲ. ಆದರೆ, ಸಾಗರ ಡಿಪೋದ ಬಸ್​ಗಳನ್ನು ನಿಲ್ಲಿಸದೇ ತಡೆರಹಿತ ಬಸ್​ನಂತೆ ಸಂಚರಿಸುತ್ತಿರುವುದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಸಂಕಟ ಅನುಭವಿಸುವಂತಾಗಿದೆ.

ಈಗಾಗಲೇ ತಾಲೂಕಿನ ಹಲವು ಕಡೆಗಳಲ್ಲಿ ವಿದ್ಯಾರ್ಥಿಗಳು-ಪಾಲಕರು- ಸಾರ್ವಜನಿಕರು ಪ್ರತಿಭಟನೆ ನಡಿಸಿದ್ದರೂ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ಪ್ರತಿಭಟನೆ ಎಚ್ಚರಿಕ ಸಿದ್ದಾಪುರ-ಸಾಗರ ಮಾರ್ಗದ ಗೋಳಗೋಡ ಸುತ್ತಮುತ್ತಲಿನ ಪಾಲಕರು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು, ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಸರಿಪಡಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಮನವಿಗೆ ಸ್ಪಂದನೆ ಸಿಗದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎನ್ನುವ ಎಚ್ಚರಿಕೆಯ ಮನವಿಯನ್ನು ನೀಡಿದ್ದಾರೆ.

ಶಿರಸಿ ಡಿಪೋದ ಎಲ್ಲ ಬಸ್​ಗಳನ್ನು ಶಿರಸಿಯಿಂದ ಸಾಗರದವರೆಗೆ ಎಲ್ಲ ನಿಲ್ದಾಣಗಳಲ್ಲೂ ನಿಲ್ಲಿಸಲಾಗುತ್ತಿದೆ. ಆದರೆ, ಸಾಗರ ಡಿಪೋದ ಬಸ್ ನಿಲ್ಲಿಸದೇ ಇರುವುದರಿಂದ ತೊಂದರೆ ಆಗುತ್ತಿದೆ. ಬಸ್ ನಿಲ್ಲಿಸುವಂತೆ ಅಲ್ಲಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಾಗರ ಡಿಪೋದವರಿಗೆ ತಿಳಿಸಿದ್ದಲ್ಲದೇ ವಾಟ್ಸ್ ಆಪ್ ಮೂಲಕ ಸಾರ್ವಜನಿಕರು ನೀಡಿರುವ ಪ್ರತಿಭಟನೆಯ ಮನವಿಯನ್ನು ಕಳುಹಿಸಿದ್ದೇನೆ. | ರವೀಂದ್ರ, ಶಿರಸಿ ಡಿಪೋ ಮ್ಯಾನೇಜರ್.

ಸಾಗರ ಡಿಪೋದ ಬಸ್​ಗಳನ್ನು ಎಲ್ಲ ಕಡೆ ನಿಲ್ಲಿಸಲಾಗುತ್ತಿದೆ. ಒಮ್ಮೆ ನಿಲ್ಲಿಸದಿದ್ದರೆ ಈ ಕುರಿತು ಚಾಲಕರಿಗೆ ಬಸ್ ನಿಲ್ಲಿಸುವಂತೆ ತಿಳಿಸಲಾಗುವುದು. ಈಗಾಗಲೇ ಗೋಳಗೋಡ, ಅಕ್ಕುಂಜಿ ಭಾಗದ ವಿದ್ಯಾರ್ಥಿಗಳು, ಪಾಲಕರು ಮನವಿ ನೀಡಿದ್ದಾರೆ. | ನೇಮಪ್ಪ, ಸಾಗರ ಡಿಪೋ ಸಾರಿಗೆ ಅಧಿಕಾರಿ

ಬಸ್ ನಿಲ್ಲಿಸದೇ ಇರುವುದರಿಂದ ಬಸ್ ಪಾಸ್ ಇದ್ದರೂ ಪ್ರಯೋಜನವಾಗುತ್ತಿಲ್ಲ. ಖಾಸಗಿ ವಾಹನ ಅವಲಂಬಿಸಬೇಕಾಗಿದೆ. ವ್ಯವಸ್ಥೆ ಸರಿಪಡಿಸುವುದಕ್ಕೆ ಅಧಿಕಾರಿಗಳು ಮುಂದಾಗಬೇಕು. | ಗೋಳಗೋಡ, ಅಕ್ಕುಂಜಿ ಭಾಗದ ವಿದ್ಯಾರ್ಥಿಗಳು.

Leave a Reply

Your email address will not be published. Required fields are marked *